ಹೊಸ ಸಚಿವರಿಗೆ ಹಳೆ ಸಮಸ್ಯೆಗಳೇ ಸವಾಲು: ಮುನೇನಕೊಪ್ಪ ಮೇಲೆ ಅಪಾರ ನಿರೀಕ್ಷೆ

* ಮಹದಾಯಿ ಯೋಜನೆ ಅನುಷ್ಠಾನಕ್ಕೆ ಮುನೇನಕೊಪ್ಪ ಪ್ರಯತ್ನಿಸಲಿ
* ಹೂಡಿಕೆಯ ವಾಗ್ದಾನವಾಗಿರುವ ಕಂಪನಿಗಳನ್ನು ಕರೆತರಲಿ
* ಮಹದಾಯಿ ಸಮಸ್ಯೆಗೆ ಇನ್ನೂ ಸಿಗದ ಪರಿಹಾರ 
 

People of Dharwad District More Expections on Minister Shankar Patil Munenkoppa grg

ಶಿವಾನಂದ ಗೊಂಬಿ

ಹುಬ್ಬಳ್ಳಿ(ಆ.06): ಮಹದಾಯಿ ಯೋಜನೆ, ಕೈಗಾರಿಕೆಗಳ ಸ್ಥಾಪನೆ, ಫ್ಲೈಓವರ್‌ ನಿರ್ಮಾಣದ ಎರಡನೆಯ ಹಂತಕ್ಕೆ ಮಂಜೂರಿ, ನಿರಂತರ ನೀರು ಯೋಜನೆ. ಹೀಗೆ ನೂತನ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಮೇಲೆ ಜಿಲ್ಲೆಯ ಜನತೆ ಇಟ್ಟುಕೊಂಡಿರುವ ನಿರೀಕ್ಷೆಗಳಿವು.

ಬಂಡಾಯದ ನೆಲವಾದ ನವಲಗುಂದ ಕ್ಷೇತ್ರದ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಇದೀಗ ಸಚಿವರಾಗಿ ನೇಮಕವಾಗಿದ್ದಾರೆ. ಸದ್ಯ ಕೊರೋನಾ ಹಾಗೂ ಪ್ರವಾಹದ ವಿಷಯದಲ್ಲಿ ಈ ಜಿಲ್ಲೆಯನ್ನು ನೋಡಿಕೊಳ್ಳುವ ಜವಾಬ್ದಾರಿ ಮುನೇನಕೊಪ್ಪ ಅವರಿಗೆ ಮುಖ್ಯಮಂತ್ರಿಗಳು ನೀಡಿದ್ದಾರೆ. ಆದರೆ ಜಿಲ್ಲಾ ಉಸ್ತುವಾರಿ ಸಚಿವರು ಇವರೇ ಆಗುವುದು ಬಹುತೇಕ ಖಚಿತ. ಈ ಹಿನ್ನೆಲೆ ನೂತನ ಸಚಿವರ ಬಗ್ಗೆ ಸಾಕಷ್ಟುನಿರೀಕ್ಷೆಗಳನ್ನು ಜನತೆ ಇಟ್ಟುಕೊಂಡಿದೆ. ಬಹುತೇಕ ಹಳೆ ಸಮಸ್ಯೆಗಳೇ ಹೊಸ ಸಚಿವರಿಗೆ ಸವಾಲುಗಳಾಗಿವೆ. ಇವುಗಳನ್ನು ಈಡೇರಿಸಬೇಕೆಂಬ ಬೇಡಿಕೆ ಜನತೆಯದ್ದು.

ಮಹದಾಯಿ ಸಮಸ್ಯೆ:

ಜನರ ಬೇಡಿಕೆ ಪಟ್ಟಿಯಲ್ಲಿ ಮಹದಾಯಿಯದ್ದೇ ಮೊದಲ ಸ್ಥಾನವಿದೆ. ಇದಕ್ಕೆ ಕಾರಣವೂ ಇಲ್ಲದಿಲ್ಲ. ಕಳಸಾ- ಬಂಡೂರಿ ಹೋರಾಟದಲ್ಲಿ ಶಂಕರ ಪಾಟೀಲ ಮುನೇನಕೊಪ್ಪ ಮುಂಚೂಣಿಯಲ್ಲಿದ್ದವರು. ಈಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಇದಕ್ಕಾಗಿ ಹೋರಾಟ ನಡೆಸಿದವರು. ಆಗ ಹೋರಾಟದ ಮುಂಚೂಣಿಯಲ್ಲಿದ್ದವರೇ ಇದೀಗ ಆಡಳಿತ ನಡೆಸುತ್ತಿದ್ದಾರೆ. ಮಹದಾಯಿ ಸಮಸ್ಯೆಗೆ ಇನ್ನೂ ಪರಿಹಾರ ಸಿಕ್ಕಿಲ್ಲ.

'ಮಹದಾಯಿ ಹೋರಾಟಗಾರರೊಬ್ಬ ಸಿಎಂ ಆಗಿದ್ದು ಸಂತಸ ತಂದಿದೆ'

ಹಾಗಂತ ಏನೂ ಆಗಿಯೇ ಇಲ್ಲ ಅಂತೇನೂ ಅಲ್ಲ. ಮಹದಾಯಿ ಪರವಾಗಿ ನ್ಯಾಯಾಧಿಕರಣ ತೀರ್ಪನ್ನು ನೀಡಿದೆ. 13.5 ಟಿಎಂಸಿ ಅಡಿ ನೀರು ರಾಜ್ಯದ ಪಾಲು ಎಂದು ತೀರ್ಪಿನಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ. ತೀರ್ಪು ಬಂದು ಆಗಲೇ ಬರೋಬ್ಬರಿ 3 ವರ್ಷಗಳಾಗಿವೆ. ಕೇಂದ್ರ ಸರ್ಕಾರ ನೋಟಿಫಿಕೇಶನ್‌ ಕೂಡ ಹೊರಡಿಸಿದೆ. ರಾಜ್ಯ ಸರ್ಕಾರ ಕೂಡ ಇದಕ್ಕಾಗಿ .1677 ಕೋಟಿ ಮೀಸಲಿಟ್ಟಿದೆ. ಆದರೆ ಈವರೆಗೆ ಕೆಲಸ ಮಾತ್ರ ಶುರುವಾಗಿಲ್ಲ. ಕೆಲವೊಂದು ತಾಂತ್ರಿಕ ಸಮಸ್ಯೆಗಳಿಂದ ಈ ಕೆಲಸ ಶುರುವಾಗಿಲ್ಲ. ಆ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಿ ಕೂಡಲೇ ಟೆಂಡರ್‌ ಕರೆದು ಕೆಲಸಕ್ಕೆ ಚಾಲನೆ ನೀಡಬೇಕೆಂಬುದು ಹೋರಾಟಗಾರರು ಹಾಗೂ ಜನತೆಯ ನಿರೀಕ್ಷೆ.

ಬೆಣ್ಣಿಹಳ್ಳ- ತುಪರಿಹಳ್ಳ:

ಇನ್ನೂ ಬೆಣ್ಣಿಹಳ್ಳ- ತುಪರಿಹಳ್ಳಗಳು ಹೆಸರಿಗಷ್ಟೇ ಹಳ್ಳಗಳು. ಮಳೆಗಾಲದಲ್ಲಿ ದೊಡ್ಡ ನದಿಗಳಂತೆ ಮೈದುಂಬಿ ಹರಿಯುತ್ತವೆ. ಹತ್ತಾರು ಹಳ್ಳಿಗಳು ಜಲಾವೃತವಾಗಿ ಸಂಪರ್ಕ ಕಡಿತಗೊಳ್ಳುತ್ತವೆ. ಇವುಗಳು ಸೃಷ್ಟಿಸುವ ಆವಾಂತರವನ್ನು ಶಂಕರ ಪಾಟೀಲ ಮುನೇನಕೊಪ್ಪ ಪ್ರತಿವರ್ಷ ಕಣ್ಣಾರೆ ಕಾಣುತ್ತಿದ್ದಾರೆ. ಜತೆಗೆ ಪ್ರವಾಹದಲ್ಲಿ ಸಿಲುಕಿದ ಹತ್ತಾರು ಜನರ ರಕ್ಷಣಾ ಕಾರ್ಯದ ನೇತೃತ್ವವನ್ನು ಹಲವಾರು ಸಲ ವಹಿಸಿಕೊಂಡಿರುವುದುಂಟು. ಇಲ್ಲಿನ ಪ್ರವಾಹಕ್ಕೆ ಶಾಶ್ವತ ಪರಿಹಾರ ಕೊಡಿಸಬೇಕೆಂಬ ಹಿನ್ನೆಲೆ ಈಗಾಗಲೇ ಡ್ರೋನ್‌ ಸಮೀಕ್ಷೆ ಕೂಡ ಮುಗಿದಿದೆ. ಪರಮಶಿವಯ್ಯ ವರದಿ ಅನ್ವಯ ಪರಿಹಾರ ಕಾರ್ಯ ಕೈಗೊಳ್ಳಲು ಡಿಪಿಆರ್‌ ಕೂಡ ಸಿದ್ಧಪಡಿಸಲಾಗಿದೆ. ಶೀಘ್ರವೇ ಸಚಿವ ಸಂಪುಟ ಸಭೆಯ ಅನುಮೋದನೆ ಪಡೆದು ಟೆಂಡರ್‌ ಕರೆದು ಕಾಮಗಾರಿ ಚಾಲನೆ ನೀಡಬೇಕಿದೆ. ಇದರೊಂದಿಗೆ ಪ್ರವಾಹದಿಂದ ಬಾಧಿತವಾಗಿ 8 ಗ್ರಾಮಗಳ ಸ್ಥಳಾಂತರಕ್ಕೂ ಜನತೆ ಬೇಡಿಕೆ ಇಟ್ಟಿರುವುದಂಟು. ಆ ಕೆಲಸವೂ ಆಗುವುದೇ?

ಬಂಡವಾಳ ಹೂಡಿಕೆ ಏನಾಯ್ತು?:

ಹುಬ್ಬಳ್ಳಿಯಲ್ಲಿ ಕಳೆದ ವರ್ಷ ಇನ್ವೆಸ್ಟ್‌ ಕರ್ನಾಟಕ- ಹುಬ್ಬಳ್ಳಿ ಸಮಾವೇಶವಾದ ಬಳಿಕ ಧಾರವಾಡ ಜಿಲ್ಲೆಗೆ ಸುಮಾರು 23 ಸಾವಿರ ಕೋಟಿಗೂ ಅಧಿಕ ಬಂಡವಾಳ ಹೂಡಿಕೆಯ ವಾಗ್ದಾನವಾಗಿದೆ. ಇದರೊಂದಿಗೆ ಎಫ್‌ಎಂಸಿಜಿ ಕ್ಲಸ್ಟರ್‌ ಪ್ರಾರಂಭಿಸುವ ಪ್ರಸ್ತಾವನೆ ಕೂಡ ಇದೆ. ಕೋವಿಡ್‌ನಿಂದಾಗಿ ಇವೆಲ್ಲವೂ ಹಿಂದೆ ಬಿದ್ದಿವೆ. ಆಗ ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವರಾಗಿದ್ದ ಜಗದೀಶ ಶೆಟ್ಟರ್‌ ಅವರ ಮುತುವರ್ಜಿಯಿಂದ ಇಷ್ಟೆಲ್ಲ ಕೈಗಾರಿಕೆಗಳು ಧಾರವಾಡ ಜಿಲ್ಲೆಯಲ್ಲಿ ಬಂಡವಾಳ ಹೂಡಲು ಒಪ್ಪಿಗೆ ಸೂಚಿಸಿವೆ. ಇದೀಗ ಶೆಟ್ಟರ್‌ ಅವರು ಸಂಪುಟದಲ್ಲಿಲ್ಲ. ಆದರೆ ಈಗಲೂ ಕೈಗಾರಿಕೆಗಳನ್ನು ತರಲು ಸಚಿವರಾಗಿದ್ದಷ್ಟೇ ಉತ್ಸುಕತೆಯನ್ನು ಹೊಂದಿದ್ದಾರೆ. ಈ ಹಿನ್ನೆಲೆ ಮುನೇನಕೊಪ್ಪ ಅವರು ಶೆಟ್ಟರ್‌ ಅವರ ಮಾರ್ಗದರ್ಶನದಲ್ಲಿ ವಾಗ್ದಾನವಾಗಿರುವ ಉದ್ದಿಮೆಗಳು ಇಲ್ಲಿಗೆ ಬರುವಂತೆ, ಕಾರ್ಯಾರಂಭ ಮಾಡುವಂತೆ ಕ್ರಮ ಕೈಗೊಳ್ಳಬೇಕಿರುವುದು ಅಗತ್ಯ ಹಾಗೂ ಅನಿವಾರ್ಯ.

ಯಡಿಯೂರಪ್ಪ ಬಳಿಕ ಇವರೇ ಅಂತೆ ಮುಂದಿನ ಮುಖ್ಯಮಂತ್ರಿ..!

ಫ್ಲೈಒವರ್‌ಗೆ ಈಗಾಗಲೇ ಕೇಂದ್ರ ಸರ್ಕಾರ ಮೊದಲ ಹಂತಕ್ಕೆ ಒಪ್ಪಿಗೆ ಸೂಚಿಸಿದೆ. ಅದನ್ನು ಕಾರ್ಯಗತಗೊಳಿಸುವ ನಿಟ್ಟಿನಲ್ಲಿ ಕೆಲಸಗಳು ನಡೆದಿವೆ. ಆದರೆ ಇನ್ನೆರಡು ಹಂತಗಳಲ್ಲಿ ಫ್ಲೈಒವರ್‌ ನಿರ್ಮಾಣವಾಗಬೇಕಿದೆ. ಆ ಕೆಲಸ ರಾಜ್ಯ ಸರ್ಕಾರ ಮಾಡಬೇಕಿದೆ. ಈ ನಿಟ್ಟಿನಲ್ಲಿ ನೂತನ ಸಚಿವರು ಕ್ರಮ ಕೈಗೊಳ್ಳಬೇಕು.

ರಾಜ್ಯದಲ್ಲಿ ಎರಡನೆಯ ದೊಡ್ಡ ನಗರವೆನಿಸಿರುವ ಹುಬ್ಬಳ್ಳಿ- ಧಾರವಾಡ ಸಮಗ್ರ ಅಭಿವೃದ್ಧಿಗೆ ವಿಶೇಷ ಅನುದಾನ, ಬಜೆಟ್‌ನಲ್ಲಿ ಘೋಷಣೆಯಾಗಿರುವ ಟ್ರಕ್‌ಟರ್ಮಿನಲ್‌, ಎಲ್ಲ ವಾರ್ಡ್‌ ಹಾಗೂ ಹಳ್ಳಿಗಳಿಗೆ ನಿರಂತರ ನೀರು ಯೋಜನೆ ಹೀಗೆ ಹತ್ತಾರು ಬೇಡಿಕೆಗಳು ಜನತೆಯದ್ದು.
 

Latest Videos
Follow Us:
Download App:
  • android
  • ios