Asianet Suvarna News Asianet Suvarna News

ಸಮಯ ಪ್ರಜ್ಞೆ: 15 ಜನರ ಜೀವ ಉಳಿಸಿದ ಸೆಕ್ಯೂರಿಟಿ ಗಾರ್ಡ್‌..!

*   ಕಸ್ತೂರಿ ನಗರದ ಡಾಕ್ಟರ್ಸ್‌ ಲೇಔಟ್‌ನಲ್ಲಿ ಕುಸಿದಿದ್ದ 4 ಅಂತಸ್ತಿನ ಕಟ್ಟಡ
*   ಪಿಲ್ಲರ್‌ ಬಿರುಕು ಬಿಟ್ಟಿದ್ದನ್ನು ಗಮನಿಸಿ ಎಚ್ಚರಿಸಿದ ಖಪ್ತಡ್‌
*   ಹೇಳಿದ್ದು 3, ಕಟ್ಟಿದ್ದು 4 ಅಂತಸ್ತು
 

Security guard who saved 15 lives in Bengaluru grg
Author
Bengaluru, First Published Oct 9, 2021, 10:36 AM IST
  • Facebook
  • Twitter
  • Whatsapp

ಬೆಂಗಳೂರು(ಅ.09):  ನಾಲ್ಕು ಅಂತಸ್ತಿನ ಕಟ್ಟಡ ಕುಸಿತ ಪ್ರಕರಣದಲ್ಲಿ ಭದ್ರತಾ ಸಿಬ್ಬಂದಿಯ(Security Guard)  ಸಮಯ ಪ್ರಜ್ಞೆಯಿಂದ 15 ಜನರ ಜೀವ ಉಳಿದಿದೆ.

ಕಸ್ತೂರಿ ನಗರದ ಡಾಕ್ಟರ್ಸ್‌ ಲೇಔಟ್‌ನಲ್ಲಿ ನಾಲ್ಕು ಅಂತಸ್ತಿನ ಕಟ್ಟಡ ಶುಕ್ರವಾರ ಕುಸಿದಿತ್ತು(Building Collapsed). ಈ ವೇಳೆ ಕಟ್ಟಡದ ಭದ್ರತಾ ಸಿಬ್ಬಂದಿ ತಮ್ಮ ಸಮಯ ಪ್ರಜ್ಞೆಯಿಂದ ಫ್ಲ್ಯಾಟ್‌ನಲ್ಲಿ(Flat) ಇದ್ದವರನ್ನು ಸಕಾಲಕ್ಕೆ ಎಚ್ಚರಿಸಿ ಜೀವ ಉಳಿಸಿದ್ದಾರೆ.

ಹಲವು ವರ್ಷಗಳಿಂದ ಸೆಕ್ಯೂರಿಟಿ ಗಾರ್ಡ್‌ ಆಗಿ ಕೆಲಸ ಮಾಡುತ್ತಿದ್ದ ಖಪ್ತಡ್‌ ಕಟ್ಟಡದ ಒಂದು ಭಾಗದ ಪಿಲ್ಲರ್‌ ಬಿರುಕು ಬಿಟ್ಟಿರುವುದನ್ನು ಗಮನಿಸಿದ್ದಾರೆ. ಕೂಡಲೇ ಕಟ್ಟಡದ ಫ್ಲ್ಯಾಟ್‌ಗಳಿಗೆ ಹೋಗಿ ಎಲ್ಲರನ್ನು ಕೆಳಗೆ ಹೋಗುವಂತೆ ಸೂಚಿಸಿದ್ದು, ಕಟ್ಟಡದ ಮಾಲೀಕರಿಗೂ ಮಾಹಿತಿ ನೀಡಿದ್ದಾರೆ. ಕಟ್ಟಡದ ಒಂದು ಭಾಗ ವಾಲುತ್ತಿದ್ದಂತೆ ಮೊದಲು ಲಿಫ್ಟ್‌ ಆಫ್‌ ಮಾಡಿದ ಭದ್ರತಾ ಸಿಬ್ಬಂದಿ, ಎಲ್ಲರನ್ನೂ ಮೆಟ್ಟಿಲುಗಳ ಮೂಲಕ ಕೆಳಗೆ ಹೋಗುವಂತೆ ಸೂಚಿಸಿದರು. ಇದರಿಂದಾಗಿ ನಮ್ಮ ಜೀವ ಉಳಿಯಿತು ಎಂದು ಕಟ್ಟಡದ ನಿವಾಸಿಗಳು ಮಾಹಿತಿ ನೀಡಿದರು. ಸಿಬ್ಬಂದಿಯ ಸಮಯ ಪ್ರಜ್ಞೆಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕುಸಿಯುವ ಭೀತಿಯಲ್ಲಿದೆ 3 ಅಂತಸ್ತಿನ ಕಟ್ಟಡ, ನೊಟೀಸ್ ಕೊಟ್ಟರೂ ಮಾಲಿಕ ಡೋಂಟ್‌ಕೇರ್

ಹೇಳಿದ್ದು 3, ಕಟ್ಟಿದ್ದು 4 ಅಂತಸ್ತು:

ಕಟ್ಟಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಕಟ್ಟಡದ ಮಾಲೀಕರಾದ ಆಯುಷಾ ಬೇಗ್‌ ಅವರನ್ನು ರಾಮಮೂರ್ತಿ ನಗರ ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸಿದ್ದಾರೆ. 2012ರಲ್ಲಿ ಬೆನಗಾನಹಳ್ಳಿ ವಾರ್ಡ್‌ನ ಡಾಕ್ಟರ್‌ ಲೇಔಟ್‌ 2ನೇ ಅಡ್ಡರಸ್ತೆಯಲ್ಲಿ 40/60 ಸುತ್ತಳತೆಯ ನಿವೇಶನದಲ್ಲಿ ಅಪಾರ್ಟ್‌ಮೆಂಟ್‌ ನಿರ್ಮಿಸಲಾಗಿತ್ತು. ತಳಮಹಡಿ ಹಾಗೂ ಎರಡು ಮಹಡಿಗೆ ಅನುಮತಿ ಪಡೆದು ಮೂರು ಮಹಡಿಯ ಕಟ್ಟಡ ನಿರ್ಮಿಸಿದ್ದರು. ಕಳೆದ ವರ್ಷ ಪುನಃ ಮತ್ತೊಂದು ಡ್ಯುಪ್ಲೆಕ್ಸ್‌ ಮನೆಯ ನಿರ್ಮಾಣ ಆರಂಭಿಸಿದ್ದರು. ಈ ಸಂದರ್ಭದಲ್ಲಿ ಫ್ಲ್ಯಾಟ್‌ನ ನಿವಾಸಿಗಳು ಭೂಮಾಲೀಕರ ಹಾಗೂ ಬಿಲ್ಡರ್‌ ವಿರುದ್ಧ ಪಾಲಿಕೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ಗೆ ದೂರು ನೀಡಿದ್ದರು. ಆದರೆ, ಅಧಿಕಾರಿಗಳು ಕ್ರಮಕೈಗೊಳ್ಳದೆ ಸುಮ್ಮನೆ ಬಿಟ್ಟಿದ್ದರಿಂದ ಈ ದುರ್ಘಟನೆ ಸಂಭವಿಸಿದೆ ಎಂಬ ಆರೋಪ ಕೇಳಿಬಂದಿದೆ.

ಮುಖ್ಯ ಆಯುಕ್ತ ಭೇಟಿ: 

ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಿಬಿಎಂಪಿ(BBMP) ಮುಖ್ಯ ಆಯುಕ್ತ ಗೌರವ್‌ ಗುಪ್ತಾ(Gourav Gupta) ಮಾತನಾಡಿ, ಎರಡು ದಿನಗಳಲ್ಲಿ ಕಟ್ಟಡದ ಆವಶೇಷಗಳನ್ನು ತೆರವುಗೊಳಿಸಲಾಗುವುದು. ಕಟ್ಟಡದ ಮಾಲೀಕರು ಮತ್ತು ಬಿಲ್ಡರ್‌(Builder) ವಿರುದ್ಧ ಕ್ರಿಮಿನಲ್‌ ಪ್ರಕರಣ(Criminal Case) ದಾಖಲು ಮಾಡಿದ್ದು, ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ. ಈಗಾಗಲೇ ಪೊಲೀಸರು(Police) ಕಟ್ಟಡ ಮಾಲೀಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಕಟ್ಟಡದ ಅಕ್ರಮ ಗಮನಕ್ಕೆ ಬಂದಿದ್ದರೂ ಕ್ರಮಕೈಗೊಳ್ಳದೆ ಕರ್ತವ್ಯಲೋಪ ಎಸಗಿದ ಸಹಾಯಕ ಎಂಜಿನಿಯರನ್ನು ಅಮಾನತು ಮಾಡಲಾಗಿದೆ. ಪಾಲಿಕೆ ವ್ಯಾಪ್ತಿಯ ಶಿಥಿಲ ಕಟ್ಟಡಗಳು ಮತ್ತು ಅನಧಿಕೃತವಾಗಿ ಅನುಮತಿ ಪಡೆದಿದ್ದಕ್ಕಿಂತ ಹೆಚ್ಚು ಮಹಡಿ ಕಟ್ಟಿದ ಕಟ್ಟಡಗಳ ಸರ್ವೆ(Survey) ನಡೆಸಿ ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.
 

Follow Us:
Download App:
  • android
  • ios