ವಿಜಯಪುರ: 'PUC ಪಶ್ನೆಪತ್ರಿಕೆ ಲೀಕ್ ಆಗಿಲ್ಲ, 7 ವಿದ್ಯಾರ್ಥಿಗಳು ಡಿಬಾರ್'
ನಕಲಿಗೆ ಸಹಕರಿಸುತ್ತಿದ್ದ ವ್ಯಕ್ತಿ ಹಾಗೂ ವಿದ್ಯಾರ್ಥಿ ವಶ| ಪರೀಕ್ಷಾ ಅಕ್ರಮದಲ್ಲಿ ತೊಡಗಿದ್ದ ಏಳು ವಿದ್ಯಾರ್ಥಿಗಳು ಡಿಬಾರ್| ಕರ್ತವ್ಯಲೋಪ ಹಿನ್ನೆಲೆಯಲ್ಲಿ ಮೇಲ್ವಿಚಾರಕಿ ಅಮಾನತಿಗೆ ಶಿಫಾರಸು| ವಿಜಯಪುರ ಜಿಲ್ಲೆ ಇಂಡಿ ಪಟ್ಟಣದ ಶಾಂತೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ನಕಲು|
ವಿಜಯಪುರ(ಮಾ.05): ಜಿಲ್ಲೆಯ ಇಂಡಿಯ ಶಾಂತೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿಲ್ಲ. ಅಲ್ಲಿ ನಡೆದಿದ್ದು ನಕಲು. ಪ್ರಶ್ನೆ ಪತ್ರಿಕೆಯನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದು, ವಿದ್ಯಾರ್ಥಿ ನಕಲಿಗೆ ಸಹಕರಿಸುತ್ತಿದ್ದ ಓರ್ವ ವ್ಯಕ್ತಿ ಹಾಗೂ ವಿದ್ಯಾರ್ಥಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಜೊತೆಗೆ ಕರ್ತವ್ಯಲೋಪ ಹಿನ್ನೆಲೆಯಲ್ಲಿ ಮೇಲ್ವಿಚಾರಕಿಯನ್ನು ಸಹ ಅಮಾನತು ಮಾಡುವಂತೆ ಶಿಫಾರಸು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ತಿಳಿಸಿದ್ದಾರೆ.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂಡಿಯ ಶಾಂತೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ಪರೀಕ್ಷೆ ಆರಂಭಗೊಂಡು ಒಂದು ಗಂಟೆ ನಂತರ ವ್ಯಕ್ತಿಯೋರ್ವ ಹಿಂಭಾಗಕ್ಕೆ ಹೊಂದಿಕೊಂಡಿರುವ ಕಾಂಪೌಂಡ್‌ನಿಂದ ಜಿಗಿದು ಪರೀಕ್ಷಾ ಕೇಂದ್ರಕ್ಕೆ ಅಕ್ರಮ ಪ್ರವೇಶ ಮಾಡಿ ನಕಲಿಗೆ ಸಹಕರಿಸುತ್ತಿದ್ದ ಎನ್ನಲಾಗಿದೆ. ಈ ವ್ಯಕ್ತಿಯನ್ನು ಭಾಗಪ್ಪ ಸಗರ ಎಂದು ಗುರುತಿಸಲಾಗಿದ್ದು, ನಕಲು ಮಾಡುತ್ತಿದ್ದ ಮುರುಗೇಂದ್ರ ಹಿರೇಮಠ ಅವರಿಬ್ಬರನ್ನೂ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಹೇಳಿದರು.
ದ್ವಿತೀಯ ಪಿಯುಸಿ ಪರೀಕ್ಷೆ ; ಭೌತಶಾಸ್ತ್ರ ಪ್ರಶ್ನೆ ಪತ್ರಿಕೆ ಲೀಕ್!
ವಶಕ್ಕೆ ಪಡೆದುಕೊಂಡವರ ಮೇಲೆ ಕರ್ನಾಟಕ ಶಿಕ್ಷಣ ಕಾಯ್ದೆ 24(ಎ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಅದೇ ತೆರನಾಗಿ ಪರೀಕ್ಷಾ ಕೇಂದ್ರದಲ್ಲಿ ಮೇಲ್ವಿಚಾರಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಎಂ.ಡಿ.ನಾರಾಯಣಕರ ಅವರನ್ನು ಅಮಾನತು ಮಾಡುವಂತೆ ಶಿಫಾರಸು ಮಾಡಲಾಗಿದೆ ಎಂದು ತಿಳಿಸಿದರು.
ಆ ಪರೀಕ್ಷಾ ಕೇಂದ್ರವನ್ನು ಅತ್ಯಂತ ಸೂಕ್ಷ್ಮ ಪರೀಕ್ಷಾ ಕೇಂದ್ರ ಎಂದು ಗುರುತಿಸಲಾಗಿದೆ. ಅಲ್ಲಿ ಬಿಗಿ ಬಂದೋಬಸ್ತ್ ಸಹ ಕೈಗೊಳ್ಳಲಾಗಿತ್ತು. ಆದರೆ ಖಾಸಗಿ ಮನೆಗೆ ಹೊಂದಿಕೊಂಡಿದ್ದ ದೊಡ್ಡ ಕಾಂಪೌಂಡ್ ಮೂಲಕ ಆ ವ್ಯಕ್ತಿ ಜಿಗಿದು ಪರೀಕ್ಷಾ ಕೇಂದ್ರವನ್ನು ಪ್ರವೇಶಿಸಿದ್ದಾನೆ. ಈ ಬಗ್ಗೆ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ದ್ವಿತೀಯ ಪಿಯುಸಿ ಪರೀಕ್ಷೆ ಜಿಲ್ಲೆಯಾದ್ಯಂತ ಸುಸೂತ್ರವಾಗಿ ನಡೆಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಚುನಾವಣೆ ಮಾದರಿಯಲ್ಲಿ ಸ್ಟ್ರಾಂಗ್ ರೂಂನಲ್ಲಿ ಪ್ರಶ್ನೆಪತ್ರಿಕೆ ಇರಿಸಿ ಪೂರೈಸಲಾಗುತ್ತಿದೆ. ಇಂಡಿಯಲ್ಲಿ ಯಾವುದೇ ರೀತಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿಲ್ಲ. ಪ್ರಶ್ನೆಪತ್ರಿಕೆ ಪೂರೈಕೆಯಾಗಿ ಒಂದು ಗಂಟೆ ನಂತರ ಪೊಲೀಸ್ ವಶದಲ್ಲಿರುವ ವ್ಯಕ್ತಿ ಪರೀಕ್ಷಾ ಕೇಂದ್ರ ಪ್ರವೇಶಿಸಿ ನಕಲಿಗೆ ಸಹಕರಿಸುತ್ತಿದ್ದ ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ ಎಂದು ಸ್ಪಷ್ಟಪಡಿಸಿದರು.
ಇದೇ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷಾ ಅಕ್ರಮದಲ್ಲಿ ತೊಡಗಿದ್ದ ಏಳು ವಿದ್ಯಾರ್ಥಿಗಳನ್ನು ಡಿಬಾರ್ ಮಾಡಲಾಗಿದೆ ಎಂದರು. ಈ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ ಅಗರವಾಲ, ಡಿಡಿಪಿಯು ಜೆ.ಎಸ್. ಪೂಜೇರಿ ಮುಂತಾದವರು ಇದ್ದರು.