ಸಂಸತ್ ಭವನದ ಭದ್ರತಾ ಲೋಪ- ಮೋದಿ, ಶಾ ರಾಜೀನಾಮೆಗೆ ಆಗ್ರಹಿಸಿ ವಾಟಾಳ್ ಪ್ರತಿಭಟನೆ
ಸಂಸತ್ ಭವನದ ಭದ್ರತಾ ಲೋಪ ಖಂಡನೀಯವಾಗಿದ್ದು, ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಹಾರ್ಡಿಂಜ್ ವೃತ್ತದಲ್ಲಿ ಗುರುವಾರ ಪ್ರತಿಭಟಿಸಿದರು.
ಮೈಸೂರು :ಸಂಸತ್ ಭವನದ ಭದ್ರತಾ ಲೋಪ ಖಂಡನೀಯವಾಗಿದ್ದು, ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಹಾರ್ಡಿಂಜ್ ವೃತ್ತದಲ್ಲಿ ಗುರುವಾರ ಪ್ರತಿಭಟಿಸಿದರು.
ದೇಶದಲ್ಲಿ ಈ ಹಿಂದೆ ಸಂಸತ್ ಭವನಕ್ಕೆ ನುಗ್ಗುವಂತಹ ಪರಿಸ್ಥಿತಿ ನಿರ್ಮಾಣವಾಗಿರಲಿಲ್ಲ. ಆದರೆ, ಇದೀಗ ಏಕಾಏಕಿ ಸಂಸತ್ ಭವನಕ್ಕೆ ನುಗ್ಗಿರುವುದು ಬಹುದೊಡ್ಡ ಭದ್ರತಾ ವೈಫಲ್ಯವಾಗಿದೆ. ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ್ದರೆ ಒಳ್ಳೆಯ ಗೌರವ ಸಿಗುತ್ತಿತ್ತು. ಸಾಮಾನ್ಯ ವ್ಯಕ್ತಿ ದೊಡ್ಡ ಮಟ್ಟದ ಭದ್ರತೆ ಭೇದಿಸಿ ಹೇಗೆ ಒಳ ನುಸುಳಲು ಸಾಧ್ಯ? ಈ ಘಟನೆ ಲೋಕಸಭೆಯಲ್ಲಿನ ದೊಡ್ಡ ಭದ್ರತಾ ಲೋಪವಾಗಿದ್ದು, ಈ ಕುರಿತಂತೆ ಪ್ರಧಾನಿ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಸಂಸತ್ ಅಧಿವೇಶನದ ವೇಳೆ ಗದ್ದಲ ಸೃಷ್ಟಿಸಿದ 140 ಹೆಚ್ಚು ಸಂಸದರನ್ನು ಅಮಾನತು ಮಾಡಲಾಗಿದೆ. ಸಂಸತ್ ಭದ್ರತಾ ಲೋಪದ ಬಗ್ಗೆ ಸಂಸದರು ಪ್ರಶ್ನೆ ಮಾಡಿದ್ದು, ಈ ಕಾರಣಕ್ಕೆ ಇವರನ್ನು ಅಮಾನತು ಮಾಡಿರುವುದು ಸರಿಯಲ್ಲ. ಹಾಗಾದರೆ ಸಂಸತ್ತಿನಲ್ಲಿ ಆಗಿರುವ ಭದ್ರತಾ ಲೋಪ ಪ್ರಶ್ನೆ ಮಾಡುವುದೇ ತಪ್ಪಾ? ನನ್ನ ಈವರೆಗಿನ ಅನುಭವದಲ್ಲಿ ಈ ಹಿಂದೆ ಇಷ್ಟೊಂದು ಸಂಸದರನ್ನು ಅಮಾನತು ಮಾಡಿರಲಿಲ್ಲ. ಈ ಘಟನೆ ನಿಜಕ್ಕೂ ದುರದೃಷ್ಟಕರ ಸಂಗತಿ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ತಮಿಳುನಾಡಿಗೆ ಕಾವೇರಿ ನೀರು ಹರಿಸಲು ಕಾವೇರಿ ನೀರು ನಿರ್ವಹಣಾ ಮಂಡಳಿ ನೀರು ಹರಿಸಲು ಆದೇಶಿಸಿರುವುದು ಸರಿಯಲ್ಲ. ಮಂಡಳಿಯು ತಮಿಳುನಾಡು ಸರ್ಕಾರದ ಏಜೆಂಟ್ ರೀತಿ ವರ್ತಿಸುತ್ತಿದೆ. ಪ್ರತಿ ಬಾರಿಯೂ ಕರ್ನಾಟಕಕ್ಕೆ ಅನ್ಯಾಯವಾಗಿದ್ದು, ಕೂಡಲೇ ನೀರು ಬಿಡುವುದನ್ನು ನಿಲ್ಲಿಸಬೇಕು ಎಂದು ಅವರು ಒತ್ತಾಯಿಸಿದರು.
ಮುಖಂಡರಾದ ಪಾರ್ಥಸಾರಥಿ, ಬಿ.ಎ. ಶಿವಶಂಕರ್ ಇದ್ದರು.
ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿಯಾದರೆ ಮೊದಲು ಸಂತೋಷಪಡುವವನು ನಾನು. ಅವರು ಒಬ್ಬ ಕನ್ನಡಿಗ, ಹಿರಿಯ ರಾಜಕಾರಣಿಯಾಗಿದ್ದು, ಕೇಂದ್ರ ಸರ್ಕಾರದ ವಿಪಕ್ಷ ನಾಯಕರಾಗಿ ಉತ್ತಮ ಸಂಸದೀಯ ಪಟುವಾಗಿದ್ದಾರೆ. ಮುಂದೆ ಈ ದೇಶದ ಪ್ರಧಾನಿಯಾದರೆ ನನಗೆ ಬಹಳ ಸಂತೋಷವಾಗಲಿದ್ದು, ಅವರಿಗೆ ಪ್ರಧಾನಿಯಾಗುವ ಎಲ್ಲಾ ಅರ್ಹತೆ ಇದೆ.
- ವಾಟಾಳ್ ನಾಗರಾಜ್, ಕನ್ನಡ ಚಳವಳಿಗಾರ