ಬೆಂಗಳೂರು(ಫೆ.09)  ಜ್ಞಾನದ ದೇವಿ ಸರಸ್ವತಿ ಮಾತೆ ಆರಾಧನೆ ಭಾರತದ ಸಂಪ್ರದಾಯ. ಬೆಂಗಳೂರಿಗೆ ಬಂದು ನೆಲೆಸಿರುವ ಬೆಂಗಾಳಿಗರು ಸರಸ್ವತಿ ದೇವಿ ಆರಾಧನೆ ನಡೆಸಿಕೊಂಡು ಬರುತ್ತಿದ್ದಾರೆ.

ಬೆಂಗಳೂರಿನ ಕೊತ್ತನೂರು ಆರ್ಕಿಡ್ ವುಡ್ಸ್ ಅಪಾರ್ಟ್‌ಮೆಂಟ್‌ನಲ್ಲಿ ಫೆ. 10ರಂದು ಬೆಳಗ್ಗೆ 9.30ಕ್ಕೆ ಸರಸ್ವತಿ ದೇವಿಯ ಆರಾಧನೆ ನಡೆಯಲಿದೆ. ಇದಕ್ಕಾಗಿ 90ರ ದಶಕದ ಕೋಲ್ಕತಾ ಮಾದರಿಯ ಶಾಲೆಯನ್ನು ಸಹ ನಿರ್ಮಾಣ ಮಾಡಲಾಗಿದೆ.

ಬೆಂಗಳೂರಿನ ಕರಾವಳಿಗರ ಉತ್ಸವ ನಮ್ಮೂರ ಹಬ್ಬ!

ಸರಸ್ವತಿಗೆ ವಂದನೆ:  ಆರು ಅಡಿ ಎತ್ತರದ ಸರಸ್ವತಿ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗುತ್ತದೆ. 9 ಅಡಿ ಪುಸ್ತಕವನ್ನು ಸಹ ಇದೇ ಸಂದರ್ಭದಲ್ಲಿ ಪೂಜೆ ಮಾಡಲಾಗುತ್ತದೆ.  ದೇವಿಯ ಮುಂದೆ ಲೇಖನಿ, ಪುಸ್ತಕ ಮತ್ತು ಸ್ಲೇಟ್ ಇಟ್ಟು ಆರಾಧನೆ ಮಾಡಲಾಗುತ್ತದೆ.  

ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮಹಿಳೆಯರು ಹಳದಿ ಸೀರೆಯನ್ನುಟ್ಟು ದೇವಿಯನ್ನು ಆರಾಧಿಸಲಿದ್ದಾರೆ. ಬಂಗಾಳದ ಶಾಲೆಗಳ ಸಂಸ್ಕೃತಿ ಸಾರುವ  ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ. ಕಳೆದ ಮೂರು ವರ್ಷಗಳಿಂದ ನಿರಂತರವಾಗಿ ಸರಸ್ವತಿ ಮತ್ತು ದುರ್ಗಾ ಪೂಜೆ ನಡೆಸಿಕೊಂಡು ಬರಲಾಗುತ್ತಿದ್ದು ಬಂಗಾಳದಿಂದ ಹೊರಗಿರುವವರಿಗೆ, ಹೊಸ ಪೀಳಿಗೆಗೆ ಸಂಪ್ರದಾಯ ಮತ್ತು ಸಂಸ್ಕೃತಿಯ ಪರಿಚಯ ಮಾಡಿಕೊಡಲಾಗುತ್ತಿದೆ.

ಸರಸ್ವತಿ ಪೂಜೆ ಇತಿಹಾಸ: ವಿದ್ಯಾ ದೇವಿ ಸರಸ್ವತಿ ಆರಾಧನೆ ಮಾಡುವ ಮುಖಾಂತರ ಜ್ಞಾನ ಮತ್ತು ಶಿಕ್ಷಣದ ಮಹತ್ವ ಸಾರಿಕೊಂಡು ಬರುವ ಸಂಪ್ರದಾಯವಿದೆ. ನವರಾತ್ರಿ ಸಂದರ್ಭದಲ್ಲಿಯೂ ಆರಾಧನೆ ಮಾಡಲಾಗುತ್ತದೆ. ಶಾಲೆಗಳಲ್ಲಿ ಮಕ್ಕಳಿಗೆ  ಕಲಿಕೆಯ ಆರಂಭದ ಪುಸ್ತಕಗಳು ಅಂದರೆ ಅಂಕಲಿಪಿ, ವರ್ಣಮಾಲೆಯ ಮಹತ್ವ ತಿಳಿ ಹೇಳಿ ಆ ಪುಸ್ತಕಗಳಿಗೂ ಪೂಜೆ ಮಾಡಲಾಗುತ್ತದೆ. 

ದುರ್ಗಾ ಪೂಜೆ, ಕಾಳಿ ಆರಾಧನೆ, ಆಯುಧ ಪೂಜೆ ಎಂಬ ಹೆಸರುಗಳಲ್ಲಿಯೂ ದೇವಿ ಆರಾಧನೆ ನಡೆಯುತ್ತದೆ. ದಕ್ಷಿಣದ ರಾಜ್ಯಗಳಾದ ಆಂಧ್ರಪ್ರದೇಶ, ಕರ್ನಾಟಕ, ತಮಿಳುನಾಡು ಮತ್ತು ಕೇರಳಗಳಲ್ಲಿ ನವರಾತ್ರಿಯ ಮೂರು ದಿವಸ  ಸರಸ್ವತಿ ಪೂಜೆಗೆ ವಿಶೇಷ ಆದ್ಯತೆ ನೀಡಲಾಗುತ್ತದೆ. ಪೂಜೆಗೆ ಇಟ್ಟ ಪುಸ್ತಕಗಳನ್ನು ಪೂಜೆ ಮುಗಿಯುವವರೆಗೂ ಮುಟ್ಟಬಾರದು ಎಂಬ ನಂಬಿಕೆಯೂ ಇದೆ.

ಆಧುನಿಕ ಸಮಾಜದ ಮೊಬೈಲ್ ಯುಗದಲ್ಲಿ ನಮ್ಮತನ ಕಳೆದು ಹೋಗುತ್ತಿದೆ ಎಂಬ ಭಾವ ಎದುರಾಗುವ ಸಂದರ್ಭ ಬಂದಾಗಲೆಲ್ಲ ಇಂಥ ಒಂದೊಂದು ಸುದ್ದಿಗಳು ನಮ್ಮ ಬಾಲ್ಯ ಮತ್ತು ದೇಶದ ಸಂಸ್ಕೃತಿ ನೆನಪು ಮಾಡಿಕೊಡುತ್ತದೆ.