ಬೆಳಗಾವಿ(ಮೇ.09): ಕ್ವಾರಂಟೈನ್‌ನಲ್ಲಿದ್ದ ಪುತ್ರಿ(30 ವರ್ಷ, ಪಿ.714)ಯನ್ನು ಭೇಟಿ ಮಾಡಿದ್ದ ಕೆಎಸ್‌ಆರ್‌ಪಿ ಎಎಸ್‌ಐನ್ನೂ ಕ್ವಾರಂಟೈನ್‌ ಮಾಡಿರುವುದರಿಂದ ಆತಂಕ ಶುರುವಾಗಿದೆ.

ಪತಿ(ಪಿ.552)ಯ ಸೋಂಕಿನ ಕಾರಣಕ್ಕಾಗಿ ಕ್ವಾರಂಟೈನ್‌ನಲ್ಲಿದ್ದ ಕೆಎಸ್‌ಆರ್‌ಪಿ ಎಎಸ್‌ಐ ಪುತ್ರಿಗೂ(30 ವರ್ಷ, ಪಿ.714) ಸೋಂಕು ತಗುಲಿದೆ. ಜಿಲ್ಲೆಯ ಹಿರೇಬಾಗೇವಾಡಿ ಮೂಲದ ಈಕೆಯನ್ನು ಕ್ವಾರಂಟೈನ್‌ನಲ್ಲಿ ಇರುವಾಗಲೇ ತಂದೆ ಕೆಎಸ್‌ಆರ್‌ಪಿ ಎಎಸ್‌ಐ ಭೇಟಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಎಎಸ್‌ಐಯನ್ನು ಕ್ವಾರಂಟೈನ್‌ನಲ್ಲಿಡಲಾಗಿದ್ದು, ಅವರ ಗಂಟಲು ದ್ರವ ಸಂಗ್ರಹಿಸಿ, ಪರೀಕ್ಷೆಗೆ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಈಗ ಇವರ ಸಂಪರ್ಕದಲ್ಲಿದ್ದ ಸಿಬ್ಬಂದಿ ಹಾಗೂ ಇತರರಿಗೆ ಆತಂಕ ಶುರುವಾಗಿದೆ.

ಅನ್ನ ಸಾಂಬಾರ್‌ ಬೇಡ ನಮಗೆ ಬಿರಿಯಾನಿ ಕೊಡಿ: ಕ್ವಾರಂಟೈನ್‌ನಲ್ಲಿದ್ದವರ ಬೇಡಿಕೆ..!

ಆಕೆಯ ಮೂರು ವರ್ಷದ ಮಗುವನ್ನೂ ಕ್ವಾರಂಟೈನ್‌ನಲ್ಲಿಡಲಾಗಿತ್ತು. ಆದರಿಂದ ಆಕೆ ದುಃಖಿಸುತ್ತಿದ್ದರು. ಈ ಕಾರಣಕ್ಕಾಗಿ ಆಕೆ ತಂದೆ ಎಎಸ್‌ಐ ಅವರು ಕ್ವಾರಂಟೈನ್‌ನಲ್ಲಿರುವಾಗಲೇ ತಮ್ಮ ಪುತ್ರಿಯನ್ನು ದೂರದಿಂದ ನಿಂತು ಮಾತನಾಡಿಸಿಕೊಂಡು ಬಂದಿದ್ದಾರೆ. ಅವರು ತಮ್ಮ ಯಾವ ಸಿಬ್ಬಂದಿಯನ್ನೂ ಭೇಟಿಯಾಗಿಲ್ಲ. ಯಾರ ಸಂಪರ್ಕದಲ್ಲಿಯೂ ಇಲ್ಲ. ಆದರಿಂದ ತಮ್ಮ ಯಾವ ಸಿಬ್ಬಂದಿಯನ್ನು ಕ್ವಾರಂಟೈನ್‌ ಮಾಡಿಲ್ಲ ಎಂದು ಬೆಳಗಾವಿ ಕೆಎಸ್‌ಆರ್‌ಪಿ ಕಮಾಂಡೆಂಟ್‌ ಹಮ್ಜಾ ಹುಸೇನ್‌ ತಿಳಿಸಿದ್ದಾರೆ.