ಬೆಳಗಾವಿ(ಏ.01): ಬೆಳಗಾವಿ ಲೋಕಸಭೆ ಉಪಚುನಾವಣೆಯಲ್ಲಿ ಒಂದು ಮತದಿಂದ ಗೆದ್ದರೂ ಗೆಲುವೇ, ಎರಡು ಲಕ್ಷದಿಂದ ಗೆದ್ದರೂ ಗೆಲುವೇ ಎಂದು ಕಾಂಗ್ರೆಸ್‌ ಅಭ್ಯರ್ಥಿ ಸತೀಶ ಜಾರಕಿಹೊಳಿ ಹೇಳಿದ್ದಾರೆ.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಯಡಿಯೂರಪ್ಪ ಅವರು ಬಿಜೆಪಿ 2 ಲಕ್ಷ ಮತಗಳ ಅಂತರದಿಂದ ಬಿಜೆಪಿ ಗೆಲ್ಲುತ್ತದೆ ಎಂದು ಹೇಳಿದ್ದಾರೆ. ಆದರೆ, ಈ ಬಗ್ಗೆ ಚುನಾವಣಾ ಫಲಿತಾಂಶ ಬರುವವರೆಗೆ ಏನೂ ಹೇಳಲು ಆಗದು ಎಂದು ಸಿಎಂ ಯಡಿಯೂರಪ್ಪ ಅವರಿಗೆ ತಿರುಗೇಟು ನೀಡಿದ್ದಾರೆ.

ಚುನಾವಣಾ ಪ್ರಚಾರದ ವೇಳೆ ಜನರೇ ಬಿಜೆಪಿ ಸರ್ಕಾರದ ವೈಫಲ್ಯಗಳ ಕುರಿತು ನಮಗೆ ಮಾಹಿತಿ ನೀಡುತ್ತಿದ್ದಾರೆ. ಬಿಜೆಪಿ ಸರ್ಕಾರದ ಸುಳ್ಳು ಹೇಳಿಕೆಗಳಿಂದ ಜನರು ಬೇಸತ್ತಿದ್ದಾರೆ. ಈ ಚುನಾವಣೆಯಲ್ಲಿ ಜನರೇ ಬಿಜೆಪಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದರು.

ಒಟ್ಟಿಗೆ ಪ್ರಚಾರ ನಡೆಸಿದ ಜಾರಕಿಹೊಳಿ, ಹೆಬ್ಬಾಳ್ಕರ್‌

ಲಿಂಗಾಯತ, ಮರಾಠ ವೋಟ್‌ ಬ್ಯಾಂಕ್‌ ವಿಚಾರವಾಗಿ ಮಾತನಾಡಿದ ಅವರು, ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಹಲವು ವರ್ಷಗಳಿಂದ ವಿವಿಧ ಪಕ್ಷ, ಪಕ್ಷೇತರ ನಾಯಕರು, ಸಮಾಜದ ಮುಖಂಡರು ನಮ್ಮ ಸಂಪರ್ಕದಲ್ಲಿದ್ದಾರೆ. ಅವರೆಲ್ಲ ಕೆಲಸವನ್ನು ನೋಡಿ ಮತ ನೀಡುವರು. ಅವರು ಚುನಾವಣೆಯಲ್ಲಿ ಸಹಕಾರ ನೀಡಲಿದ್ದಾರೆಂಬ ಭರವಸೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬೆಳಗಾವಿ ಲೋಕಸಭಾ ಚುನಾವಣೆಗೆ ಸ್ವಯಂ ಪ್ರೇರಿತವಾಗಿ ಸ್ಪರ್ಧೆ ಮಾಡಿದ್ದೇನೆ. ಇಲ್ಲಿ ಏನೇ ಆದರೂ ನಾನೇ ಹೊಣೆ ಆಗಿರುತ್ತೇನೆ. ಅದೇ ರೀತಿ ರಾಜ್ಯದಲ್ಲಿ ಹಾಗೂ ದೇಶದಲ್ಲಿ ಆರ್ಥಿಕ ಏರಿಳಿತವಾದರೆ ಸರ್ಕಾರವೇ ಹೊಣೆಯಾಗುತ್ತದೆ ಎಂದು ಬೆಳಗಾವಿ ಲೋಕಸಭಾದ ಕಾಂಗ್ರೆಸ್‌ ಅಭ್ಯರ್ಥಿ ಸತೀಶ ಜಾರಕಿಹೊಳಿ ತಿಳಿಸಿದ್ದಾರೆ. 

ಕಾಂಗ್ರೆಸ್‌ ಸೇರಲು ವಿವಿಧ ನಾಯಕರಿಂದ ಅರ್ಜಿ:

ಬೆಳಗಾವಿ ಜಿಲ್ಲೆ ವಿವಿಧ ನಾಯಕರು ಕಾಂಗ್ರೆಸ್‌ ಪಕ್ಷಕ್ಕೆ ಸೇರಲು ಅರ್ಜಿ ಕೊಟ್ಟಿದ್ದಾರೆ. ಅರ್ಜಿಯನ್ನು ಸಹ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರಿಗೆ ಕಳಿಸಲಾಗಿದೆ. ದಿನಾಂಕ ನಿಗದಿ ಮಾಡಿ ಅರ್ಜಿ ನೀಡಿದವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗುತ್ತದೆ ಎಂದರು. ಈ ಸಂದರ್ಭದಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಉಪಸ್ಥಿತರಿದ್ದರು.