ಕೊರೋನಾ ಎಫೆಕ್ಟ್: ಸಿಂಹಧಾಮದಲ್ಲೂ ಆರ್ಥಿಕ ಸಂಕಷ್ಟದ ಘರ್ಜನೆ..!
ಕೊರೋನಾ ವೈರಸ್ ಸಂಕಷ್ಟ ಪ್ರಾಣಿ ಪ್ರಪಂಚಕ್ಕೂ ತಟ್ಟಿದೆ. ಶಿವಮೊಗ್ಗ ಜಿಲ್ಲೆಯ ಪ್ರವಾಸಿ ತಾಣ ತ್ಯಾವರೆಕೊಪ್ಪದ ಹುಲಿ-ಸಿಂಹಧಾಮಕ್ಕೆ ಆದಾಯವೇ ಇಲ್ಲದೆ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಸರ್ಕಾರದ ಅನುಧಾನವನ್ನು ಎದುರು ನೋಡುತ್ತಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.
- ಗೋಪಾಲ್ ಯಡಗೆರೆ
ಶಿವಮೊಗ್ಗ(ಮೇ.08): ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತವರು ಜಿಲ್ಲೆಯ ಪ್ರಮುಖ ಪ್ರವಾಸಿ ತಾಣ ತ್ಯಾವರೆಕೊಪ್ಪದ ಹುಲಿ-ಸಿಂಹಧಾಮಕ್ಕೆ ಕೊರೋನಾ ಎಫೆಕ್ಟ್ ಸರಿಯಾಗಿಯೇ ತಟ್ಟಿದೆ. ಆದಾಯವೇ ಇಲ್ಲದೆ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು ಸರ್ಕಾರದ ಅನುದಾನವನ್ನು ಎದುರು ನೋಡುತ್ತಿದೆ.
ಕೊರೋನಾ ವೈರಸ್ ಪರಿಣಾಮ ಲಾಕ್ ಡೌನ್ ಜಾರಿಯಾದ ನಂತರ ಸಾರ್ವಜನಿಕರ ಪ್ರವೇಶ ನಿರಾಕರಿಸಲ್ಪಟ್ಟಿರುವ ಶಿವಮೊಗ್ಗ ಹೊರ ವಲಯದ ಸಿಂಹಧಾಮದಲ್ಲಿ ಇದೀಗ ಮೌನ ಆವರಿಸಿದೆ. ಅದು ಇಲ್ಲಿನ ಆದಾಯದ ಕತೆ ಹೇಳುತ್ತಿದೆ. ಪ್ರಾಣಿಗಳಿಗೆ ಯಾರ ತಂಟೆ ತಕರಾರೂ ಇಲ್ಲದಿರಬಹುದು, ಆದರೆ ಪ್ರಾಣಿಗಳಿಗೆ ಬೇಕಾದ ಆಹಾರ ಇಲ್ಲಿ ಹುಟ್ಟುತ್ತಿಲ್ಲ. ಮಾರ್ಚ್ 15 ರಿಂದಲೇ ಸಾರ್ವಜನಿಕರ ಪ್ರವೇಶಕ್ಕೆ ರಾಜ್ಯ ಸರ್ಕಾರ ನಿಷೇಧ ಹೇರಿರುವ ಕಾರಣ ಸಿಂಹಧಾಮದಲ್ಲಿರುವ ಪ್ರಾಣಿ, ಪಕ್ಷಿ, ಸರಿಸೃಪಗಳ ನಿರ್ವಹಣೆ ಹಾಗೂ ಸಿಬ್ಬಂದಿ ವೇತನ, ಭತ್ಯೆ ಮತ್ತಿತರ ಬಾಬ್ತಿಗೆ ಆರ್ಥಿಕ ಸಂಕಷ್ಟ ಎದುರಾಗಿದೆ.
ಆದಾಯ ಖೋತಾ!: 1984 ರಲ್ಲಿ ಸ್ಥಾಪನೆಯಾದ ಹುಲಿ-ಸಿಂಹಧಾಮದಲ್ಲಿ 350 ಕ್ಕೂ ಹೆಚ್ಚು ಪ್ರಾಣಿ, ಪಕ್ಷಿ ಹಾಗೂ ಸರೀಸೃಪಗಳಿಗೆ ಆಶ್ರಯ ಕಲ್ಪಿಸಲಾಗಿದೆ. ಸುಮಾರು 250 ಹೆಕ್ಟೇರ್ ಪ್ರದೇಶದಲ್ಲಿ ಹರಡಿಕೊಂಡಿರುವ ಧಾಮದಲ್ಲಿ ಹುಲಿ, ಸಿಂಹ, ಚಿರತೆ, ಕೃಷ್ಣಮೃಗ, ನೀಲ್ಗಾಯ್ ಮೊದಲಾದ ಪ್ರಾಣಿಗಳಿವೆ. ಆರಂಭದಿಂದ ಈ ತನಕ ಸರ್ಕಾರದ ಅನುದಾನಕ್ಕಿಂತ ಪ್ರವೇಶ ಶುಲ್ಕದಿಂದ ಬರುತ್ತಿದ್ದ ಸ್ವಯಂ ಸಂಪನ್ಮೂಲವನ್ನೇ ಹೆಚ್ಚಾಗಿ ನಂಬಿಕೊಂಡಿದ್ದ ಸಫಾರಿ ಆದಾಯಕ್ಕೆ ಈಗ ಗರ ಬಡಿದಿದೆ. ಪ್ರಾಣಿ, ಪಕ್ಷಿಗಳ ರಕ್ಷಣೆ ನಿಟ್ಟಿನಲ್ಲಿ ಮಾರ್ಚ್ 15 ರಿಂದಲೇ ಸಾರ್ವಜನಿಕರಿಗೆ ಸಿಂಹಧಾಮವನ್ನು ಬಂದ್ ಮಾಡಲಾಗಿದೆ. ಇದರಿಂದಾಗಿ ಪ್ರವೇಶ ಶುಲ್ಕದ ರೂಪದಲ್ಲಿ ಬರುತ್ತಿದ್ದ ಆದಾಯ ಖೋತಾ ಆಗಿದ್ದು ಇದೀಗಿ ಪ್ರತಿಯೊಂದಕ್ಕೂ ಸರ್ಕಾರದ ಅನುದಾನವನ್ನೇ ನೆಚ್ಚಿಕೊಳ್ಳಬೇಕಿದೆ.
ಕೊರೋನಾದಿಂದ ಹಾಪ್‌ಕಾಮ್ಸ್‌ಗೆ ತಿರುಗಿದ ಶುಕ್ರದೆಶೆ!
ಪ್ರತಿ ತಿಂಗಳಿಗೆ 30 ಲಕ್ಷ ರು. ಖರ್ಚು: ಸಫಾರಿಯಲ್ಲಿ ಎಲ್ಲಾ ಹಂತದ ಸಿಬ್ಬಂದಿ ಸೇರಿ 47 ಜನರಿದ್ದಾರೆ. ವಿವಿಧ ಮಾದರಿಯ 9 ವಾಹನಗಳಿವೆ. ಪ್ರಾಣಿ, ಪಕ್ಷಿಗಳ ಆಹಾರ, ಸಿಬ್ಬಂದಿ ವೇತನ, ನಿರ್ವಹಣೆ, ವಾಹನದ ಡೀಸಲ್ ಮತ್ತಿತರ ಉದ್ದೇಶಕ್ಕೆ ಪ್ರತಿ ತಿಂಗಳು ಸರಾಸರಿ 28 ರಿಂದ 30 ಲಕ್ಷ ವೆಚ್ಚವಾಗುತ್ತದೆ. ಸಾಮಾನ್ಯವಾಗಿ ಮಾರ್ಚ್ ತಿಂಗಳಲ್ಲಿ 17 ಸಾವಿರ ಮತ್ತು ಏಪ್ರಿಲ್‌ನಲ್ಲಿ 23 ರಿಂದ 25 ಸಾವಿರ ಪ್ರೇಕ್ಷಕರು ಸಫಾರಿಗೆ ಬರುತ್ತಿದ್ದರು. ಇವರಿಂದ ಪ್ರವೇಶ ಶುಲ್ಕದ ರೂಪದಲ್ಲಿ 40 ಲಕ್ಷ ಆದಾಯ ಬರುತ್ತಿತ್ತು. ಆದರೆ ಕಳೆದ 50 ದಿನದಿಂದ ನಯಾಪೈಸೆ ಆದಾಯ ಇಲ್ಲ. ಹೀಗಿರುವಾಗ ಸಹಜವಾಗಿಯೇ ನಿರ್ವಹಣೆ ಕಷ್ಟವಾಗುತ್ತಿದೆ ಎಂದು ಸಫಾರಿಯ ಕಾರ್ಯ ನಿರ್ವಾಹಕ ನಿರ್ದೇಶಕ ಮುಕುಂದ್ ಚಂದ್ರ ಹೇಳುತ್ತಾರೆ.
ಎಷ್ಟು ಜನರು ಬರುತ್ತಿದ್ದರು?: 2018 ರ ಏಪ್ರಿಲ್ ನಿಂದ 2019 ರ ಮಾರ್ಚ್ ತನಕ 2.60 ಲಕ್ಷ ಜನ ಸಫಾರಿಗೆ ಭೇಟಿ ನೀಡಿದ್ದಾರೆ. 2019 ರ ಏಪ್ರಿಲ್‌ನಿಂದ 2020 ರ ಮಾರ್ಚ್ ತನಕ 2.76 ಲಕ್ಷ ಜನ ಭೇಟಿ ನೀಡಿದ್ದಾರೆ. ಮಾರ್ಚ್ ಮುಗಿಯಲು ಇನ್ನು 15 ದಿನ ಇರುವಂತೆಯೇ ಲಾಕ್‌ಡೌನ್ ಘೋಷಣೆಯಾದ ಕಾರಣ ಜನರು ಬರಲು ಸಾಧ್ಯವಾಗಿಲ್ಲ. ಒಂದು ವೇಳೆ ಲಾಕ್‌ಡೌನ್ ಇರದಿದ್ದರೆ ಈ ಸಂಖ್ಯೆ 3 ಲಕ್ಷಕ್ಕೆ ಮುಟ್ಟುತ್ತಿತ್ತು ಎಂದು ಅಧಿಕಾರಿಗಳು ಹೇಳುತ್ತಾರೆ. ಬೇಕಿದೆ ಖಾಸಗಿ ನೆರವು: ಸದ್ಯದ ಪರಿಸ್ಥಿತಿಯಲ್ಲಿ ಕರ್ನಾಟಕ ಮೃಗಾಲಯ ಪ್ರಾಧಿಕಾರವು ತ್ಯಾವರೆಕೊಪ್ಪ ಹುಲಿ-ಸಿಂಹಧಾಮದ ನಿರ್ವಹಣೆ ಮತ್ತು ಸಿಬ್ಬಂದಿ ವೇತನಕ್ಕೆ ಅಗತ್ಯವಾದ ಅನುದಾನ ನೀಡಿದೆ. ಇದು ಹೀಗೆ ಮುಂದುವರಿಯುತ್ತದೆ ಎಂದು ಹೇಳಲು ಬರುವುದಿಲ್ಲ. ಹಾಗಾಗಿ ಸಫಾರಿ ಅಭಿವೃದ್ಧಿ ಮತ್ತು ನಿರ್ವಹಣೆಗೆ ಖಾಸಗಿಯವರ ಸಹಭಾಗಿತ್ವ ಇದ್ದರೆ ಒಳ್ಳೆಯದು ಎಂದು ಅಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಈಗಾಗಲೇ ಮೈಸೂರಿನ ಕೃಷ್ಣರಾಜೇಂದ್ರ ಮೃಗಾಲಯಕ್ಕೆ ಅಲ್ಲಿನ ಉಸ್ತುವಾರಿ ಸಚಿವರು ವಿವಿಧ ಖಾಸಗಿ ಸಂಸ್ಥೆಗಳು ಹಾಗೂ ದಾನಿಗಳ ಮೂಲಕ ಅಗತ್ಯ ಹಣಕಾಸಿನ ನೆರವು ಕಲ್ಪಿಸುತ್ತಿದ್ದಾರೆ. ಅಂತಹ ಪ್ರಯತ್ನ ನಮ್ಮ ಜಿಲ್ಲೆಯಲ್ಲೂ ನಡೆದರೆ ಒಳ್ಳೆಯದು ಎಂಬ ಮಾತು ಕೇಳಿ ಬರುತ್ತಿದೆ.
ಲಾಕ್‌ಡೌನ್ ಬಳಿಕ ಸಾರ್ವಜನಿಕರ ಭೇಟಿಗೆ ಸಕಲ ಸಿದ್ಧತೆ ಲಾಕ್‌ಡೌನ್ ಬಳಿಕ ಜನರ ಭೇಟಿಯಲ್ಲಿ ಸಿಕ್ಕಾಪಟ್ಟೆ ಏರಿಕೆ ಕಾಣಬಹುದು ಎಂದು ನಿರೀಕ್ಷಿಸಲಾಗಿದೆ. ಒಂದೇ ಬಾರಿಗೆ ಜನರು ಬರುವುದನ್ನು ನಿಯಂತ್ರಿಸಲು ಪ್ರಾಧಿಕಾರ ಸಿದ್ಧತೆ ನಡೆಸಿದೆ.ಸಫಾರಿಗೆ ಬರುವ ಪ್ರತಿ ವೀಕ್ಷಕರಿಗೆ ಸ್ಯಾನಿಟೈಸೇಷನ್ ಕಡ್ಡಾಯಗೊಳಿಸುವುದು, ಅವರ ತಾಪಮಾನ ಪರೀಕ್ಷಿಸುವುದು, ನಿರ್ದಿಷ್ಟ ಸಂಖ್ಯೆ ವೀಕ್ಷಕರನ್ನು ಒಳಗೆ ಬಿಟ್ಟು ಅವರಿಗೆ ಸಮಯ ನಿಗದಪಡಿಸುವುದು ಹಾಗೂ ಹುಲಿ-ಸಿಂಹ ಸಫಾರಿಗೆ ಹೋಗುವ ವಾಹನದಲ್ಲಿ ವೀಕ್ಷಕರ ಸಂಖ್ಯೆಯನ್ನು ಇಂತಿಷ್ಟೇ ಎಂದು ಮಿತಿಗೊಳಿಸುವ ಉದ್ದೇಶ ಇದೆ ಎಂದು ಅಧಿಕಾರಿಗಳು ತಿಳಿಸುತ್ತಾರೆ.