Asianet Suvarna News Asianet Suvarna News

‘ಸೇವ್‌ ಜಾರಕಬಂಡೆ’ ಹೆಸರಲ್ಲಿ ಅಭಿಯಾನ ಶುರು

  • ಕಾವಲ್‌(ಜೆ.ಬಿ.ಕಾವಲ್‌) ಮೀಸಲು ಅರಣ್ಯ ಪ್ರದೇಶದಲ್ಲಿ ಸಾರ್ವಜನಿಕ ಉದ್ಯಾನ 
  •  ಉದ್ಯಾನ ನಿರ್ಮಿಸಲು ಮುಂದಾದರೆ ಕಾನೂನು ಹೋರಾಟ ನಡೆಸುವುದಾಗಿ ಹೋರಾಟಗಾರರ ಎಚ್ಚರಿಕೆ
Save jarakabande Campaign in Bengaluru snr
Author
Bengaluru, First Published Oct 19, 2021, 7:02 AM IST

ವರದಿ :  ರಮೇಶ್‌ ಬನ್ನಿಕುಪ್ಪೆ

 ಬೆಂಗಳೂರು (ಅ.19):  ನಗರದ ಜನತೆ ಹಾಗೂ ಪರಿಸರ (Environment) ಹೋರಾಟಗಾರರ ತೀವ್ರ ವಿರೋಧದ ನಡುವೆಯೂ ಸರ್ಕಾರವು ಜಾರಕಬಂಡೆ ಕಾವಲ್‌(ಜೆ.ಬಿ.ಕಾವಲ್‌) ಮೀಸಲು ಅರಣ್ಯ (Reserve Forest) ಪ್ರದೇಶದಲ್ಲಿ ಸಾರ್ವಜನಿಕ ಉದ್ಯಾನ (Park) ನಿರ್ಮಿಸಲು  ಮುಂದಾದರೆ ಕಾನೂನು ಹೋರಾಟ ನಡೆಸುವುದಾಗಿ ಹೋರಾಟಗಾರರು ಎಚ್ಚರಿಕೆ ನೀಡಿದ್ದು, ಈ ಬಗ್ಗೆ ಸಿದ್ಧತೆ ಆರಂಭಿಸಿದ್ದಾರೆ.

ಜೆ.ಬಿ.ಕಾವಲ್‌ನ (JB kaval) ಮೀಸಲು ಅರಣ್ಯ ಪ್ರದೇಶದ 85 ಎಕರೆ ಪ್ರದೇಶವನ್ನು ತೋಟಗಾರಿಕೆ ಇಲಾಖೆಯಿಂದ(horticulture department) ಸಾರ್ವಜನಿಕ ಉದ್ಯಾನ ನಿರ್ಮಾಣ ಮಾಡಲು ಸರ್ಕಾರದ ಹಂತದಲ್ಲಿ ಚರ್ಚೆ ನಡೆಯುತ್ತಿದೆ. ಇದರ ಬೆನ್ನಲ್ಲೇ ಯಲಹಂಕ (Yalahanka), ಅಟ್ಟೂರು ಮತ್ತು ಬಿಇಎಲ್‌ ಬಡಾವಣೆ (BEL Area) ಸೇರಿದಂತೆ ಸುತ್ತಮುತ್ತಲ ಪ್ರದೇಶದ ನಿವಾಸಿಗಳು ‘ಸೇವ್‌ ಜಾರಕಬಂಡೆ’  (Save Jarakabande) ಹೆಸರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ರೂಪಿಸಿದ್ದು, ಬೃಹತ್‌ ಪ್ರತಿಭಟನೆಗೆ ರೂಪುರೇಷೆ ಸಿದ್ಧಪಡಿಸುತ್ತಿದ್ದಾರೆ.

ಬೆಂಗಳೂರು: ಜಾರಕಬಂಡೆ ಉದ್ಯಾನ ನಿರ್ಮಾಣದ ಹಿಂದೆ ರಿಯಲ್‌ ಎಸ್ಟೇಟ್‌ ಲಾಬಿ..!

ಈ ಬಗ್ಗೆ ಸರ್ಕಾರಕ್ಕೂ (Govt) ಮನವರಿಕೆ ಮಾಡಿಕೊಟ್ಟಿದ್ದು, ಜೆ.ಬಿ.ಕಾವಲ್‌ ಅರಣ್ಯ ಪ್ರದೇಶವನ್ನು ಯತಾಸ್ಥಿತಿಯಲ್ಲಿ ಕಾಪಾಡಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ. ಪರಿಸರ ಸಂರಕ್ಷಣಾ ಕಾಯಿದೆ 1986ರ ಪ್ರಕಾರ ಯಾವುದೇ ಅರಣ್ಯ ಭೂಮಿಯನ್ನು ಅರಣ್ಯೇತರ ಚಟುವಟಿಕೆಗಳಿಗೆ ನೀಡುವುದಕ್ಕೆ ಅವಕಾಶವಿಲ್ಲ, ಹೀಗಾಗಿ ಸರ್ಕಾರ ಇಂತಹ ಯಾವುದೇ ಪ್ರಸ್ತಾವನೆ ಕೈಗೆತ್ತಿಕೊಳ್ಳಬಾರದು. ಒಂದು ವೇಳೆ ಜನಾಭಿಪ್ರಾಯಕ್ಕೆ ವಿರುದ್ಧವಾಗಿ ಉದ್ಯಾನ ನಿರ್ಮಾಣದಂತಹ ನಿರ್ಧಾರಕ್ಕೆ ಮುಂದಾದರೆ ಹೈಕೋರ್ಟ್‌, ಹಸಿರು ನ್ಯಾಯಾಧಿಕಾರಣದಲ್ಲಿ ಪ್ರಕರಣ ದಾಖಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಅರಣ್ಯ ಇಲಾಖೆ ಅಧೀನದಲ್ಲೇ ಇರಲಿ:

ಜೆ.ಬಿ.ಕಾವಲ್‌ನಲ್ಲಿ ಈಗಾಗಲೇ ಅರಣ್ಯ ಇಲಾಖೆ ಟ್ರೀಪಾರ್ಕ್ (Tree park) ನಿರ್ಮಿಸಿದ್ದು, ಸಾರ್ವಜನಿಕರ ವಾಯು ವಿಹಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಆದರೆ, 50 ವರ್ಷಗಳಿಗೂ ಹೆಚ್ಚು ಹಳೆಯದಾದ ಮರಗಳುಳ್ಳ ಅರಣ್ಯ ಪ್ರದೇಶವನ್ನು ತೋಟಗಾರಿಕೆಗೆ ಹಸ್ತಾಂತರಿಸಿದಲ್ಲಿ ಮರಗಳ ಮಾರಣ ಹೋಮ ನಡೆಸಬೇಕಾಗುತ್ತದೆ. ಇದರಿಂದ ಅರಣ್ಯದಲ್ಲಿರುವ ಜೀವ ವೈವಿಧ್ಯಕ್ಕೆ ಧಕ್ಕೆಯಾಗಲಿದೆ.

ಮೀಸಲು ಅರಣ್ಯ ಆಗಿರುವುದರಿಂದ ಬಫರ್‌ ಜೋನ್‌ ನಿಯಮ ಜಾರಿಯಲ್ಲಿರುತ್ತದೆ. ಹೀಗಾಗಿ ಬೃಹತ್‌ ಕಟ್ಟಡಗಳ ನಿರ್ಮಾಣ, ಸಾರ್ವಜನಿಕರ ರಸ್ತೆಗಳ ನಿರ್ಮಾಣ, ಕೈಗಾರಿಕೆ, ಗಣಿಗಾರಿಕೆಗೆ ನಿರ್ಬಂಧವಿರುತ್ತದೆ. ಸರ್ಕಾರದ ಇತರೆ ಪ್ರಾಧಿಕಾರ, ಖಾಸಗಿ ವ್ಯಕ್ತಿಗಳಿಗೆ ಗುತ್ತಿಗೆ ನೀಡಬೇಕಾದರೂ ಕೇಂದ್ರ ಪರಿಸರ ಇಲಾಖೆ ಅನುಮತಿ ಕಡ್ಡಾಯವಾಗಿರುತ್ತದೆ. ವನ್ಯಜೀವಿ ಸಂರಕ್ಷಣೆ ಕಾಯಿದೆಯಡಿ ವನ್ಯಜೀವಿಗಳಿಗೂ ರಕ್ಷಣೆ ಇರುತ್ತದೆ. ಇದು ತೋಟಗಾರಿಕಾ ಇಲಾಖೆಗೆ ಹಸ್ತಾಂತರವಾದರೆ ಇಡೀ ಅರಣ್ಯ ನಾಶವಾಗಲಿದೆ ಎಂದು ಹೋರಾಟಗಾರರು ಆತಂಕ ವ್ಯಕ್ತಪಡಿಸಿದ್ದಾರೆ.

ರಿಯಲ್‌ ಎಸ್ಟೇಟ್‌ ಮಾಫಿಯಾಗೆ ಅವಕಾಶ ನೀಡಬೇಡಿ: ನಿವಾಸಿಗಳು

ಅರಣ್ಯ ಇಲಾಖೆಯಿಂದ ತೋಟಗಾರಿಕೆ ಇಲಾಖೆಗೆ ಹಸ್ತಾಂತರಿಸಿದಲ್ಲಿ ಬಫರ್‌ ಜೋನ್‌ ನಿಯಮ ರದ್ದಾಗಿ, ಬೃಹತ್‌ ಮರಗಳು ಉರುಳಿ ಮುಗಿಲೆತ್ತರದ ಕಟ್ಟಡಗಳು ತಲೆ ಎತ್ತಲಿವೆ. ರಿಯಲ್‌ ಎಸ್ಟೇಟ್‌ ಮಾಫಿಯಾಗೆ ಸಿಲುಕಿ ವನ್ಯಜೀವಿಗಳು, ನರಿ, ನವಿಲು, ಕಾಡು ಹಂದಿ, ಪ್ಯಾಂಗೋಲಿಯನ್‌, ಜಿಂಕೆಗಳಂತಹ ವನ್ಯಜೀವಿ ಸಂಪತ್ತು ನಾಶವಾಗಲಿದೆ. ಹೀಗಾಗಿ ಅರಣ್ಯ ಇಲಾಖೆ ವ್ಯಾಪ್ತಿಯಲ್ಲೇ ಇರಲಿ ಎಂದು ಸ್ಥಳೀಯ ನಿವಾಸಿಗಳು ಒತ್ತಾಯಿಸಿದ್ದಾರೆ.

ಬೆಂಗಳೂರು ಸುತ್ತಮುತ್ತ ಅಲ್ಪ ಪ್ರಮಾಣದಲ್ಲಿ ಉಳಿದಿರುವ ಅರಣ್ಯ ಭೂಮಿ ರಕ್ಷಣೆಗೆ ಪ್ರತಿಯೊಬ್ಬ ನಾಗರಿಕ ಮುಂದಾಗಬೇಕು. ಅರಣ್ಯದಲ್ಲಿ ತೋಟಗಾರಿಕೆ ಇಲಾಖೆಗೆ ಹಸ್ತಾಂತರ ಮಾಡಲು ಮುಂದಾಗಿರುವ ಸರ್ಕಾರದ ನಿರ್ಧಾರ ಭೂಗಳ್ಳರಿಗೆ ವರದಾನವಾಗಲಿದೆ. ಇದರ ವಿರುದ್ಧ ತುರಹಳ್ಳಿ ಟ್ರೀಪಾರ್ಕ್ ಮಾದರಿಯ ಹೋರಾಟಕ್ಕೆ ಮುಂದಾಗುತ್ತೇವೆ.

-ಪವನ್‌, ಪರಿಸರ ಹೋರಾಟಗಾರ.

Follow Us:
Download App:
  • android
  • ios