ಉಡುಪಿಯ ಯಕ್ಷಗಾನ ಕಲಾರಂಗದ ವಿದ್ಯಾಪೋಷಕ್ ವತಿಯಿಂದ 1.75 ಕೋಟಿ ರೂ. ವಿದ್ಯಾರ್ಥಿವೇತನ ಹಾಗೂ ಲ್ಯಾಪ್‌ಟಾಪ್ ವಿತರಿಸಲಾಯಿತು. ಪರ್ಯಾಯ ಶಿರೂರು ಮಠದ ಶ್ರೀ ವೇದವರ್ಧನ ತೀರ್ಥರು ವಿದ್ಯಾರ್ಥಿವೇತನ ಹಸ್ತಾಂತರಿಸಿ, ಸಂಸ್ಥೆಯ ಸಮಾಜ ಸೇವೆಯನ್ನು ಶ್ಲಾಘಿಸಿದರು. ಈ ವೇಳೆ 'ಕಲಾಂತರಂಗ- 2026' ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು.

ಉಡುಪಿ: ಯಕ್ಷಗಾನ ಕಲಾರಂಗ ಅಂಗ ಸಂಸ್ಥೆ ವಿದ್ಯಾಪೋಷಕ್ ವತಿಯಿಂದ ಉಡುಪಿ ಜಿಲ್ಲೆಯ ಪ್ರತಿಭಾವಂತ ಬಡ 1274 ವಿದ್ಯಾರ್ಥಿಗಳಿಗೆ 1,75,89,500 ರು. ವಿದ್ಯಾರ್ಥಿವೇತನ ಇತ್ತೀಚೆಗೆ ಶ್ರೀ ಕೃಷ್ಣಮಠದ ರಾಜಾಂಗಣದಲ್ಲಿ ವಿತರಿಸಲಾಯಿತು.

ಪರೋಪಕಾರಕ್ಕಿಂತ ಮಿಗಿಲಾದ ಪುಣ್ಯವಿಲ್ಲ

ವಿದ್ಯಾರ್ಥಿವೇತನವನ್ನು ಸಾಂಕೇತಿಕವಾಗಿ ಹಸ್ತಾಂತರಿಸಿದ ಪರ್ಯಾಯ ಶಿರೂರು ಮಠದ ಶ್ರೀ ವೇದವರ್ಧನ ತೀರ್ಥರು, ‘ವಿದ್ಯಾದಾನಕ್ಕಿಂತ ಮಿಗಿಲಾದ ದಾನವಿಲ್ಲ, ಪರೋಪಕಾರಕ್ಕಿಂತ ಮಿಗಿಲಾದ ಪುಣ್ಯವಿಲ್ಲ, ಜನ್ಮ ಭೂಮಿಗಿಂತ ಮಿಗಿಲಾದ ಸ್ವರ್ಗವಿಲ್ಲ, ಅದರಂತೆ ನಡೆದುಕೊಳ್ಳಬೇಕು ಎಂದರಲ್ಲದೇ, ಆಚಾರ್ಯ ಮಧ್ವರು ಹೇಳಿದ ‘ನಾನಾ ಜನರ ಸೇವೆಯೆ ಭಗವಂತನಿಗೆ ನಾವು ಕೊಡುವ ತೆರಿಗೆ’ ಎಂಬಂತೆ ಕಲಾರಂಗವು ಸಮಾಜ ಸೇವೆ ಮಾಡುತ್ತಿದೆ ಎಂದು ಶ್ಲಾಘಿಸಿದರು. ಅಲ್ಲದೇ ಶ್ರೀಮಠದಿಂದ ಸಂಸ್ಥೆಗೆ ದೊಡ್ಡ ಮೊತ್ತದ ಸಹಾಯಧನ ನೀಡಿ ಹರಸಿದರು.

ಕಲಾಂತರಂಗ- 2026 ಬಿಡುಗಡೆ

ಅತಿಥಿಗಳಿಂದ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಣೆ, ಸಂಸ್ಥೆಯ ವಾರ್ಷಿಕ ಸಂಚಿಕೆ ‘ಕಲಾಂತರಂಗ- 2026’ನ್ನು ಬಿಡುಗಡೆಗೊಳಿಸಲಾಯಿತು.

ಗೀತಾನಂದ ಫೌಂಡೇಶನ್‌ನ ಅಧ್ಯಕ್ಷ ಆನಂದ ಸಿ. ಕುಂದರ್ ಅಧ್ಯಕ್ಷತೆ ವಹಿಸಿದ್ದರು. ಕರ್ಣಾಟಕ ಬ್ಯಾಂಕಿನ ಜಿಎಂ ಬಿ. ಜಿ. ಸಾಮಗ ಶುಭಾಶಂಸನೆಗೈದರು. ಗಣ್ಯರಾದ ರವಿರಾಜ ಬೆಳ್ಮ, ಡಾ. ಹರಿಶ್ಚಂದ, ಪಾರಂಪಳ್ಳಿ ನಟರಾಜ ಉಪಾಧ್ಯ, ಸಿಎ ಗಣೇಶ್ ಕಾಂಚನ್, ಪಣಂಬೂರು ವಾಸುದೇವ ಐತಾಳ್, ಉದಯ ಹೆಗ್ಡೆ, ಪಿ. ಪುರುಷೋತ್ತಮ ಶೆಟ್ಟಿ, ಅರುಣ್ ಕುಮರ್ ಶೆಟ್ಟಿ, ಪುರುಷೋತ್ತಮ ಪಟೇಲ್, ದಾನಿ ಯು. ವಿಶ್ವನಾಥ ಶೆಣೈ, ಉಪಾಧ್ಯಕ್ಷ ವಿ. ಜಿ. ಶೆಟ್ಟಿ ಉಪಸ್ಥಿತರಿದ್ದರು.

ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ಯು. ಎಸ್ ರಾಜಗೋಪಾಲ ಆಚಾರ್ಯರು ಪ್ರತಿಜ್ಞೆ ಬೋಧಿಸಿದರು. ನಾರಾಯಣ ಎಂ. ಹೆಗಡೆ ವಂದಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ನಿರೂಪಿಸಿದರು.