ಬಿಫೊರ್‌ಜಾಯ್ ಚಂಡಮಾರುತ ಎಫೆಕ್ಟ್ ಉತ್ತರಕನ್ನಡ ಜಿಲ್ಲೆಯ ಕರಾವಳಿ ಭಾಗದ ಪ್ರದೇಶಗಳನ್ನು ಕಾಡಲಾರಂಭಿಸಿದೆ. ಹವಾಮಾನ ಇಲಾಖೆ ನೀಡಿರುವ ಸೂಚನೆಯಂತೆ ಸಮುದ್ರದಲ್ಲಿ ರಾಕ್ಷಸ ಅಲೆಗಳು ಏಳುತ್ತಿದ್ದು, ಸಮುದ್ರ ತೀರದ ನಿವಾಸಿಗಳು ಆತಂಕದಿಂದಲೇ ದಿನದೂಡುತ್ತಿದ್ದಾರೆ. 

ಉತ್ತರಕನ್ನಡ(ಜೂ.15): ಬಿಫೊರ್‌ಜಾಯ್ ಚಂಡಮಾರುತದ ಎಫೆಕ್ಟ್ ಉತ್ತರಕನ್ನಡ ಜಿಲ್ಲೆಯ ಕಡಲತೀರ‌ದ ಪ್ರದೇಶಗಳನ್ನು ಕಾಡಲಾರಂಭಿಸಿದ್ದು, ಅಲ್ಲಲ್ಲಿ ಸಮುದ್ರ ಕೊರೆತಗಳು ಪ್ರಾರಂಭಗೊಂಡಿವೆ. ದಿನದ ಹೊತ್ತಿನಲ್ಲಿ ಸಮುದ್ರದಲ್ಲಿ ರಕ್ಕಸ ಅಲೆಗಳು ಕಾಣಿಸಿಕೊಂಡರೆ, ರಾತ್ರಿ ಹೊತ್ತಿನಲ್ಲಿ ಈ ಅಲೆಗಳು ತೀರ ಪ್ರದೇಶದಲ್ಲಿರುವ ಮನೆಗಳನ್ನು ಆಹುತಿ ಪಡೆಯಲು ಮುನ್ನುಗ್ಗುತ್ತಿವೆ. ಇದರಿಂದ ಮೀನುಗಾರರಂತೂ ಆತಂಕದಲ್ಲೇ ದಿನದೂಡುತ್ತಿದ್ದಾರೆ. ಈ ಕುರಿತ ಒಂದು ಸ್ಟೋರಿ ಇಲ್ಲಿದೆ ನೋಡಿ...

ಬಿಫೊರ್‌ಜಾಯ್ ಚಂಡಮಾರುತ ಎಫೆಕ್ಟ್ ಉತ್ತರಕನ್ನಡ ಜಿಲ್ಲೆಯ ಕರಾವಳಿ ಭಾಗದ ಪ್ರದೇಶಗಳನ್ನು ಕಾಡಲಾರಂಭಿಸಿದೆ. ಹವಾಮಾನ ಇಲಾಖೆ ನೀಡಿರುವ ಸೂಚನೆಯಂತೆ ಸಮುದ್ರದಲ್ಲಿ ರಾಕ್ಷಸ ಅಲೆಗಳು ಏಳುತ್ತಿದ್ದು, ಸಮುದ್ರ ತೀರದ ನಿವಾಸಿಗಳು ಆತಂಕದಿಂದಲೇ ದಿನದೂಡುತ್ತಿದ್ದಾರೆ. ರಾಜ್ಯಕ್ಕೆ ಮುಂಗಾರು ಮಳೆ‌ ಇನ್ನೂ ಪ್ರವೇಶಿಸಿಯೇ ಇಲ್ಲ. ಅಷ್ಟರಲ್ಲಾಗಲೇ ಕರಾವಳಿ ತೀರದ ನಿವಾಸಿಗಳನ್ನು ಕಾಡಲಾರಂಭಿಸಿರುವ ಚಂಡಮಾರುತದ ಇಫೆಕ್ಟ್ ಕಾರವಾರದ ಮಾಜಾಳಿ ಹಾಗೂ ಅಂಕೋಲಾ ಹಾರವಾಡದ ತರಂಗಮೇಟ್ ಕಡಲತೀರವನ್ನು ಸಾಕಷ್ಟು ತಿಂದು ಹಾಕಿದೆ. ತರಂಗಮೇಟ್ ಕಡಲತೀರದಲ್ಲಂತೂ ಪ್ರತೀ ವರ್ಷ 50 ಮೀಟರ್ ಕಡಲ್ಕೊರೆತ ಕಾಣಿಸಿಕೊಳ್ಳುತ್ತಿದ್ದು, ಈ ಬಾರಿಯೂ ಕಿಲೋಮೀಟರ್‌ಗಟ್ಟೇ ಸಾಕಷ್ಟು ಕೊರೆತವಾದ ಹಿನ್ನೆಲೆ 9 ತೆಂಗಿನಮರಗಳು ಧರೆಗುರುಳಿವೆ.‌ ರಾತ್ರಿ ವೇಳೆಯಂತೂ ಉಕ್ಕೇರುವ ಕಡಲಿನ ಅಲೆಗಳು ಸ್ಥಳೀಯ ಮನೆಗಳ ಅಂಗಳಕ್ಕೆ ಹೊಕ್ಕುತ್ತಿದ್ದು, ತಮ್ಮ ಮನೆಗಳು ಉರುಳಿ ಬೀಳುವ ಭೀತಿಯಲ್ಲಿರುವ ಸ್ಥಳೀಯ ಮೀನುಗಾರರಿದ್ದಾರೆ. 

ಮುರ್ಡೇಶ್ವರದಲ್ಲಿ ಸಮುದ್ರಕ್ಕಿಳಿಯುವುದಕ್ಕೆ ನಿರ್ಬಂಧ: ಭಟ್ಕಳ ಸಹಾಯಕ ಆಯುಕ್ತರ ಆದೇಶ

ಕಡಲ್ಕೊರೆತ ತಡೆಯಲು ಕಳೆದ ಎರಡ್ಮೂರು ವರ್ಷಗಳಿಂದ ಜನರು ಜನಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸುತ್ತಿದ್ದರೂ, ಯಾವುದೇ ಪ್ರಯೋಜನವಾಗಿಲ್ಲ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಆಶ್ವಾಸನೆ ಒದಗಿಸಿ ತೆರಳಿದ್ದಾರಲ್ಲದೇ, ಈವರೆಗೆ ತಡೆಗೋಡೆ ನಿರ್ಮಿಸುವ ಗೋಜಿಗೆ ಹೋಗಿಲ್ಲ.‌ ಇದರಿಂದಾಗಿಯೇ ಪ್ರತೀ ಬಾರಿಗೂ ಕಾಣಿಸುವ ಅಲೆಗಳ ಅಬ್ಬರದಿಂದ ಮೀನುಗಾರರು ಸಂಕಷ್ಟ ಎದುರಿಸುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಇಲ್ಲಿರುವ ಪಾತಿ ದೋಣಿಗಳೂ ನೀರಿನಲ್ಲಿ ಕೊಚ್ಚಿ ಹೋಗಿತ್ತಾದರೂ, ಜನರು ಕಷ್ಟಪಟ್ಟು ತಮ್ಮ ತಮ್ಮ ದೋಣಿಗಳನ್ನು ಉಳಿಸಿಕೊಂಡಿದ್ದಾರೆ. ಇನ್ನು ಕಡಲತೀರ ಪ್ರದೇಶಗಳ ಸ್ಥಿತಿ ಇದಾದ್ರೆ, ವಿವಿಧೆಡೆಯಿಂದ ಭೇಟಿ ನೀಡುವ ಪ್ರವಾಸಿಗರು ಕಡಲತೀರಕ್ಕೆ ಭೇಟಿ ನೀಡಿ ಹುಚ್ಚಾಟ ನಡೆಸುತ್ತಿದ್ದಾರೆ. ಜಿಲ್ಲೆಯಲ್ಲಿ ಈಗಾಗಲೇ ಇಬ್ಬರು ಪ್ರವಾಸಿಗರು ಪ್ರಾಣ ಕಳೆದುಕೊಂಡಿದ್ದು, ಪ್ರವಾಸಿಗರು ಮಾತ್ರ ಸೆಕ್ಯೂರಿಟಿ ಗಾರ್ಡ್, ಲೈಫ್ ಗಾರ್ಡ್‌ಗಳ ಎಚ್ಚರಿಕೆಯನ್ನೂ ನಿರ್ಲಕ್ಷಿಸುತ್ತಿದ್ದಾರೆ.

ಒಟ್ಟಿನಲ್ಲಿ ಚಂಡಮಾರುತದ ಕಾರಣದಿಂದ ಸಮುದ್ರ ತೀರದ‌ ನಿವಾಸಿಗಳು ಸಾಕಷ್ಟು ಸಂಕಷ್ಟ‌ ಎದುರಿಸುತ್ತಿದ್ದು, ಕಡಲ್ಕೊರೆತ ಉಂಟಾಗುವ ಸ್ಥಳಗಳಲ್ಲಿ ಜನಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತ ತಡೆಗೋಡೆ‌ ನಿರ್ಮಾಣ ಮಾಡಿ ಕಡಲತೀರದ ಜನರ ಸಂಕಷ್ಟಕ್ಕೆ ಸ್ಪಂದಿಸಬೇಕಿದೆ.