ಮೂಡಿಗೆರೆ: ಕಾಡಿನಿಂದ ನಾಡಿಗೆ ಬರುವ ಕಾಡುಬೆಕ್ಕು ಸರಣಿಯಾಗಿ ಸಾವನ್ನಪ್ಪುತ್ತಿದ್ದು, ಕಾಡು ಪ್ರಾಣಿಗಳಲ್ಲಿ ಮಂಗನ ಕಾಯಿಲೆ ಕಾಣಿಸಿಕೊಂಡಿರಬಹುದು ಎಂದು ಸಾರ್ವಜನಿಕರು ಆತಂಕಗೊಂಡಿದ್ದಾರೆ.

ತಾಲೂಕಿನ ಹಳೆಕೋಟೆ ಗ್ರಾಮದ ಹರ್ಷ ಎಂಬವರ ಕಾಫಿ ತೋಟದಲ್ಲಿ 20 ದಿನದಲ್ಲಿ 3 ಕಾಡುಬೆಕ್ಕುಗಳು ಸಾವನ್ನಪ್ಪಿವೆ. ಬುಧುವಾರ ಸಹ ಅದೇ ತೋಟದಲ್ಲಿ ಕಾಡುಬೆಕ್ಕೊಂದು ಅಸ್ವಸ್ತವಾಗಿ ನಡೆದಾಡದ ಸ್ಥಿತಿಯಲ್ಲಿ ಕಾಣಿಸಿಕೊಂಡಿತ್ತು. ಅದರ ಹಾಗೂ ಈ ಹಿಂದೆ ಸಾವನ್ನಪ್ಪಿದ ಮುಖದಲ್ಲಿ ಕೂದಲು ಇರಲಿಲ್ಲ. ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದಾಗ, ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸಾವನ್ನಪ್ಪುವ ಮೊದಲು ಮಂಕಾಗಿರುವ ಕಾಡುಬೆಕ್ಕುಗಳು ನರಳಾಡಿ ಸಾಯುತ್ತವೆ. ಸಾಮಾನ್ಯವಾಗಿ ಕಾಡುಬೆಕ್ಕುಗಳು ಮನುಷ್ಯರ ಕಣ್ಣಿಗೆ ಕಾಣಿಸಿಕೊಳ್ಳುವುದೇ ಅಪರೂಪ. ಅವುಗಳು ಕಾಡಿನಲ್ಲೇ ಬೀಡು ಬಿಟ್ಟಿರುತ್ತವೆ. ನಾಡಿಗೆ ಬರುವುದು ವಿರಳ. ಹೀಗಿದ್ದೂ ಕಾಫಿ ತೋಟದಲ್ಲಿ ಕಾಣಿಸಿಕೊಂಡು ಸರಣಿಯಾಗಿ ಸಾವನ್ನಪ್ಪುತ್ತಿವೆ. ಇದೀಗ ಸ್ಥಳೀಯರಲ್ಲಿ ಭಯ ಮೂಡಿಸಿದೆ.

ಬೆಕ್ಕಿಗೆ ಹಾಲುಣಿಸುವ ಶ್ವಾನ: ಒಂದನ್ನೊಂದೊ ಬಿಟ್ಟಿರಲಾರದಷ್ಟು ಮಮತೆ

ಕಾಫಿ ತೋಟದ ಮಾಲೀಕ ಹರ್ಷ ಹಳೇಕೋಟೆ ಮಾತನಾಡಿ, ತೋಟದಲ್ಲಿ ಕಾಣಿಸಿಕೊಂಡ ಎಲ್ಲ ಕಾಡುಬೆಕ್ಕುಗಳ ಮುಖದಲ್ಲಿ ಕೂದಲಿರಲಿಲ್ಲ. ಅದು ಯಾವುದೋ ರೋಗಕ್ಕೆ ತುತ್ತಾದ ರೀತಿಯಲ್ಲಿತ್ತು. ಈ ಪ್ರಾಣಿಗೆ ಮಾರಕ ಕಾಯಿಲೆ ಆವರಿಸಿದ್ದರೆ ಅದು ಮುನುಷ್ಯರಿಗೂ ಬರುತ್ತದೆಯೋ ಎಂಬ ಭೀತಿಯಿದೆ. ಬುಧವಾರ ಕಂಡುಬಂದ ಅಸ್ವಸ್ತಗೊಂಡಿದ್ದ ಕಾಡುಬೆಕ್ಕನ್ನು ಬುಧವಾರ ಅರಣ್ಯ ಇಲಾಖೆಗೆ ಒಪ್ಪಿಸಲಾಗಿದೆ ಎಂದಿದ್ದಾರೆ.

ಕಾಡುಬೆಕ್ಕಿನ ಮೃತದೇಹವನ್ನು ಅರಣ್ಯ ಇಲಾಖೆ ಅಧಿಕಾರಿಗಳು ಕೊಂಡೊಯ್ದು ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಕೊರೋನಾ ಕರಿನೆರಳು ಹಾಗೂ ಮಂಗನಕಾಯಿಲೆಯಿಂದ ಸರಣಿ ಸಾವು ಸಂಭವಿಸಿರಬಹುದು ಎಂದು ಕಾಫಿನಾಡಿನ ಜನ ಆತಂಕಗೊಂಡಿದ್ದಾರೆ. ಮರಣೋತ್ತರ ವರದಿ ಬಂದ ಬಳಿಕವಷ್ಟೇ ಕಾಡುಬೆಕ್ಕಿನ ಸಾವಿನ ಕಾರಣ ತಿಳಿಯಬಹುದು.

20 ದಿನಗಳಿಂದ 3 ಕಾಡುಬೆಕ್ಕುಗಳು ಹಳೆಕೋಟೆ ಕಾಫಿತೋಟದಲ್ಲಿ ಸಾವನ್ನಪ್ಪಿವೆ. ಅದರ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ವರದಿ ಬಂದ ಬಳಿಕ ಕಾರಣ ತಿಳಿಯಲಿದೆ. ಬುಧವಾರ ಕಾಡುಬೆಕ್ಕೊಂದು ತೋಟದ ಮಾಲೀಕರಿಗೆ ಕಾಣಿಸಿಕೊಂಡಾಗ ಅವರಿಂದ ಮಾಹಿತಿ ಪಡೆದು ಸ್ಥಳಕ್ಕೆ ತೆರಳಿ ಅದನ್ನು ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಡಲಾಗಿದೆ - ಮುದ್ದಣ್ಣ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಮೂಡಿಗೆರೆ