3.5 ತಾಸು ತೊಂದರೆ, ಮಧ್ಯಾಹದ ಬಳಿಕ ಸಂಚಾರ ಸುಸ್ಥಿತಿಗೆ, ಒಂದೇ ಟ್ರ್ಯಾಕ್‌ನಲ್ಲಿ ರೈಲು ಓಡಾಟ

ಬೆಂಗಳೂರು(ಸೆ.16):  ನಮ್ಮ ಮೆಟ್ರೋ ನಿಗಮದ ನೇರಳೆ ಮಾರ್ಗದ ಕೆಂಗೇರಿ-ಮೈಸೂರು ರಸ್ತೆಯ ಹಳಿಯಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬೆಳಗ್ಗೆ 8.30ರಿಂದ ಮಧ್ಯಾಹ್ನ 12ರವರೆಗೆ ಮೆಟ್ರೋ ಸಂಚರಿಸದೇ ಪ್ರಯಾಣಿಕರು ತೊಂದರೆಗೀಡಾದರು. ತಾಂತ್ರಿಕ ಸಮಸ್ಯೆ ಇದ್ದ ಹಿನ್ನೆಲೆಯಲ್ಲಿ ಒಂದೇ ಹಳಿಯ ಮೇಲೆ ಮೆಟ್ರೋ ಓಡಾಟ ನಡೆಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿತ್ತು. ದಿನ ನಿತ್ಯ 5ರಿಂದ 10 ನಿಮಿಷಕ್ಕೆ ಒಂದರಂತೆ ಓಡಾಡುತ್ತಿದ್ದ ಮೆಟ್ರೋ, ತಾಂತ್ರಿಕ ಸಮಸ್ಯೆಯಿಂದಾಗಿ 25ರಿಂದ 30 ನಿಮಿಷಕ್ಕೆ ಒಂದರಂತೆ ಓಡಾಡುತ್ತಿದ್ದವು. ಬೆಳಗ್ಗೆ 8.30ರಿಂದ 10ರವರೆಗೆ ಕಚೇರಿ ಸೇರಿದಂತೆ ವಿವಿಧ ಕಡೆಗೆ ಕೆಲಸಕ್ಕೆ ಹೋಗುವ ಜನರು ತೀವ್ರ ಸಮಸ್ಯೆಗೆ ಒಳಗಾದರು.

ಮೈಸೂರು ರಸ್ತೆಯಿಂದ ಬೈಯ್ಯಪ್ಪನಹಳ್ಳಿವರೆಗಿನ ಮೆಟ್ರೋ ಸೇವೆ ಅಬಾಧಿತವಾಗಿತ್ತು. ಮಧ್ಯಾಹ್ನ 12ಕ್ಕೆ ಸಮಸ್ಯೆ ಪರಿಹಾರಗೊಂಡ ನಂತರ ಕೆಂಗೇರಿ ಮತ್ತು ಮೈಸೂರು ರಸ್ತೆಯ ಮಧ್ಯೆಯ ಸಂಚಾರ ಸಾಮಾನ್ಯ ಸ್ಥಿತಿಗೆ ಬಂದಿತು.

ಬೆಂಗಳೂರು: ಇನ್ಮುಂದೆ ನಮ್ಮ ಮೆಟ್ರೋ ಟಿಕೆಟ್ ಮೊಬೈಲ್‌ನಲ್ಲೇ ಲಭ್ಯ..!

ಸರ್ಕಾರಕ್ಕೆ ಮೆಟ್ರೋ 3ನೇ ಹಂತದ ಡಿಪಿಆರ್‌ ಸಲ್ಲಿಕೆ

ನಮ್ಮ ಮೆಟ್ರೋ ನಿಗಮವು ತನ್ನ ಮೂರನೇ ಹಂತದ ಯೋಜನೆಯ ವಿಸ್ತ್ರತ ಯೋಜನಾ ವರದಿಯನ್ನು (ಡಿಪಿಆರ್‌) ರಾಜ್ಯ ಸರ್ಕಾರಕ್ಕೆ ಸಲ್ಲಿಸಿದೆ. ಜೆಪಿ ನಗರ ನಾಲ್ಕನೇ ಹಂತದಿಂದ ಕೆಂಪಾಪುರದ ಮಧ್ಯೆ 32.15 ಕಿ.ಮೀ., ಹೊಸಹಳ್ಳಿಯಿಂದ ಕಡಬಗೆರೆ ತನಕ 12.5 ಕಿ.ಮೀ. ಹೀಗೆ ಒಟ್ಟು 44.65 ಕಿ.ಮೀಗಳ ಮಾರ್ಗವನ್ನು ಡಿಪಿಆರ್‌ನಲ್ಲಿ ಉಲ್ಲೇಖಿಸಲಾಗಿದೆ. 2028ರ ವೇಳೆಗೆ ಯೋಜನೆ ವೆಚ್ಚ .16,333 ಕೋಟಿಗೆ ತಲುಪಲಿದೆ. ಯೋಜನೆಗೆ ಏಷ್ಯನ್‌ ಡೆವಲಪ್‌ಮೆಂಟ್‌ ಬ್ಯಾಂಕ್‌ನಿಂದ ನೆರವಿನ ನಿರೀಕ್ಷೆಯನ್ನು ಮೆಟ್ರೋ ನಿಗಮ ಹೊಂದಿದೆ.