ಬೆಳಗಾವಿ(ಏ.10): ಸುರೇಶ್ ಅಂಗಡಿ ಅಕಾಲಿಕ ಮರಣದಿಂದ ತೆರವಾದ ಸ್ಥಾನಕ್ಕೆ ಉಪಚುನಾವಣೆ ನಡೆಯುತ್ತಿದೆ. ನಾವು ಈ ಚುನಾವಣೆಯನ್ನ ನಿರೀಕ್ಷೆ ಮಾಡಿರಲಿಲ್ಲ. ಈಗ ಚುನಾವಣೆ ನಡೆಯುತ್ತಿದೆ. ಕಾಂಗ್ರೆಸ್ ಅಭ್ಯರ್ಥಿ ಸತೀಶ ಜಾರಕಿಹೊಳಿ‌ ಎಲ್ಲರ ಒಪ್ಪಿಗೆ ಮೇರೆಗೆ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಜಾರಕಿಹೊಳಿ‌ ಗೆಲುವು ಖಚಿತ ಎಂದು ಮಾಜಿ ಸಚಿವ ಎಂ.ಬಿ. ಪಾಟೀಲ್ ಹೇಳಿದ್ದಾರೆ.   

ಇಂದು(ಶನಿವಾರ) ಜಿಲ್ಲೆಯ ಬೈಲಹೊಂಗಲದಲ್ಲಿ ನಡೆದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಹೇಳುತ್ತಾರೆ ನಮ್ಮ ಸರ್ಕಾರ ಭ್ರಷ್ಟಾಚಾರ ಮಾಡಲ್ಲ ಅಂತಾರೆ ಹಾಗಾದ್ರೆ ಚುನಾವಣೆ ಪ್ರಚಾರಕ್ಕೆ 5  ಕೋಟಿ ರೂ. ಹಣ ಎಲ್ಲಿಂದ ಬಂತು? ಎಂದು ಪ್ರಶ್ನೆ ಮಾಡಿದ್ದಾರೆ.

ನಿರುದ್ಯೋಗಿ ಯುವಕರಿಗೆ ಉದ್ಯೋಗ ಕೊಟ್ಟಿಲ್ಲ, ಎರಡು ವರ್ಷಗಳಲ್ಲಿ 14 ಕೋಟಿ ಉದ್ಯೋಗ ನೀಡಬೇಕಾಗಿತ್ತು. ಆದ್ರೆ, ನೀಡಿಲ್ಲ. ದೆಹಲಿಯಲ್ಲಿ ರೈತರು ಪ್ರತಿಭಟನೆ ಮಾಡುತ್ತಿದ್ದಾರೆ, ಅವರಿಗೆ ಭೇಟಿಯಾಗುವ ಸೌಜನ್ಯ ಕೂಡ ಇಲ್ಲ. ಇನ್ನು ರೈತರ ಬಗ್ಗೆ ಕಾಳಜಿ ತೋರಿಸಲು ಹೇಗೆ ಸಾಧ್ಯ ಎಂದು ಬಿಜೆಪಿ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.

ಅಚ್ಚೇ ದಿನ್ ಆಯೇಗಾ ಅಂತಾರೆ ಎಲ್ಲಿದೆ ಅಚ್ಚೇ ದಿನ್ . ಜನ ಹೇಳುತ್ತಿದ್ದಾರೆ‌. ನಿಮ್ಮ ಅಚ್ಚೆ ದಿನ ಅಲ್ಲೇ ಇಟ್ಟಿಕೊಳ್ಳಿ, ಮೊದಲಿನ ದಿನಗಳನ್ನೆ ನಮಗೆ ನೀಡಿ ಅಂತಿದ್ದಾರೆ. ಕಾಂಗ್ರೆಸ್‌ ಸರ್ಕಾರದಲ್ಲಿ ನೀರಾವರಿ ಸೇರಿದಂತೆ ಅನೇಕ ಯೋಜನೆಗಳನ್ನ ನೀಡಿದ್ದೇವೆ. ನಮ್ಮ ಯೋಜನೆಗಳ ಮುಂದೆ ಬಿಜೆಪಿಗರು ಫೋಟೊ ತೆಗೆದುಕೊಳ್ಳುತ್ತಿದ್ದಾರೆ. ಇದು  ಬಿಜೆಪಿ ಸರ್ಕಾರ ಭ್ರಷ್ಟಾಚಾರದ ಸರ್ಕಾರವಾಗಿದೆ. ಬಿಜೆಪಿಗರು ಜಾತ್ರೆ ಮಾಡಿಕೊಂಡು ಹೋಗುತ್ತಾರೆ ಎಂದು ಬಿಜೆಪಿ ನಾಯಕರ ವಿರುದ್ಧ ಹರಿಹಾಯ್ದಿದ್ದಾರೆ.