ಶಿವಮೊಗ್ಗ(ಮೇ.09): ಹಸಿರು ವಲಯದ ಶಿವಮೊಗ್ಗ ಜಿಲ್ಲೆ ಸುರಕ್ಷತೆಗಾಗಿ ಗಡಿ ಚೆಕ್‌ಪೋಸ್ಟ್‌ ಇನ್ನಷ್ಟು ನಿರ್ಮಿಸುವುದರ ಜೊತೆಗೆ ಈಗಿರುವ ಚೆಕ್‌ಪೋಸ್ಟ್‌ನಲ್ಲಿ ಇನ್ನಷ್ಟು ಬಿಗಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಯುವ ಕಾಂಗ್ರೆಸ್‌ ನಗರ ಸಮಿತಿ ಶುಕ್ರವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದೆ.

ಕೊರೋನಾ ಮಹಾಮಾರಿಯಿಂದ ದೇಶದಾದ್ಯಂತ ಸಾಕಷ್ಟುಸಮಸ್ಯೆ ಉಂಟಾಗಿದೆ. ಲಾಕ್‌ಡೌನ್‌ ಘೋಷಿಸಿರುವುದರಿಂದ ಶಿವಮೊಗ್ಗ ಜಿಲ್ಲೆಯು ಸಹ ತತ್ತರಿಸಿಹೋಗಿದೆ. ಆದರೆ ಅದೃಷ್ಟವಶಾತ್‌ ಇದುವರೆಗೂ ಯಾವುದೇ ಪ್ರಕರಣ ಕಂಡುಬಂದಿಲ್ಲ ಎಂದು ಕಾರ್ಯಕರ್ತರು ಹೇಳಿದರು. ಪಕ್ಕದ ದಾವಣಗೆರೆ, ಹಾವೇರಿ, ಚಿತ್ರದುರ್ಗ ಜಿಲ್ಲೆಗಳಲ್ಲಿ ಕೊರೋನಾ ಪ್ರಕರಣ ಕಂಡು ಬಂದಿರುವುದರಿಂದ ಜಿಲ್ಲೆಯಲ್ಲಿ ಕೂಡ ಆತಂಕ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಚೆಕ್‌ ಪೋಸ್ಟ್‌ ಗಳಲ್ಲಿ ಇನ್ನಷ್ಟು ಬಿಗಿ ಕ್ರಮ ಅನುಸರಿಸಬೇಕು ಎಂದು ಒತ್ತಾಯಿಸಿದರು.

ಕೆಎಸ್‌ಆರ್‌ಪಿ ASI ಪುತ್ರಿಗೂ ಮಹಾಮಾರಿ ಕೊರೋನಾ ಸೋಂಕು..!

ದಾವಣಗೆರೆ ರೆಡ್‌ಜೋನ್‌ನಲ್ಲಿ ಗುರುತಿಸಿಕೊಂಡಿದೆ. ದಾವಣಗೆರೆ ಜನ ನಮ್ಮ ಜಿಲ್ಲೆಗೆ ಪ್ರವೇಶ ಪಡೆಯುತ್ತಿದ್ದಾರೆ. ಮುಖ್ಯರಸ್ತೆಗಳಲ್ಲಿ ಚೆಕ್‌ಪೋಸ್ಟ್‌ ನಿರ್ಮಿಸಿದ್ದರೂ, ಉಪ ರಸ್ತೆಗಳಲ್ಲಿ ಸಾರ್ವಜನಿಕರು ಓಡಾಟ ನಡೆಸಿರುವುದು ಆತಂಕಕ್ಕೆ ಕಾರಣವಾಗಿದೆ. ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಕೆಲ ಕಾರಣ ಹೇಳಿ ಆನ್‌ಲೈನ್‌ ಪಾಸ್‌ ಪಡೆದು ಮಡಿಕೆ ಚೀಲೂರು, ಸುತ್ತುಕೋಟೆ, ಕುಂಸಿ, ಚೋರಡಿ ಚೆಕ್‌ ಪೋಸ್ಟ್‌ ಮೂಲಕ ಜಿಲ್ಲೆಗೆ ಪ್ರವೇಶ ಪಡೆಯುತ್ತಿದ್ದಾರೆ. ಇದರಿಂದ ಸಮಸ್ಯೆ ಉಂಟಾಗುವ ಲಕ್ಷಣ ಕಂಡು ಬರುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಜಿಲ್ಲೆಯ ಜನರ ಜೀವನ ಸಹಜ ಸ್ಥಿತಿಗೆ ಮರಳುತ್ತಿದೆ. ಹೀಗಿರುವಾಗ ಜಿಲ್ಲಾಡಳಿತ ಎಲ್ಲಾ ಗಡಿ ಭಾಗದಲ್ಲಿ ಹಾಗೂ ಉಪ ರಸ್ತೆಗಳಲ್ಲಿ ಚೆಕ್‌ಪೋಸ್ಟ್‌ ನಿರ್ಮಿಸಬೇಕು. ಇನ್ನಷ್ಟುಬಿಗಿಯಾದ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಮುಂದೆ ಸಂಭವಿಸಬಹುದಾದ ಘಟನೆಗಳಿಗೆ ಜಿಲ್ಲಾಡಳಿತವೇ ನೇರ ಹೊಣೆ ಹೊರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಯುವ ಕಾಂಗ್ರೆಸ್‌ ಸಮಿತಿ ಜಿಲ್ಲಾಧ್ಯಕ್ಷ ಎಂ. ಪ್ರವೀಣ್‌ ಕುಮಾರ್‌, ನಗರಾಧ್ಯಕ್ಷ ಎಚ್‌.ಪಿ. ಗಿರೀಶ್‌, ರಾಜ್ಯ ಕಾರ್ಯದರ್ಶಿ ಟಿ.ವಿ. ರಂಜಿತ್‌, ಕೆ. ರಂಗನಾಥ್‌, ಮುರಳಿ ಮತ್ತಿತರರು ಉಪಸ್ಥಿತರಿದ್ದರು.