ಬೆಂಗಳೂರು [ಜು.05] : ದೂರದ ಊರುಗಳಿಗೆ ತೆರಳಲು ಬಸ್ ಗಾಗಿ ಕಾಯುವ ಪ್ರಯಾಣಿಕರ ಅನುಕೂಲಕ್ಕಾಗಿ ಪ್ರತ್ಯೇಕ ವಿಶ್ರಾಂತಿ ಕೊಠಡಿ ನಿರ್ಮಾಣಕ್ಕೆ ಬಿಬಿಎಂಪಿ ಮುಂದಾಗಿದೆ. ಖಾಸಗಿ ಸಂಸ್ಥೆಯೊಂದು ಸಲ್ಲಿಸಿರುವ ಪ್ರಸ್ತಾವನೆಗೆ ಬಿಬಿಎಂಪಿ ಅನುಮೋದನೆ ನೀಡಿದ್ದು, ಸರ್ಕಾರಿ ಮತ್ತು ಖಾಸಗಿ ಬಸ್ ನಿಲುಗಡೆ ತಾಣಗಳಲ್ಲಿ ಪ್ರತ್ಯೇಕ ಕೊಠಡಿ ನಿರ್ಮಿಸಲಾಗುತ್ತಿದೆ. 

ಮೊದಲ ಹಂತದಲ್ಲಿ ಕೋರಮಂಗಲದ ಸೇಂಟ್ ಜಾನ್ಸ್ ಆಸ್ಪತ್ರೆ ಬಳಿಯ ಕೆಎಸ್‌ಆರ್‌ಟಿಸಿ ಪಿಕ್-ಅಪ್ ಪಾಯಿಂಟ್‌ನಲ್ಲಿ ವಿಶೇಷ ಕೊಠಡಿ ನಿರ್ಮಿಸಲಾಗುತ್ತಿದೆ. ಒಟ್ಟು 18 ಮೀಟರ್ ಉದ್ದ, ಎರಡು ಮೀಟರ್ ಅಗಲದ ಕೊಠಡಿ ನಿರ್ಮಿಸಲಾಗುತ್ತದೆ. ಅದರಲ್ಲಿ ಹವಾನಿಯಂತ್ರಿತ ವ್ಯವಸ್ಥೆ, ಆಸನಗಳು, ಸಿಸಿ ಕ್ಯಾಮರಾ, ಟಿವಿ, ವೈ-ಫೈ, ಶೌಚಗೃಹ ವ್ಯವಸ್ಥೆಗಳಿರಲಿವೆ. ಸದ್ಯ ಪ್ರಾಯೋಗಿಕವಾಗಿ ಕೊಠಡಿ ನಿರ್ಮಿಸಲಾಗುತ್ತಿದೆ. ಇದೆ ಮಾದರಿಯಲ್ಲಿ ಇನ್ನಿತರ ಕೆಎಸ್‌ಆರ್‌ಟಿಸಿ ನಿಲ್ದಾಣಗಳನ್ನು ಗುರುತಿಸಲಾಗುತ್ತಿದೆ. 

ಪ್ರಯಾಣಿಕರು ಹೆಚ್ಚಿರುವ, ಕೊಠಡಿ ನಿರ್ಮಾ ಣದ ಅವಶ್ಯಕತೆಯಿರುವ ಸ್ಥಳಗಳನ್ನು ಗುರುತಿಸಲು ಬಿಬಿಎಂಪಿ ಮುಂದಾಗಿದೆ. ಇಂತಹ ಸ್ಥಳಗಳಲ್ಲಿ ವಿಶೇಷ ಕೊಠಡಿಗಳ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸಂಚಾರಿ ಪೊಲೀಸರು ಮತ್ತು ಸಾರಿಗೆ ಇಲಾಖೆ ಜತೆ ಚರ್ಚಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ.