Asianet Suvarna News Asianet Suvarna News

ಕಲಬುರಗಿಯಲ್ಲಿ ಮತ್ತೊಬ್ಬರಿಗೆ ಕೊರೋನಾ ವೈರಸ್ ದೃಢ: 133 ಸೆಕ್ಷನ್‌ ಜಾರಿ

ಇತ್ತೀಚೆಗೆ ಮೃತಪಟ್ಟಿದ್ದ ವೃದ್ಧರೊಬ್ಬರ ಸಂಬಂಧಿ ಮಹಿಳೆಗೆ ಸೋಂಕು| ಕುಟುಂಬದ ನಾಲ್ವರ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಿದ್ದ ವೈದ್ಯರು| ಮೂವರ ವರದಿ ನೆಗೆಟಿವ್‌, ಮಹಿಳೆಗೆ ಸೋಂಕು ತಗುಲಿರುವುದು ದೃಢ|ಸಂತೆ, ಜಾತ್ರೆ ಮತ್ತು ಉರುಸ್‌ ನಿಷೇಧ|

Section 133 Imposed in Kalaburagi due to Coronavirus
Author
Bengaluru, First Published Mar 16, 2020, 7:19 AM IST

ಕಲಬುರಗಿ[ಮಾ.16]: ಕೊರೋನಾ ವೈರಸ್‌ ಸೋಂಕಿನಿಂದ ಮೃತಪಟ್ಟಿದ್ದ ಕಲಬುರಗಿಯ ವಯೋವೃದ್ಧನ ಕುಟುಂಬದ ಸದಸ್ಯರೊಬ್ಬರಿಗೆ ಸೋಂಕು ತಗಲಿರುವುದು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಶರತ್‌.ಬಿ ಸ್ಪಷ್ಟಪಡಿಸಿದ್ದಾರೆ.

"

ವಯೋವೃದ್ಧನ ಕುಟುಂಬದ ನಾಲ್ಕು ಸದಸ್ಯರ ಗಂಟಲು ದ್ರವ ಮಾದರಿಯನ್ನು ಬೆಂಗಳೂರಿಗೆ ಕಳುಹಿಸಲಾಗಿತ್ತು. ಇವರ ಪೈಕಿ ಮೂವರಿಗೆ ಸೋಂಕು ತಗುಲಿಲ್ಲ ಎಂದು ಶನಿವಾರ ಕಲಬುರಗಿಯಲ್ಲಿ ಅರೋಗ್ಯ ಸಚಿವ ಬಿ.ಶ್ರೀರಾಮಲು ಸ್ಪಷ್ಟಪಡಿಸಿದ್ದರು. ಇನ್ನೊಬ್ಬರ ವರದಿ ಭಾನುವಾರ ಬಹಿರಂಗವಾಗಿದ್ದು, 45 ವರ್ಷದ ಮಹಿಳೆಯೊಬ್ಬರಿಗೆ ಸೋಂಕು ದೃಢಪಟ್ಟಿದೆ ಎಂದು ತಿಳಿಸಿದ್ದಾರೆ.

ಕಲಬುರಗಿಯಲ್ಲಿ ಮತ್ತೊಂದು ಕೊರೋನಾ: ಜನತೆಗೆ ಶ್ರೀರಾಮುಲು ವಿಶೇಷ ಮನವಿ

ಕಲಬುರಗಿಯ 76 ವರ್ಷದ ವಯೋವೃದ್ಧ ಶ್ವಾಸಕೋಶ ಕಾಯಿಲೆಯ ಜೊತೆಗೆ ಕೊರೋನಾ ವೈರಸ್‌ ಸೋಂಕಿನಿಂದ ಮಾ.10ರಂದು ನಿಧನರಾಗಿದ್ದರು. ಮೆಕ್ಕಾ ಯಾತ್ರೆ ಮುಗಿಸಿ ಬಂದಿದ್ದ ಅವರಿಗೆ ಮಾ.5ರಂದು ಜ್ವರ, ನೆಗಡಿ ಮತ್ತು ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಆರಂಭದಲ್ಲಿ ಕಲಬುರಗಿಯ ಖಾಸಗಿ ಆಸ್ಪತ್ರೆ ಬಳಿಕ ಹೈದರಾಬಾದ್‌ನ ಆಸ್ಪತ್ರೆಗೆ ದಾಖಲಾಗಿದ್ದ ಅವರನ್ನು ನಂತರ ಚಿಕಿತ್ಸೆ ಸಾಧ್ಯವಿಲ್ಲ ಎನ್ನುವ ಸ್ಥಿತಿಯಲ್ಲಿ ಮನೆಗೆ ವಾಪಸ್‌ ಕರೆತರುತ್ತಿದ್ದಾಗ ಮಾರ್ಗ ಮಧ್ಯೆ ಆ್ಯಂಬುಲೆನ್ಸ್‌ನಲ್ಲೇ ಮೃತಪಟ್ಟಿದ್ದರು. ಈ ವಯೋವೃದ್ಧರ ಸಾವಿನ ನಂತರ ವೈದ್ಯಕೀಯ ವರದಿ ಬಹಿರಂಗವಾಗಿದ್ದು, ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು.

"

ಮುನ್ನೆಚ್ಚರಿಕಾ ಕ್ರಮವಾಗಿ ವೃದ್ಧನ ಕುಟುಂಬದವರನ್ನು ಮನೆಯಲ್ಲೇ ದಿಗ್ಬಂಧನ ವಿಧಿಸಲಾಗಿದೆ. ಜತೆಗೆ, ಅವರ ಆರೋಗ್ಯದ ಮೇಲೂ ಸೂಕ್ತ ನಿಗಾ ಇಡಲಾಗಿದೆ.

ಸಂತೆ, ಜಾತ್ರೆ ಮತ್ತು ಉರುಸ್‌ ನಿಷೇಧ: ಕೊರೋನಾ ವೈರಸ್‌ ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಕಲಬುರಗಿ ಜಿಲ್ಲೆಯಾದ್ಯಂತ ಎಲ್ಲಾ ರೀತಿಯ ಸಂತೆ, ಜಾತ್ರೆ ಮತ್ತು ಉರುಸ್‌ಗಳನ್ನು ಸಿಆರ್‌ಪಿಸಿ 133 ಸೆಕ್ಷನ್‌ ಅನ್ವಯ ಮುಂದಿನ ಅದೇಶದ ವರೆಗೆ ನಿಷೇಧಿಸಿ ಕಲಬುರಗಿ ಜಿಲ್ಲಾಧಿಕಾರಿ ಶರತ್‌ ಬಿ. ಆದೇಶ ಹೊರಡಿಸಿದ್ದಾರೆ.

Follow Us:
Download App:
  • android
  • ios