Asianet Suvarna News Asianet Suvarna News

ರಾಜಕೀಯ ನಿವೃತ್ತಿ ಸವಾಲು ಹಾಕಿದ ಸಾರಾ ಮಹೇಶ್

ಕಳೆದ 20 ವರ್ಷಗಳ ನನ್ನ ರಾಜಕೀಯ ಜೀವನದಲ್ಲಿ ಅಧಿಕಾರಿಗಳು ಮತ್ತು ಗುತ್ತಿಗೆದಾರದಿಂದ ನಯಾ ಪೈಸೆ ಲಂಚ ಪಡೆದಿರುವುದು ಸಾಬೀತಾದರೆ ರಾಜಕೀಯ ನಿವೃತ್ತಿ ಘೋಷಿಸುವುದಾಗಿ ಮಾಜಿ ಸಚಿವ ಸಾ.ರಾ. ಮಹೇಶ್ ಹೇಳಿದರು.

Sara Mahesh challenged political retirement snr
Author
First Published Apr 21, 2024, 12:00 PM IST

  ಕೆ.ಆರ್. ನಗರ :  ಕಳೆದ 20 ವರ್ಷಗಳ ನನ್ನ ರಾಜಕೀಯ ಜೀವನದಲ್ಲಿ ಅಧಿಕಾರಿಗಳು ಮತ್ತು ಗುತ್ತಿಗೆದಾರದಿಂದ ನಯಾ ಪೈಸೆ ಲಂಚ ಪಡೆದಿರುವುದು ಸಾಬೀತಾದರೆ ರಾಜಕೀಯ ನಿವೃತ್ತಿ ಘೋಷಿಸುವುದಾಗಿ ಮಾಜಿ ಸಚಿವ ಸಾ.ರಾ. ಮಹೇಶ್ ಹೇಳಿದರು.

ಸಾಲಿಗ್ರಾಮ ತಾಲೂಕಿನ ದೇವಿತಂದ್ರೆ ಗ್ರಾಮದಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದ ಎನ್.ಡಿಎ ಅಭ್ಯರ್ಥಿ ಎಚ್.ಡಿ. ಕುಮಾರಸ್ವಾಮಿ ಅವರ ಪರವಾಗಿ ಮತಯಾಚಿಸಿ ಮಾತನಾಡಿದ ಅವರು, ನನ್ನ ರಾಜಕೀಯ ಜೀವನದಲ್ಲಿ ಜನರ ನಿರೀಕ್ಷೆಗೆ ವಿರುದ್ಧವಾಗಿ ಎಂದು ನಡೆದುಕೊಂಡಿಲ್ಲ ಎಂದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷಗಳಾಗಿದ್ದರೂ ಈವರೆಗೆ ಕೆ.ಆರ್. ನಗರ ವಿಧಾನಸಭಾ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ನಡೆದಿಲ್ಲ, ಇದನ್ನು ಜನರು ಪ್ರಶ್ನಿಸಬೇಕು ಎಂದು ತಿಳಿಸಿದರು.

ಎಚ್‍.ಡಿ. ಕುಮಾರಸ್ವಾಮಿ ಅವರ ಸಂಪುಟದಲ್ಲಿ ಮಂತ್ರಿಯಾಗಿದ್ದ ಅವಧಿಯಲ್ಲಿ ನಾನು ಒಂದು ವರ್ಷದಲ್ಲಿಯೇ ಕ್ಷೇತ್ರಕ್ಕೆ ಒಂದು ಸಾವಿರ ಕೋಟಿ ರು. ಗಳ ಅನುದಾನ ತಂದು ಅಭಿವೃದ್ಧಿ ಮಹಾಪೂರವನ್ನೇ ಹರಿಸಿದ್ದೆ, ಆದರೆ ಈಗ ಆಯ್ಕೆಯಾಗಿರುವವರು ಎಷ್ಟು ಹಣ ತಂದಿದ್ದಾರೆಂದು ಕೇಳಿದರು.

ನೀರಾವರಿ ಸಚಿವರಾಗಿದ್ದ ಮಾಜಿ ಪ್ರಧಾನಮಂತ್ರಿ ಎಚ್. ಡಿ. ದೇವೇಗೌಡರು ಹಾರಂಗಿ ಜಲಾಶಯ ನಿರ್ಮಾಣ ಮಾಡಿ, ಈ ಭಾಗದ ಜನರಿಗೆ ಬದುಕು ಕಟ್ಟಿಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದು, ಇದನ್ನು ನಾವು ಎಂದಿಗೂ ಮರೆಯಬಾರದು ಎಂದು ನುಡಿದರು.

ವಿಷದ ಬಾಟಲಿ ಹಿಡಿದು ಮತ ಕೇಳಿದರೆ ಸಾಕು

ಇತ್ತೀಚಿನ ದಿನಗಳಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಆಯ್ಕೆಯಾಗಿ ಶಾಸಕರಾಗಲು ಸಮಾಜ ಸೇವೆ ಮತ್ತು ಬಡವರ ಪರವಾದ ಕೆಲಸ ಮಾಡಬೇಕಾಗಿಲ್ಲ, ಅದರ ಬದಲು ಮತದಾರರ ಮನೆ ಬಾಗಿಲಿಗೆ ಹೋಗಿ ವಿಷದ ಬಾಟಲಿ ಹಿಡಿದು ನೀವು ಮತ ನೀಡದಿದ್ದರೆ ನಮ್ಮ ಕುಟುಂಬ ಸಾಯುತ್ತದೆ ಎಂದು ಹೇಳಿದರೆ ಸಾಕು ಎಂದು ಪರೋಕ್ಷವಾಗಿ ಶಾಸಕ ಡಿ. ರವಿಶಂಕರ್ ವಿರುದ್ಧ ವಾಗ್ದಾಳಿ ನಡೆಸಿದರು.

ಎರಡು ಕೋಟಿಗೂ ಅಧಿಕ ಹಣ ವಸೂಲಿ

ಕೆ.ಆರ್. ನಗರ ಪಟ್ಟಣದ ವ್ಯಾಪ್ತಿಯಲ್ಲಿ ಇರುವ 72 ಪುರಸಭೆ ವಾಣಿಜ್ಯ ಮಳಿಗೆಗಳ ಹರಾಜುದಾರರಿಂದ ಮಾಡಿದ್ದು, ಇದರಿಂದ ಮೂರು ತಿಂಗಳಿನಿಂದ ಬಾಡಿಗೆದಾರರ ಹೆಸರಿಗೆ ನೋಂದಣಿಯಾಗದೆ ಉಳಿದಿದ್ದು, ಇದಕ್ಕೆ ಯಾರು ಹೊಣೆ ಎಂದು ಪ್ರಶ್ನಿಸಿದರು.

ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಗೆಲುವು ನಿಶ್ಚಿತ ಎಂದು ಭರವಸೆ ವ್ಯಕ್ತಪಡಿಸಿದ ಅವರು, ಸಂಸದರಾಗಿ ಆಯ್ಕೆಯಾದರೆ ಆನಂತರ ನರೇಂದ್ರ ಮೋದಿ ಅವರ ಸಂಪುಟದಲ್ಲಿ ಸಚಿವರಾಗಲಿದ್ದು, ಇದರಿಂದ ರಾಜ್ಯ ಮತ್ತು ಕ್ಷೇತ್ರದ ಅಭಿವೃದ್ಧಿಗೆ ಅನುಕೂಲವಾಗಲಿದೆ ಎಂದರು.

ಆನಂತರ ಅವರು ತಂದ್ರೆ ಕೊಪ್ಪಲು, ಮೇಲೂರು, ಎಲೆ ಮುದ್ದನಹಳ್ಳಿ, ಸಂಕನಹಳ್ಳಿ, ಬಾಚಹಳ್ಳಿ, ಕೆಂಚನಹಳ್ಳಿ, ಸಂಕನಹಳ್ಳಿ, ವಡ್ಡರಕೊಪ್ಪಲು, ಕೊಡಿಯಾಲ, ಹಳೆಮಿರ್ಲೆ ಸೇರಿದಂತೆ ಇತರ ಗ್ರಾಮಗಳಿಗೆ ತೆರಳಿ ಮತಯಾಚಿಸಿದರು.

ಜಿಲ್ಲಾ ಗ್ರಾಮಾಂತರ ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ಎಂ.ಡಿ. ದಾಕ್ಷಾಯಿಣಿ, ಜಿಪಂ ಮಾಜಿ ಸದಸ್ಯ ಎಂ.ಟಿ. ಕುಮಾರ್, ಜಿಲ್ಲಾ ಗ್ರಾಮಾಂತರ ಬಿಜೆಪಿ ಮಾಜಿ ಉಪಾಧ್ಯಕ್ಷ ಹೊಸಹಳ್ಳಿ ವೆಂಕಟೇಶ್, ತಾಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿ ಉಮಾಶಂಕರ, ಬಿಜೆಪಿ ಮುಖಂಡರಾದ ಎಚ್.ವಿ. ಅನಿಲ್, ಮಾರ್ಕಂಡೇಯ ಸ್ವಾಮಿ, ತಾಲೂಕು ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಮಹೇಶ್, ಜೆಡಿಎಸ್ ಮುಖಂಡರಾದ ಮಂಜೇಗೌಡ, ಶ್ರೀಧರ, ಕೆ.ಎಸ್. ಮಲ್ಲಪ್ಪ, ಎಸ್.ವಿ. ಪ್ರಕಾಶ್ ಇದ್ದರು.

Follow Us:
Download App:
  • android
  • ios