ಸೀಗೆಹಟ್ಟಿ ಸೀಲ್‌ಡೌನ್‌ಗೆ ಬೆಚ್ಚಿಬಿದ್ದ ಶಿವಮೊಗ್ಗ ಮಂದಿ..!
ಶಿವಮೊಗ್ಗದ ಸೀಗೆಹಟ್ಟಿ ನಿನ್ನೆ ಸಂಜೆ ಕೆಲಕಾಲ ಜನರನ್ನು ಆತಂಕಕ್ಕೆ ಈಡು ಮಾಡಿತು. ನೋಡ ನೋಡುತ್ತಿದ್ದಂತೆ ಈ ಪ್ರದೇಶದಿಂದಲೇ ಮನೆಯೊಂದರಿಂದ ವ್ಯಕ್ತಿಯೊಬ್ಬರನ್ನು ವಾಹನದ ಮೂಲಕ ಸಾಗಿಸಿದ ಆರೋಗ್ಯ ಇಲಾಖೆ ಕಾರ್ಯಕರ್ತರು ಎಲ್ಲೆಲ್ಲೂ ಒಂದೇ ಕ್ಷಣದಲ್ಲಿ ಸ್ಮಶಾನ ಮೌನ! ಆತಂಕ!! ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ
ಶಿವಮೊಗ್ಗ(ಮೇ.08): ಗುರುವಾರ ಸಂಜೆ 7ರ ಸಮಯ. ಇದ್ದಕ್ಕಿದ್ದಂತೆ ದಡದಡನೆ ಆಗಮಿಸಿದ ಪೊಲೀಸರು, ರಸ್ತೆಗಳನ್ನು ಬಂದ್. ಯಾರೂ ಮನೆಯಿಂದ ಹೊರ ಬಾರದಂತೆ ಎಚ್ಚರಿಕೆ ಸಂದೇಶ. ಇಡೀ ಪ್ರದೇಶ ಒಂದು ಕ್ಷಣ ದಂಗಾಗಿ ಹೋಯಿತು. ಈ ನಡುವೆ ಈ ಪ್ರದೇಶದಿಂದಲೇ ಮನೆಯೊಂದರಿಂದ ವ್ಯಕ್ತಿಯೊಬ್ಬರನ್ನು ವಾಹನದ ಮೂಲಕ ಸಾಗಿಸಿದ ಆರೋಗ್ಯ ಇಲಾಖೆ ಕಾರ್ಯಕರ್ತರು. ಎಲ್ಲೆಲ್ಲೂ ಒಂದೇ ಕ್ಷಣದಲ್ಲಿ ಸ್ಮಶಾನ ಮೌನ! ಆತಂಕ!! ಇದೆಲ್ಲ ನಡೆದಿದ್ದು, ಗುರುವಾರ ಸಂಜೆ 7 ಗಂಟೆ ಸುಮಾರಿಗೆ ಸೀಗೆಹಟ್ಟಿ ಸುತ್ತಮುತ್ತಲಿನ ಪ್ರದೇಶದಲ್ಲಿ. ಬೆನ್ನಲ್ಲೇ ಸೀಗೆಹಟ್ಟಿಯಲ್ಲಿ 2 ಕೊರೋನಾ ಪಾಸಿಟಿವ್ ಬಂದಂತೆ ಗಾಳಿ ಸುದ್ದಿಗಳು. ಜನ ಅಕ್ಷರಃ ಕಂಗಾಲಾಗಿದ್ದರು. ಮಾಧ್ಯಮದ ಮಂದಿಯೂ ಒಂದು ಕ್ಷಣ ಏಮಾರಿದರು.
ನಿಜಕ್ಕೂ ಶಿವಮೊಗ್ಗಕ್ಕೆ ಕರೋನಾ ಪಾಸಿಟೀವ್ ಬಂತೇ ಎಂಬ ಪ್ರಶ್ನೆ ಎಲ್ಲೆಲ್ಲೂ ಎದುರಾಯಿತು. ಕೊನೆಗೆ ಬಯಲಾಗಿದ್ದು ಇದೊಂದು ಅಣಕು ಸೀಲ್‌ಡೌನ್ ಎಂದು. ಎಸ್, ಇಂತಹ ಅಣಕು ಸೀಲ್‌ಡೌನ್ ಪ್ರದರ್ಶನವೊಂದನ್ನು ಪೊಲೀಸ್ ಇಲಾಖೆ ಜಿಲ್ಲಾಡಳಿತದ ನೆರವಿನೊಂದಿಗೆ ನಡೆಸಿತು. ಆಕಸ್ಮಿಕವಾಗಿ ಇಲ್ಲಿಯೂ ಪಾಸಿಟಿವ್ ಪ್ರಕರಣವೇನಾದರೂ ಬಂದರೆ ಹೇಗೆ ನಿಭಾಯಿಸುವುದು? ಕಾರ್ಯಾಚರಿಸುವುದು? ಎಂಬೆಲ್ಲ ತಾಲೀಮು ಇಲ್ಲಿ ನಡೆಯಿತು. ಸೀಗೆ ಹಟ್ಟಿ, ಕೆ.ಆರ್. ಪುರ, ಓ.ಟಿ.ರಸ್ತೆ, ಗಾಂಧಿಬಜಾರ್ ಕ್ರಾಸ್, ರಾಮಣ್ಣ ಶೆಟ್ಟಿ ಪಾರ್ಕ್ ಹೀಗೆ ಶಿವಮೊಗ್ಗದ ವಾರ್ಡ್ ನಂ 29, 30 ರಲ್ಲಿ ಈ ಅಣುಕು ಸೀಲ್‌ಡೌನ್ ನಡೆಯಿತು.
ಸಿಂಹಧಾಮದಲ್ಲೂ ಆರ್ಥಿಕ ಸಂಕಷ್ಟದ ಘರ್ಜನೆ..!
ಇದೆಲ್ಲ ನಡೆಯುತ್ತಿದ್ದಂತೆ ಜನ ಗಾಬರಿಗೊಂಡರು. ಸ್ವತಃ ಪೊಲೀಸರೇ ಮನೆಯೊಳಗೆ ಹೋಗುವಂತೆ ಎಚ್ಚರಿಸಿ, ಇಡೀ ರಸ್ತೆಯನ್ನು ಬಂದ್ ಮಾಡಿದ ಮೇಲೆ ಗಾಬರಿಯಾಗದೆ ಇನ್ನೇನು? ಇದೆಲ್ಲ ಜನರಿಗೂ ಹೊಸತು. ಈ ನಡುವೆ ಈ ಘಟನೆಯನ್ನೇ ಮುಂದಿಟ್ಟು ಕೊಂಡು ಕೆಲ ಕಿಡಿಗೇಡಿಗಳು ಶಿವಮೊಗ್ಗದಲ್ಲಿ ಎರಡು ಪಾಸಿಟಿವ್ ಬಂದಿದೆ ಎಂದು ಗುಲ್ಲೆಬ್ಬಿಸಿದರು. ಆದರೆ ಸ್ಪಷ್ಟನೆ ನೀಡಬೇಕಾಗಿದ್ದ ಜಿಲ್ಲಾಡಳಿತ ಮೌನವಾಗಿತ್ತು.
ಮಾಹಿತಿ ನೀಡದ ಜಿಲ್ಲಾಡಳಿತ: ಕೊರೋನಾ ವಿಷಯದಲ್ಲಿ ಜಿಲ್ಲಾಡಳಿತ ಮಾಧ್ಯಮ ಸೇರಿದಂತೆ ಯಾರನ್ನೂ ವಿಶ್ವಾಸಕ್ಕೆ ಪಡೆ ಯುತ್ತಿಲ್ಲ. ಯಾವ ಮಾಹಿತಿಯನ್ನೂ ಹಂಚಿಕೊಳ್ಳುತ್ತಿಲ್ಲ. ಹೀಗಾಗಿ ಮಾಧ್ಯಮಗಳು ತಮ್ಮ ವಿವೇಚನೆಗೆ, ತಮ್ಮ ಮಾಹಿತಿಯ ಆಧಾರದ ಮೇಲೆ ಸುದ್ದಿ ಪ್ರಕಟಿಸುತ್ತಿದೆ. ಸುಳ್ಳು ಸುದ್ದಿಗಳ ಕುರಿತಾಗಿ ಸ್ಪಷ್ಟನೆಯನ್ನು ಯಾರೂ ನೀಡದೆ ಇರುವುದರಿಂದ ಮಾಧ್ಯಮಗಳೂ ಸ್ಪಷ್ಟನೆಯನ್ನು ಪ್ರಕಟಿಸುತ್ತಿಲ್ಲ. ಹೀಗಾಗಿ ಜನ ಸುಳ್ಳು ಸುದ್ದಿಗಳನ್ನೇ ನಂಬುತ್ತಿದ್ದಾರೆ.