ಜ.2ರಿಂದ ಕೂಡಲಸಂಗಮದಿಂದ ಸತ್ಯಾಗ್ರಹ ಯಾತ್ರೆ: ಎಸ್.ಆರ್.ಹಿರೇಮಠ
ಜ.2ರಂದು ಕೂಡಲಸಂಗಮದಿಂದ ಆರಂಭಗೊಳ್ಳುವ ಸಮಾಜ ಪರಿವರ್ತನಾ ಸತ್ಯಾಗ್ರಹ ಯಾತ್ರೆ ಜ.11 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಜನಾಂದೋಲನವಾಗಿ ಪರಿವರ್ತಿತವಾಗಲಿದೆ: ಎಸ್.ಆರ್.ಹಿರೇಮಠ
ಬಾಗಲಕೋಟೆ(ಡಿ.06): ಕರಾಳ ಕೃಷಿ ಕಾಯ್ದೆ ರದ್ದು, ಕನಿಷ್ಠ ಬೆಂಬಲ ಬೆಲೆ ನೀತಿಯ ಕಾಯ್ದೆ ಬದ್ಧಗೊಳಿಸುವುದು, ದಲಿತರ ಮೇಲಿನ ಹಲ್ಲೆ ಮತ್ತು ಅಸ್ಪೃಶ್ಯತೆ ಆಚರಣೆ ನಿಯಂತ್ರಿಸುವುದು, ಸಮಾಜವನ್ನು ಒಡೆದು ಆಳುವ ಜನವಿರೋಧಿ ಸರ್ಕಾರದ ವಿರುದ್ಧ ಜನಾಂದೋಲನಗಳ ಮಹಾ ಮೈತ್ರಿ ಸಮಾಜ ಪರಿವರ್ತನಾ ಸತ್ಯಾಗ್ರಹ ಯಾತ್ರೆಯನ್ನು ಆರಂಭಿಸಲಿದೆ ಎಂದು ಸಮಾಜ ಪರಿವರ್ತನಾ ಸಂಘಟನೆಯ ಎಸ್.ಆರ್.ಹಿರೇಮಠ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜ.2ರಂದು ಕೂಡಲಸಂಗಮದಿಂದ ಆರಂಭಗೊಳ್ಳುವ ಸಮಾಜ ಪರಿವರ್ತನಾ ಸತ್ಯಾಗ್ರಹ ಯಾತ್ರೆ ಜ.11 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಜನಾಂದೋಲನವಾಗಿ ಪರಿವರ್ತಿತವಾಗಲಿದೆ ಎಂದು ಮಾಹಿತಿ ನೀಡಿದರು.
BAGALKOT : 15 ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನೇಕಾರರಿಂದ ಬೆಳಗಾವಿಗೆ ಪಾದಯಾತ್ರೆ
ಸರ್ಕಾರವು ಶಿಕ್ಷಣ ಸೇರಿದಂತೆ ಎಲ್ಲ ಹಂತದಲ್ಲಿ ಜಾರಿಗೊಳಿಸುತ್ತಿರುವ ಖಾಸಗೀಕರಣ ಮತ್ತು ಸಮಾಜದಲ್ಲಿ ಏರ್ಪಡಿಸುತ್ತಿರುವ ಕೋಮುವಾದಿಕರಣದ ವಿರುದ್ಧ ನಮ್ಮ ಹೋರಾಟವಾಗಿದೆ. ಜನರ ಆಶೋತ್ತರಗಳನ್ನು ದಮನ ಮಾಡುತ್ತಿರುವ ಸರ್ಕಾರದ ವಿರುದ್ಧ ಹೋರಾಟ ರೂಪಿಸುವ ಭಾಗವಾಗಿ ಈ ಯಾತ್ರೆ ಆರಂಭಿಸಲಾಗಿದ್ದು, ರಾಜಕೀಯ ಸರ್ವಾಧಿಕಾರಿಗಳ ನೀತಿಯ ಮೂಲಕ ಕರ್ನಾಟಕದಲ್ಲಿಯೂ ಜನರ ಬದುಕನ್ನು ಹಾಳು ಮಾಡಿರುವ ವ್ಯವಸ್ಥೆ ವಿರುದ್ಧ ನಮ್ಮ ಹೋರಾಟವಾಗಿದೆ ಎಂದು ತಿಳಿಸಿದರು.
ಸಿಟಿಜನ್ ಫಾರ್ ಡೆಮೊಕ್ರಸಿ, ಜನಾಂದೋಲನಗಳ ಮಹಾಮೈತ್ರಿ ಆಶ್ರಯದಲ್ಲಿ ನಡೆಯುವ ಸತ್ಯಾಗ್ರಹ ಯಾತ್ರೆಗೆ ರಾಜ್ಯ ರೈತ ಸಂಘ ಹಾಗೂ ನಾನಾ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ. ಜ.2ರಿಂದ ಕೂಡಲಸಂಗಮದಿಂದ ಹೊರಡುವ ಯಾತ್ರೆಯು ಮಂಗಳೂರು, ಕೋಲಾರ, ಹಾವೇರಿಯ ಕೂಸನೂರು ಸೇರಿದಂತೆ ಇತರೆ ಭಾಗಗಳಲ್ಲಿಯೂ ಯಾತ್ರೆ ಪ್ರಾರಂಭಗೊಳ್ಳಲಿದೆ. ಆಯಾ ಯಾತ್ರೆಯ ಜವಾಬ್ದಾರಿಯನ್ನು ನಮ್ಮ ಸಂಘಟನೆಗಳಿಗೆ ಬೆಂಬಲ ನೀಡಿದ ನಾಯಕರು ವಹಿಸಲಿದ್ದಾರೆ ಎಂದರು.
ಸಮಾಜದಲ್ಲಿ ಪರಿವರ್ತನಾತ್ಮಕ ಬದಲಾವಣೆ ತರುವುದು, ಸಂವಿಧಾನದ ರಕ್ಷಣೆ, ಸಮಾಜದಲ್ಲಿ ಕೋಮು ಸೌಹಾರ್ದತೆ ಸೃಷ್ಟಿಸುವುದು, ಕುವೆಂಪು ಅವರ ಸರ್ವ ಜನಾಂಗದ ಶಾಂತಿಯ ತೋಟದ ನಿರ್ಮಾಣದ ಜೊತೆಗೆ ವಿಶೇಷವಾಗಿ ದೇಶದಲ್ಲಿ ಪ್ರಜಾಪ್ರಭುತ್ವ, ಸಂವಿಧಾನ ಮತ್ತು ಅವುಗಳ ಮೌಲ್ಯವನ್ನು ಬಲಪಡಿಸುವ ಉದ್ದೇಶದಿಂದ ಹೋರಾಟ ನಡೆಸುತ್ತಿದ್ದೇವೆ. ಜನಪರ, ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ ನೀತಿಗಾಗಿ ನಡೆದಿರುವ ಜನಾಂದೋಲನಗಳ ಮಹಾ ಮೈತ್ರಿಯ ಸತ್ಯಾಗ್ರಹ ಯಾತ್ರೆಗೆ ಎಲ್ಲ ಜನಪರ, ಪ್ರಗತಿಪರ ಸಂಘಟನೆಗಳು ಬೆಂಬಲವಾಗಿ ನಿಂತಿದ್ದು, ಅವುಗಳ ಸಹಕಾರದೊಂದಿಗೆ ಪ್ರತಿಭಟನೆಯನ್ನು ಹಾಗೂ ಹೋರಾಟವನ್ನು ತೀವ್ರಗೊಳಿಸುವುದು ಎಂದು ಎಸ್.ಆರ್.ಹಿರೇಮಠ ತಿಳಿಸಿದರು.
ಬೀಳಗಿಯಲ್ಲಿ ಈ ಬಾರಿಯೂ ಗೆಲುವು ನನ್ನದೇ: ಸಚಿವ ಮುರಗೇಶ ನಿರಾಣಿ
ಜನಾರ್ಧನ ರಡ್ಡಿ ವಿರುದ್ಧ ಆಕ್ರೋಶ :
ಹೊಸ ಪಕ್ಷ ಕಟ್ಟಲು ಜನಾರ್ಧನ ರಡ್ಡಿ ಮುಂದಾಗಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಸಮಾಜ ಪರಿವರ್ತನಾ ಸಂಘಟನೆಯ ಎಸ್.ಆರ್. ಹಿರೇಮಠ, ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಯಾರಾದರೂ ಚುನಾವಣೆಯಲ್ಲಿ ನಿಲ್ಲಬಹುದು. ಆದರೆ, ಅಪರಾಧದಿಂದ ತಂದ ಹಣದಲ್ಲಿ ಚುನಾವಣೆ ನಡೆಸಿದರೆ ಸಹಿಸಿಕೊಳ್ಳುವುದು ಹೇಗೆ ಸಾಧ್ಯ? ಜನಾರ್ಧನ ರಡ್ಡಿ ನಡೆಸಿರುವ ಅಕ್ರಮಗಳು ಮತ್ತು ಇನ್ನೂ ನಡೆಯುತ್ತಿರುವ ತನಿಖೆಗಳ ಕುರಿತು ಪ್ರಸ್ತಾಪಿಸಿದರು.
ಓಬಳಾಪುರಂ ಗಣಿಗಾರಿಕೆ ಮೂಲಕ ನಡೆಸಿದ ಅಕ್ರಮ, ಬೇಲಿಕೇರಿ ಬಂದರಿನಲ್ಲಿ ನಡೆದ ಅಕ್ರಮ, ಸುಗಲಮ ದೇವಾಲಯದ ಸುತ್ತಲಿನ ಗಣಿಗಾರಿಕೆ, ಅಕ್ರಮಗಳ ಕಾರಣಕ್ಕೆ ಜೈಲು ಸೇರಿದ ಸಂದರ್ಭದಲ್ಲಿ ಜಾಮೀನಿಗಾಗಿ ನಡೆದ ಅಕ್ರಮಗಳು ಇನ್ನೂ ಕಣ್ಣುಮುಂದಿವೆ. ಹೀಗಿರುವಾಗ ಮತ್ತೆ ಹೊಸ ಪಕ್ಷ ಕಟ್ಟಲು ಮುಂದಾಗಿರುವುದು ಖಂಡನೀಯ. ರೆಡ್ಡಿ ಅವರ ಅಪರಾಧಗಳ ಕುರಿತು ಪ್ರಸ್ತುತ ತನಿಖೆ ಹೆಚ್ಚಿಸುವ ಅಗತ್ಯತೆಯಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಸಂಘಟನೆಯ ಪ್ರಮುಖ ಡಿ.ಎಂ.ನದಾಫ, ಎಂ.ಎ.ಅಗಸಿಮುಂದಿನ, ಮಂಜುನಾಥ, ನಾಗರಾಜ ಹೊಂಗಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು.