Asianet Suvarna News Asianet Suvarna News

ಸ್ಕೌಟ್ಸ್‌-ಗೈಡ್ಸ್ ರಾಷ್ಟ್ರಪತಿ ಪುರಸ್ಕಾರ: ಪರೀಕ್ಷೆ ನಡೆಸಿ 5 ವರ್ಷವಾದರೂ ರಿಸಲ್ಟ್‌ ಇಲ್ಲ!

ರಾಜ್ಯ ಮಟ್ಟದಲ್ಲಿ ಉತ್ತೀರ್ಣರಾಗುವ ಭಾರತ್‌ ಸ್ಕೌಟ್ಸ್‌-ಗೈಡ್ಸ್ ರೋವರ್ಸ್‌, ರೇಂಜರ್ಸ್‌ ಕೆಡೆಟ್‌ಗಳಿಗೆ ಕೇಂದ್ರ ಕಚೇರಿ ಆಯೋಜಿಸುವ ರಾಷ್ಟ್ರಪತಿ ಪುರಸ್ಕಾರ ಪರೀಕ್ಷೆ ನಡೆಸದೆ ಬರೋಬ್ಬರಿ ಐದು ವರ್ಷ ಕಳೆದಿದೆ. ಅಲ್ಲದೇ 2016-17ರ ಪರೀಕ್ಷಾ ಫಲಿತಾಂಶವೂ ಇದುವರೆಗೂ ಬಂದಿಲ್ಲ!

ScoutsGuides Rashtrapati Puraskara: No result even after 5 years of examination rav
Author
Bangalore, First Published Jul 19, 2022, 9:02 AM IST

ವರದಿ: ಆತ್ಮಭೂಷಣ್‌

ಮಂಗಳೂರು(ಜು.19): ರಾಜ್ಯ ಮಟ್ಟದಲ್ಲಿ ಉತ್ತೀರ್ಣರಾಗುವ ಭಾರತ್‌ ಸ್ಕೌಟ್ಸ್‌-ಗೈಡ್ಸ್ ರೋವರ್ಸ್‌, ರೇಂಜರ್ಸ್‌ ಕೆಡೆಟ್‌ಗಳಿಗೆ ಕೇಂದ್ರ ಕಚೇರಿ ಆಯೋಜಿಸುವ ರಾಷ್ಟ್ರಪತಿ ಪುರಸ್ಕಾರ ಪರೀಕ್ಷೆ ನಡೆಸದೆ ಬರೋಬ್ಬರಿ ಐದು ವರ್ಷ ಕಳೆದಿದೆ. ಕೊನೆಯದಾಗಿ 2016-17ನೇ ಸಾಲಿನಲ್ಲಿ ಪರೀಕ್ಷೆ ನಡೆಸಿದ್ದರೂ ಅದರ ಫಲಿತಾಂಶವನ್ನೇ ಇದುವರೆಗೆ ಪ್ರಕಟಿಸಿಲ್ಲ! ಈ ಬಗ್ಗೆ ಮಕ್ಕಳ ಪೋಷಕರು ಹಾಗೂ ಸ್ಕೌಟ್ಸ್‌-ಗೈಡ್‌್ಸನ ರಾಜ್ಯ ಮುಖ್ಯಸ್ಥರು ದೆಹಲಿ ಕೇಂದ್ರ ಕಚೇರಿ ಸಂಪರ್ಕಿಸಿದರೂ ಇಲ್ಲಿವರೆಗೆ ಪ್ರಯೋಜನವಾಗಿಲ್ಲ. ಈ ಮಧ್ಯೆ ರಾಷ್ಟ್ರಪತಿ ಪುರಸ್ಕಾರ ಪರೀಕ್ಷೆ, ಫಲಿತಾಂಶ ಬಾರದೆ ಸ್ಕೌಟ್ಸ್‌-ಗೈಡ್‌್ಸ ವಿದ್ಯಾರ್ಥಿಗಳು ಸಿಇಟಿ ಪ್ರವೇಶ ಮೀಸಲಾತಿಯಿಂದ ವಂಚಿತಗೊಳ್ಳುವಂತಾಗಿದೆ.

ಪ್ರತಿ ವರ್ಷ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಸ್ಕೌಟ್ಸ್‌- ಗೈಡ್ಸ್ (Scouts and Guides) ಹಾಗೂ ಪಿಯು ವಿದ್ಯಾರ್ಥಿಗಳು ರೋವರ್ಸ್‌(Rovers)ರೇಂಜರ್ಸ್‌(Rangers) ಕೆಡೆಟ್‌(Cadette)ಗಳಾಗಿ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಪರೀಕ್ಷೆ ಬರೆಯುತ್ತಾರೆ. ಇದಕ್ಕೆ ವಿವಿಧ ರೀತಿಯ ತರಬೇತಿ ಹಾಗೂ ಪರೀಕ್ಷೆಗಳಿದ್ದು, ವಿದ್ಯಾರ್ಥಿಗಳು ಶಾಲೆಗೆ ರಜೆ ಹಾಕಿ 20ರಿಂದ 25 ದಿನಗಳ ಕಾಲ ನಾನಾ ಕಡೆಗಳಲ್ಲಿ ತರಬೇತಿ ಶಿಬಿರಗಳಿಗೆ ಹಾಜರಾಗುತ್ತಾರೆ. 2015ರ ವರೆಗೆ ರಾಷ್ಟ್ರಪತಿ ಪರೀಕ್ಷೆ ದೇಶದಲ್ಲಿ ಸುಸೂತ್ರವಾಗಿ ನಡೆದಿದೆ. 2016ರ ನಂತರ ಮಾತ್ರ ಇದರಲ್ಲಿ ಏರುಪೇರಾಗಿದ್ದು, ಪರೀಕ್ಷೆ ನಡೆಸಿದರೂ ಫಲಿತಾಂಶ ಪ್ರಕಟಿಸಿಲ್ಲ, ನಂತರ ಪರೀಕ್ಷೆಯನ್ನೂ ನಡೆಸದೆ, ನಿಖರ ಕಾರಣವನ್ನೂ ತಿಳಿಸದೆ ಕೇಂದ್ರ ಕಚೇರಿ ತೆಪ್ಪಗೆ ಕುಳಿತಿದೆ.

ಇದನ್ನೂ ಓದಿ:‘ಮಿಸ್‌ ವರ್ಲ್ಡ್‌’ ನನ್ನ ಗುರಿ: ಮಿಸ್‌ ಇಂಡಿಯಾ ಸಿನಿ ಶೆಟ್ಟಿ

2016-17ರ ಸಾಲಿನಲ್ಲಿ ಇಡೀ ದೇಶದಲ್ಲಿ 4 ಸಾವಿರದಷ್ಟುವಿದ್ಯಾರ್ಥಿಗಳು ರಾಷ್ಟ್ರಪತಿ ಪುರಸ್ಕಾರ ಪರೀಕ್ಷೆ ಬರೆದಿದ್ದಾರೆ. ಕರ್ನಾಟಕದಲ್ಲಿ ಈ ಸಂಖ್ಯೆ 600ರಷ್ಟಿದೆ. ರಾಷ್ಟ್ರಪತಿ ಪುರಸ್ಕಾರ ಪರೀಕ್ಷೆಗೆ ಹಾಜರಾಗುವ ಎಲ್ಲ ವಿದ್ಯಾರ್ಥಿಗಳಿಗೆ ರಾಷ್ಟ್ರಪತಿಗಳ ಸಹಿ ಇರುವ ಸರ್ಟಿಫಿಕೆಟ್‌ ನೀಡಲಾಗುತ್ತದೆ. ಮುಂದೆ ಸಿಇಟಿ ಪರೀಕ್ಷೆ ವೇಳೆ ಈ ಸರ್ಟಿಫಿಕೆಟ್‌ ಪಡೆದಿರುವ ವಿದ್ಯಾರ್ಥಿಗಳಿಗೆ ಎಂಜಿನಿಯರಿಂಗ್‌, ಮೆಡಿಕಲ್‌ ಹಾಗೂ ಡೆಂಟಲ್‌ ಸೀಟುಗಳಿಗೆ ಮೀಸಲಾತಿ ಸೌಲಭ್ಯ ಒದಗಿಸಲಾಗುತ್ತದೆ. ರಾಷ್ಟ್ರಪತಿ ಪುರಸ್ಕಾರ ಕೋಟಾದಲ್ಲಿ ಮೆರಿಟ್‌ ಸೀಟುಗಳಲ್ಲಿ ಪ್ರವೇಶ ಸುಲಭ ಸಾಧ್ಯವಿದೆ.

ಕರ್ನಾಟಕ ವಿದ್ಯಾರ್ಥಿಗಳಿಗೆ ಕೋಟಾ ನಷ್ಟ: ರಾಷ್ಟ್ರಪತಿ ಪುರಸ್ಕಾರ ಪರೀಕ್ಷೆಯ ಫಲಿತಾಂಶ ಪ್ರಕಟಿಸದೆ ಹಾಗೂ ನಂತರ ವರ್ಷಂಪ್ರತಿ ಪರೀಕ್ಷೆ ನಡೆಸದ ಕಾರಣ 2016ನೇ ಸಾಲಿನಿಂದ ಸಿಇಟಿ ಕೋಟಾ ವ್ಯರ್ಥವಾಗುತ್ತಿದೆ. ಇಡೀ ದೇಶದಲ್ಲಿ ಸಿಇಟಿಗೆ ಸ್ಕೌಟ್ಸ್‌-ಗೌಡ್‌್ಸ ರಾಷ್ಟ್ರಪತಿ ಪುರಸ್ಕಾರ ಮೀಸಲು ಕೋಟಾ ಇರುವುದು ಕರ್ನಾಟಕ ಮತ್ತು ಒಡಿಶಾದಲ್ಲಿ ಮಾತ್ರ. ಉಳಿದಂತೆ ರಾಜ್ಯ ಸರ್ಕಾರಗಳು ಇಂತಹ ಕೋಟಾ ನಿಗದಿಪಡಿಸಿಲ್ಲ. ಆದ್ದರಿಂದ ಈ ಎರಡು ರಾಜ್ಯದ ವಿದ್ಯಾರ್ಥಿಗಳು ಕೋಟಾ ಇದ್ದರೂ ಪರೀಕ್ಷೆ ನಡೆಸದ ಕಾರಣ ಇಂತಹ ಸೌಲಭ್ಯದಿಂದ ವಂಚಿತಗೊಳ್ಳುವಂತಾಗಿದೆ. ರಾಷ್ಟ್ರಪತಿ ಪುರಸ್ಕಾರ ಪಡೆದವರಿಗೆ ಸಿಇಟಿ ಪ್ರವೇಶ ವೇಳೆ ಎಂಜಿನಿಯರಿಂಗ್‌ 6, ಮೆಡಿಕಲ್‌, ಡೆಂಟಲ್‌ ತಲಾ ಎರಡು ಸೇರಿ ಒಟ್ಟು 10 ಮೀಸಲು ಸೀಟುಗಳನ್ನು ನೀಡಲಾಗುತ್ತಿತ್ತು.

ಇದನ್ನೂ ಓದಿ: ದಲಿತ ಮುಖಂಡ ಸಾವಿನ ಬಗ್ಗೆ ಅನುಮಾನ, ವಾರದ ಹಿಂದೆ ಅಂತ್ಯಕ್ರಿಯೆ ಮಾಡಿದ್ದ ಮೃತದೇ

ರಾಜ್ಯ ಸರ್ಕಾರ ನಡೆಸುವ ರಾಜ್ಯ ಮಟ್ಟದ ಸ್ಕೌಟ್ಸ್‌-ಗೌಡ್‌್ಸ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಸಿಇಟಿ ಮೀಸಲು ಸೀಟು ಅನ್ವಯ ಆಗುವುದಿಲ್ಲ. ಯಾಕೆಂದರೆ ಇದು ರಾಷ್ಟ್ರಪತಿ ಪುರಸ್ಕಾರ ಪಡೆದವರಿಗೆ ನೀಡುವ ಕೋಟಾ ಆಗಿರುವುದರಿಂದ ಪ್ರತ್ಯೇಕವಾಗಿ ರಾಜ್ಯ ಸರ್ಕಾರ ಮೀಸಲು ಸೌಲಭ್ಯ ನೀಡಲು ಬರುವುದಿಲ್ಲ ಎಂದು ಸರ್ಕಾರವೇ ಪೋಷಕರಿಗೆ ಸ್ಪಷ್ಟಪಡಿಸಿದೆ. ಹೀಗಾಗಿ ಐದು ವರ್ಷಗಳಿಂದ ಸ್ಕೌಟ್ಸ್‌-ಗೈಡ್‌್ಸ, ರೋವರ್‌, ರೇಂಜರ್ಸ್‌ ಶಿಬಿರಗಳು ಧಾರಾಳ ನಡೆಯುತ್ತಿದ್ದರೂ ಪರೀಕ್ಷೆ ನಡೆಸದ ಕಾರಣ ಮೀಸಲು ಸೌಲಭ್ಯ ಮಾತ್ರ ಸಿಗುತ್ತಲೇ ಇಲ್ಲ ಎಂದು ವಿದ್ಯಾರ್ಥಿಗಳ ಪೋಷಕರು ಅಳಲು ತೋಡಿಕೊಳ್ಳುತ್ತಿದ್ದಾರೆ.

2016ರ ಸಾಲಿನಲ್ಲಿ ನನ್ನ ಮಗ ರಾಷ್ಟ್ರಪತಿ ಪುರಸ್ಕಾರದ ಪರೀಕ್ಷೆ ಬರೆದಿದ್ದಾನೆ. ಆದರೆ ವರ್ಷ ಕಳೆದರೂ ಫಲಿತಾಂಶ ಬಾರದಿದ್ದಾಗ ಪ್ರಧಾನಿ ಕಚೇರಿ ಪೋರ್ಟಲ್‌ ಹಾಗೂ ಸ್ಕೌಟ್ಸ್‌ ಗೌಡ್‌್ಸ ಕೇಂದ್ರ ಕಚೇರಿಗೆ ಮಾಹಿತಿ ಕೇಳಿದ್ದೆ. ಶೀಘ್ರವೇ ಫಲಿತಾಂಶ ಪ್ರಕಟಿಸುವುದಾಗಿ ತಿಳಿಸಿ 5 ವರ್ಷ ಕಳೆದಿದೆ. ಅಲ್ಲದೆ ಅಂದಿನಿಂದ ಇಂದಿನ ವರೆಗೆ ಮತ್ತೆ ರಾಷ್ಟ್ರಪತಿ ಪುರಸ್ಕಾರ ಪರೀಕ್ಷೆಯನ್ನೂ ನಡೆಸಿಲ್ಲ. ಇದರಿಂದಾಗಿ ರಾಷ್ಟ್ರಪತಿ ಪುರಸ್ಕಾರದಡಿ ಸಿಇಟಿ ಮೀಸಲಿನ ಅವಕಾಶದಿಂದ ವಿದ್ಯಾರ್ಥಿಗಳು ವಂಚಿತಗೊಳ್ಳುವಂತಾಗಿದೆ.

-ರಾಜೇಂದ್ರಕೃಷ್ಣ ಪ್ರಸಾದ್‌, ಸಂತ್ರಸ್ತ ವಿದ್ಯಾರ್ಥಿಯ ತಂದೆ, ಪುತ್ತೂರು

ಸ್ಕೌಟ್ಸ್‌-ಗೈಡ್‌್ಸ ಕೇಂದ್ರ ಕಚೇರಿ 2016ರ ಫಲಿತಾಂಶ ಪ್ರಕಟಿಸದೆ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಕಳೆದ 5 ವರ್ಷದಿಂದ ರಾಷ್ಟ್ರಪತಿ ಪುರಸ್ಕಾರದ ಪರೀಕ್ಷೆಯನ್ನೂ ನಡೆಸಿಲ್ಲ. ಈ ಬಗ್ಗೆ ರಾಷ್ಟ್ರಪತಿ ಭವನವನ್ನು ಸಂಪರ್ಕಿಸಿದ್ದು, ಬಾಕಿ ಫಲಿತಾಂಶ ಶೀಘ್ರ ಪ್ರಕಟಿಸುವುದಲ್ಲದೆ, ಈ ವರ್ಷದಿಂದ ಪರೀಕ್ಷೆ ನಡೆಸುವುದಾಗಿ ಭರವಸೆ ನೀಡಿದ್ದಾರೆ. ದೇಶದಲ್ಲಿ ಬೃಹತ್‌ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗುವುದರಿಂದ ಎಲ್ಲರಿಗೆ ರಾಷ್ಟ್ರಪತಿ ಸಹಿಯ ಸರ್ಟಿಫಿಕೆಟ್‌ ನೀಡುವುದು ಕಷ್ಟ, ಆದ್ದರಿಂದ ಗರಿಷ್ಠ ಅಂಕ ಗಳಿಸಿದವರಿಗೆ ಮಾತ್ರ ರಾಜ್ಯವಾರು ಸಂಖ್ಯೆ ನಿಗದಿಪಡಿಲಾಗುವುದು ಎಂದಿದ್ದಾರೆ.

-ಪಿ.ಜಿ.ಆರ್‌.ಸಿಂಧ್ಯಾ, ರಾಜ್ಯ ಮುಖ್ಯ ಆಯುಕ್ತ, ಸ್ಕೌಟ್ಸ್‌-ಗೈಡ್‌್ಸ, ಬೆಂಗಳೂರು

Follow Us:
Download App:
  • android
  • ios