ಸಮಾಜಕ್ಕೆ ನೀಡುವ ದಾನದಿಂದ ಸಂತೃಪ್ತಿ: ರಂಜನ್
ಸಮಾಜದ ಒಳಿತಿಗಾಗಿ ಆಯೋಜಿಸಲಾಗುವ ಕಾರ್ಯಗಳಲ್ಲಿ ನಮ್ಮ ದುಡಿಮೆಯ ಸ್ವಲ್ಪ ಭಾಗವನ್ನು ದಾನದ ರೂಪದಲ್ಲಿ ವಿನಿಯೋಗ ಮಾಡಿದಾಗ ಸಂತೃಪ್ತಿ ಕಂಡುಕೊಳ್ಳಬಹುದು ಎಂದು ಮಡಿಕೇರಿ ಶಾಸಕ ಎಂ. ಪಿ. ಅಪ್ಪಚ್ಚು ರಂಜನ್ ಹೇಳಿದರು.
ಮೂರ್ನಾಡು (ನ.27) : ಸಮಾಜದ ಒಳಿತಿಗಾಗಿ ಆಯೋಜಿಸಲಾಗುವ ಕಾರ್ಯಗಳಲ್ಲಿ ನಮ್ಮ ದುಡಿಮೆಯ ಸ್ವಲ್ಪ ಭಾಗವನ್ನು ದಾನದ ರೂಪದಲ್ಲಿ ವಿನಿಯೋಗ ಮಾಡಿದಾಗ ಸಂತೃಪ್ತಿ ಕಂಡುಕೊಳ್ಳಬಹುದು ಎಂದು ಮಡಿಕೇರಿ ಶಾಸಕ ಎಂ. ಪಿ. ಅಪ್ಪಚ್ಚು ರಂಜನ್ ಹೇಳಿದರು. ಹೊದ್ದೂರು ಗ್ರಾಮದ ಕಬಡಕೇರಿಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಆರ್.ಐ.ಡಿ.ಎಫ್ ಯೋಜನೆಯಡಿ ನಿರ್ಮಿಸಿದ ನೂತನ ಅಂಗನವಾಡಿ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು.
ಅಂಗನವಾಡಿ ಕಟ್ಟಡದ ಕಾಮಗಾರಿ ಉತ್ತಮವಾಗಿದ್ದು, ಮಾದರಿ ಅಂಗನವಾಡಿಯಾಗಿ ಮಾರ್ಪಟ್ಟಿದೆ. ಹಲವಾರು ಕಡೆ ಗುತ್ತಿಗೆದಾರರು ಬಂದ ಅನುದಾನದಲ್ಲಿ ಪೂರ್ತಿ ಹಣವನ್ನು ಉಪಯೋಗ ಮಾಡದೆ ಕಳಪೆ ಮಟ್ಟದ ಕಟ್ಟಡಗಳನ್ನು ನಿರ್ಮಿಸಿ ಸರ್ಕಾರಕ್ಕೆ, ಸಾರ್ವಜನಿಕರಿಗೆ ಮೋಸಮಾಡುತ್ತಾರೆ. ಅಂತಹ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸುವ ಕಾರ್ಯಗಳು ಕೂಡ ಆಗುತ್ತಿದೆ. ಕೇಂದ್ರ ಸರ್ಕಾರದಿಂದ ಜಿಲ್ಲೆಗೆ 300 ಕೋಟಿ ರು. ಅನುದಾನ ಬಂದಿದ್ದು, ಈಗಾಲೇ ಹಲವಾರು ಕಡೆಗಳಲ್ಲಿ ಕಾಮಗಾರಿಗಳು ಪ್ರಾರಂಭಗೊಂಡಿದೆ ಎಂದರು.
Kodagu: ಬನಶಂಕರಿ ದೇವಿಯ ಜಾತ್ರಾ ಉತ್ಸವ ಪ್ರಯುಕ್ತ ಕೊಡಗಿನಲ್ಲಿ ರೋಚಕ ಎತ್ತಿನಗಾಡಿ ಓಟ
ಹೊದ್ದೂರು ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಯ ಕಾರ್ಯವೈಖರಿಯನ್ನು ಶ್ಲಾಘಿಸಿದ ಅವರು, ಗ್ರಾಮಗಳಲ್ಲಿ ಪಂಚಾಯಿತಿ ಸದಸ್ಯರು, ಅಧಿಕಾರಿಗಳು ಮತ್ತು ಸಾರ್ವಜನಿಕರ ಮಧ್ಯೆ ಹೊಂದಾಣಿಕೆ ಇದ್ದಾಗ ಗ್ರಾಮಗಳ ಅಭಿವೃದ್ಧಿ ಸಾಧ್ಯ ಎಂದು ತಿಳಿಸಿದರು. ಮಡಿಕೇರಿ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್ ಮಾತನಾಡಿ, ಸಾರ್ವಜನಿಕರ ಸಹಕಾರವಿದ್ದರೆ ಗ್ರಾಮಗಳಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬಹುದು ಎಂದು ಹೇಳಿದರು. ಹೊದ್ದೂರು ಗ್ರಾಮ ಪಂಚಾಯಿತಿ ಸದಸ್ಯ ಹಮೀದ್ ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎ.ಎ. ಅಬ್ದುಲ್ಲ ಮಾತನಾಡಿದರು.
ಹೊದ್ದೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಿ.ಎ. ಕುಸುಮಾವತಿ ಅಧ್ಯಕ್ಷತೆವಹಿಸಿದ್ದರು. ನೂತನ ಅಂಗನವಾಡಿ ಕೇಂದ್ರದ ನಿರ್ಮಾಣದಲ್ಲಿ ಹಲವಾರು ರೀತಿಯಲ್ಲಿ ಸಹಾಯ ಸಹಕಾರ ನೀಡಿದ ಸಾರ್ವಜನಿಕರಿಗೆ ಗೌರವಾರ್ಪಣೆ ಮಾಡಲಾಯಿತು. ಕಟ್ಟಡ ಗುತ್ತಿಗೆದಾರ ಎನ್. ಜಗದೀಶ್, ಎಂಜಿನಿಯರ್ ಸತೀಶ್, ನಿವೃತ್ತ ಅಂಗನವಾಡಿ ಕಾರ್ಯಕರ್ತೆ ಜಾನಕಿ ಅವರನ್ನು ಸನ್ಮಾನಿಸಲಾಯಿತು. ಮಾದರಿ ಅಂಗನವಾಡಿಯಾಗಿ ಸಜ್ಜುಗೊಳ್ಳಲು ಶ್ರಮಿಸಿದ ಅಂಗನವಾಡಿ ಕಾರ್ಯಕರ್ತೆ ಎಂ.ಇ. ತಂಝೀನಾ ಭಾನು ಅವರನ್ನು ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಅಂಗನವಾಡಿ ಮಕ್ಕಳಿಂದ ಛದ್ಮವೇಷ ಸ್ಪರ್ಧೆ ನಡೆಯಿತು.
ಇಂದು, ನಾಳೆ ಕೊಡವ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿ
ವೇದಿಕೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಂಜುನಾಥ್ ಎನ್., ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಜಿಲ್ಲಾ ನಿರೂಪಣಾ ಅಧಿಕಾರಿ ಪಿ.ಎ.ಪೂಣಚ್ಚ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಿ.ಪಿ. ಸವಿತ ಕೀರ್ತನ್, ಜಿಲ್ಲಾ ಸ್ತ್ರೀಶಕ್ತಿ ಒಕ್ಕೂಟದ ರಾಜ್ಯಾಧ್ಯಕ್ಷೆ ರೆಹನಾ ಸುಲ್ತಾನ್, ಸಹಾಯಕ ಶಿಶು ಅಭವೃದ್ಧಿ ಯೋಜನಾಧಿಕಾರಿ ಶೀಲಾ ಅಶೋಕ್, ಮೂರ್ನಾಡು ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ವಿಜಯ ಕುಮಾರ್ ಎಸ್.ಪಿ., ಹೊದ್ದೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಅಧ್ಯಕ್ಷ ನೆರವಂಡ ಸಂಜಯ್ ಪೂಣಚ್ಚ, ಗ್ರಾಮ ಪಂಚಾಯಿತಿ ಸದಸ್ಯರಾದ ವಾಂಚೀರ ಅಜೆಯ್, ನವೀನ್, ಕೆ.ಆರ್. ಅನಿತ, ಮೊಣ್ಣಪ್ಪ, ಅನಿತ, ಅಂಗನವಾಡಿ ಕಾರ್ಯಕರ್ತೆಯರ ಸಂಘದ ಅಧ್ಯಕ್ಷೆ ಪವಿತ್ರ, ಅಂಗನವಾಡಿ ಕಾರ್ಯಕರ್ತೆ ಎಂ.ಇ. ತಂಝೀನಾ ಭಾನು ಉಪಸ್ಥಿತರಿದ್ದರು.