ಬೆಳಗಾವಿ:(ಸೆ.21) ಅನರ್ಹಗೊಂಡ ಶಾಸಕರ ಕ್ಷೇತ್ರಗಳ ಉಪಚುನಾವಣೆ ದಿನಾಂಕ ಘೋಷಣೆಯಾಗುತ್ತಿದ್ದಂತೆ ಮಾಜಿ ಸಚಿವ ಸತೀಶ ಜಾರಕಿಹೊಳಿ ಅವರು ಗೋಕಾಕ‌ ಕ್ಷೇತ್ರದಲ್ಲಿ ಬೀಡುಬಿಟ್ಟಿದ್ದಾರೆ. ಇಂದು‌ ಮತ್ತು ನಾಳೆ‌ ಗೋಕಾಕಿನಲ್ಲಿ ವಾಸ್ತವ್ಯ ಹೂಡಲಿರುವ ಸತೀಶ ಜಾರಕಿಹೊಳಿ ಪಕ್ಷ ಸಂಘಟನೆ, ಪ್ರಮುಖ‌ ಕಾಂಗ್ರೆಸ್ ಮುಖಂಡರ ಜತೆಗೆ ಚರ್ಚೆ ನಡೆಸಲಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 


ಕಾಂಗ್ರೆಸ್ ಶಾಸಕ ರಮೇಶ ಜಾರಕಿಹೊಳಿ ಅನರ್ಹತೆಯಿಂದ‌ ಗೋಕಾಕ‌ ಕ್ಷೇತ್ರ ತೆರವಾಗಿದೆ. ಕಳೆದ ಎರಡು ದಶಕಗಳಿಂದ ಗೋಕಾಕ ಕ್ಷೇತ್ರ ಕಾಂಗ್ರೆಸ್ ‌ಭದ್ರಕೋಟೆ ಆಗಿತ್ತು,  ಆದರೆ ಇದೀಗ ಈ ಕ್ಷೇತ್ರ ‌ಉಳಿಸಿಕೊಳ್ಳಲು ಕಾಂಗ್ರೆಸ್ ‌ಬಹಳಷ್ಟು ಕಸರತ್ತು ನಡೆಸುತ್ತಿದೆ. ಹೀಗಾಗಿ ಪಕ್ಷ ಸಂಘಟನೆಗೆ ಸತೀಶ ಜಾರಕಿಹೊಳಿ ಅವರು ಒತ್ತು ಕೊಟ್ಟಿದ್ದಾರೆ. 

ಲಖನ್ ಜಾರಕಿಹೊಳಿ ಸ್ಪರ್ಧೆ ಬಹುತೇಕ ಖಚಿತ


ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಲು ಉದ್ಯಮಿ ಲಖನ್ ಜಾರಕಿಹೊಳಿ ಸ್ಪರ್ಧೆ ಬಹುತೇಕ ಖಚಿತವಾಗಿದೆ ಎದು ತಿಳಿದು ಬಂದಿದೆ.  ಆದರೆ, ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆಗಳು ಇನ್ನೂ ಹೊರಬಿದ್ದಿಲ್ಲ. ಗೋಕಾಕ ಕ್ಷೇತ್ರದಾದ್ಯಂತ ಲಖನ್ ಜಾರಕಿಹೊಳಿ ಅವರ ಹೆಸರು ಬಲವಾಗಿ ಕೇಳಿ ಬರುತ್ತಿದೆ. ಗೋಕಾಕ ಕ್ಷೇತ್ರದಲ್ಲಿ ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಅವರೂ ಕೂಡ ಪ್ರಚಾರ ಕೈಗೊಂಡಿದ್ದಾರೆ. ಇಂದು ಬೆಳಿಗ್ಗೆ ಗೋಕಾಕ ಪಟ್ಟಣದಲ್ಲಿ ರಮೇಶ್ ಜಾರಕಿಹೊಳಿ ಅವರು ಮತದಾರರನ್ನು ಭೇಟಿ ಮಾಡಿ ಚರ್ಚೆ ಮಾಡಿದ್ದಾರೆ. 


ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಗೆ ಅಕ್ಟೋಬರ್ 21ರಂದು ಚುನಾವಣೆ ನಡೆಯಲಿದ್ದು, ಅ.24ಕ್ಕೆ ಮತ ಎಣಿಕೆ ಕಾರ್ಯ ನಡೆಯಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ಘೋಷಿಸಿದೆ.