ಮುರ್ಡೇಶ್ವರದಲ್ಲಿ ಸಮುದ್ರಕ್ಕಿಳಿಯುವುದಕ್ಕೆ ನಿರ್ಬಂಧ: ಭಟ್ಕಳ ಸಹಾಯಕ ಆಯುಕ್ತರ ಆದೇಶ
ಮಳೆಗಾಲದ ಹಿನ್ನೆಲೆ ಮುರ್ಡೇಶ್ವರದ ಸಮುದ್ರದಲ್ಲಿ ಅಲೆಗಳ ಆರ್ಭಟ ಹೆಚ್ಚಿರುವುದು ಮತ್ತು ಈಜಲು ತೆರಳುವ ಪ್ರವಾಸಿಗರ ಜೀವಹಾನಿ ಸಂಭವಿಸುತ್ತಿರುವ ಹಿನ್ನೆಲೆ ಆಗಸ್ಟ್ ಅಂತ್ಯದ ವರೆಗೆ ಸುರಕ್ಷತಾ ದೃಷ್ಟಿಯಿಂದ ಪ್ರವಾಸಿಗರಿಗೆ ಕಡಲತೀರದಲ್ಲಿ ನಿರ್ಬಂಧ ವಿಧಿಸಿ ಸಹಾಯಕ ಆಯಕ್ತರು ಆದೇಶಿಸಿದ್ದಾರೆ.
ಭಟ್ಕಳ (ಜೂ.15) ಮಳೆಗಾಲದ ಹಿನ್ನೆಲೆ ಮುರ್ಡೇಶ್ವರದ ಸಮುದ್ರದಲ್ಲಿ ಅಲೆಗಳ ಆರ್ಭಟ ಹೆಚ್ಚಿರುವುದು ಮತ್ತು ಈಜಲು ತೆರಳುವ ಪ್ರವಾಸಿಗರ ಜೀವಹಾನಿ ಸಂಭವಿಸುತ್ತಿರುವ ಹಿನ್ನೆಲೆ ಆಗಸ್ಟ್ ಅಂತ್ಯದ ವರೆಗೆ ಸುರಕ್ಷತಾ ದೃಷ್ಟಿಯಿಂದ ಪ್ರವಾಸಿಗರಿಗೆ ಕಡಲತೀರದಲ್ಲಿ ನಿರ್ಬಂಧ ವಿಧಿಸಿ ಸಹಾಯಕ ಆಯಕ್ತರು ಆದೇಶಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಮುರ್ಡೇಶ್ವರದ ಕಡಲತೀರದಲ್ಲಿ ಪ್ರವಾಸಿಗರು ಅಲೆಗಳ ಅಬ್ಬರವನ್ನೂ ಲೆಕ್ಕಿಸದೇ, ಸ್ಥಳೀಯ ಮೀನುಗಾರರು, ಪೊಲೀಸರು, ಜೀವ ರಕ್ಷಕ ಸಿಬ್ಬಂದಿ ಮಾತನ್ನು ಕೇಳದೇ ಈಜಲು ಇಳಿದು ಅವಘಡಕ್ಕೀಡಾಗುತ್ತಿರುವುದನ್ನು ಪರಿಗಣಿಸಿ ಪ್ರವಾಸೋದ್ಯಮ ಉಪನಿರ್ದೇಶಕರು ಸಹಾಯಕ ಆಯುಕ್ತರಿಗೆ ಪತ್ರ ಬರೆದು ಮಳೆಗಾಲ ಮುಗಿಯುತನಕ ಪ್ರವಾಸಿಗರಿಗೆ ಮುರ್ಡೇಶ್ವರ ಕಡಲತೀರದಲ್ಲಿ ನಿರ್ಬಂಧ ವಿಧಿಸುವುದರ ಬಗ್ಗೆ ತಿಳಿಸಿದ್ದರು. ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕರ ಪತ್ರದ ಮೇರೆಗೆ ಭಟ್ಕಳ ಸಹಾಯಕ ಆಯುಕ್ತೆ ಮಮತಾದೇವಿ ಆಗಸ್ಟ್ ಅಂತ್ಯದವರೆಗೆ ಅಥವಾ ಮಳೆಗಾಲ ಮುಗಿಯುವವರೆಗೆ ಸುರಕ್ಷತೆ ದೃಷ್ಟಿಯಿಂದ ಪ್ರವಾಸಿಗರು ನೀರಿಗೆ ಇಳಿಯದಂತೆ ನಿರ್ಬಂಧ ವಿಧಿಸಿ ಆದೇಶ ಹೊರಡಿಸಿದ್ದಾರೆ.
ಭಟ್ಕಳ-ಮಾಜಾಳಿ ಕಡಲಿನಲ್ಲಿ ಅಲೆಗಳ ಅಬ್ಬರ: ಪ್ರವಾಸಿಗರ ಹುಚ್ಚಾಟ
ಸಹಾಯಕ ಆಯುಕ್ತರ ಆದೇಶದ ಹಿನ್ನೆಲೆಯಲ್ಲಿ ಮಾವಳ್ಳಿ ಗ್ರಾಮ ಪಂಚಾಯಿತಿಯವರು ಮುರ್ಡೇಶ್ವರ ಕಡಲತೀರಕ್ಕೆ ತೆರಳುವ ದಾರಿಯಲ್ಲಿ ಎಚ್ಚರಿಕೆ ಫಲಕ ಹಾಕುವುದರ ಜೊತೆಗೆ ಬ್ಯಾರಿಕೇಡ್ ಹಾಕಿದ್ದಾರೆ. ಜೀವರಕ್ಷಕರು, ಪೊಲೀಸರು ಹಾಗೂ ಸ್ಥಳೀಯ ಮೀನುಗಾರರು ಪ್ರವಾಸಿಗರಿಗೆ ನೀರಿಗಿಳಿಯದಂತೆ ಎಚ್ಚರಿಕೆ ನೀಡುತ್ತಿರುವುದು ಕಂಡು ಬಂದಿದೆ. ನಿರ್ಬಂಧ ಲೆಕ್ಕಿಸದೇ ಪ್ರವಾಸಿಗರು ನೀರಿಗಳಿದರೆ ಕಾನೂನು ರೀತಿಯ ಕ್ರಮ ಮತ್ತು ದಂಡ ಕೂಡ ವಿಧಿಸಲು ಕಟ್ಟುನಿಟ್ಟಿನ ಆದೇಶ ಹೊರಡಿಸಲಾಗಿದೆ.
ಮುರ್ಡೇಶ್ವರ ಸಮುದ್ರದಲ್ಲಿ ಕಳೆದ ಮೂರು ದಿನಗಳಲ್ಲಿ ಇಬ್ಬರು ಪ್ರವಾಸಿಗರು ಈಜಲು ತೆರಳಿದ್ದ ಸಂದರ್ಭದಲ್ಲಿ ಅಲೆಗಳ ಅಬ್ಬರಕ್ಕೆ ಕೊಚ್ಚಿಕೊಂಡು ಹೋಗಿ ಸಾವನ್ನಪ್ಪಿದ್ದಾರೆ. ಕಳೆದ ಒಂದು ತಿಂಗಳಿನಿಂದೀಚೆಗೆ 25ಕ್ಕೂ ಅಧಿಕ ಜನರನ್ನು ಪ್ರಾಣಾಪಾಯದಿಂದ ರಕ್ಷಿಸಲಾಗಿದೆ. ವರ್ಷಂಪ್ರತಿ ಮಳೆಗಾಲದ ಸಂದರ್ಭದಲ್ಲಿ ಜೀವಹಾನಿ ಆಗುತ್ತಿರುವುದರಿಂದ ಈ ಸಲ ಜಿಲ್ಲಾಡಳಿತ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ.
ಮುರುಡೇಶ್ವರ ತೀರದ ಅಲೆಗೆ ಸಿಲುಕಿ Bengaluru ವಿದ್ಯಾರ್ಥಿ ಸಾವು, ಲೈಫ್ ಗಾರ್ಡ್ ಎಚ್ಚರಕ್ಕೆ ಪ್ರವಾಸಿಗರ ಹಲ್ಲೆ!
ದೇವರ ದರ್ಶನಕ್ಕೆ ತೊಂದರೆ ಇಲ್ಲ:
ಮುರ್ಡೇಶ್ವರಕ್ಕೆ ಬರುವ ಪ್ರವಾಸಿಗರಿಗೆ ಸಮುದ್ರಕ್ಕಿಳಿಯಲು ಮಾತ್ರ ನಿರ್ಬಂಧ ಹೇರಲಾಗಿದ್ದು, ದೇವಸ್ಥಾನ ಹಾಗೂ ಮತ್ತಿತರ ಪ್ರದೇಶವನ್ನು ವೀಕ್ಷಿಸಲು ಯಾವುದೇ ನಿರ್ಬಂಧ ವಿಧಿಸಿಲ್ಲ. ಇಡೀ ಮುರ್ಡೇಶ್ವರಕ್ಕೆ ನಿರ್ಬಂಧ ವಿಧಿಸಲಾಗಿದೆ ಎಂದು ತಪ್ಪಾಭಿಪ್ರಾಯ ಮಾಡಿಕೊಂಡು ಕೆಲ ದೂರದ ಪ್ರವಾಸಿಗರು ದೇವಸ್ಥಾನಕ್ಕೆ ದೂರವಾಣಿ ಮಾಡಿ ಮಾಹಿತಿ ಪಡೆದಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಮುರ್ಡೇಶ್ವರ ದೇವಸ್ಥಾನದ ವ್ಯವಸ್ಥಾಪಕ ಮಂಜುನಾಥ ಶೆಟ್ಟಿ, ಕೆಲವು ಮಾಧ್ಯಮಗಳಲ್ಲಿ ಮುರ್ಡೇಶ್ವರ ಸಮುದ್ರಕ್ಕಿಳಿಯುವುದು ನಿರ್ಬಂಧ ಎನ್ನುವುದರ ಬದಲು ಮುರ್ಡೇಶ್ವರಕ್ಕೆ ನಿರ್ಬಂಧ ಎಂದು ಬಂದಿದ್ದರಿಂದ ಪ್ರವಾಸಿಗರಲ್ಲಿ ಗೊಂದಲ ಉಂಟಾಗಿರುವುದು ನಿಜ. ನಮಗೆ ದೂರವಾಣಿ ಮಾಡಿದವರಿಗೆ ನಾವು ಸರಿಯಾದ ಮಾಹಿತಿ ನೀಡುತ್ತಿದ್ದೇವೆ ಎಂದು ಹೇಳಿದ್ದಾರೆ.