ವಿಶ್ವದ ಏಕೈಕ ಸಂಸ್ಕೃತ ಪತ್ರಿಕೆ ಸಂಪಾದಕ ಸಂಪತ್ ವಿಧಿವಶ
* ಮೈಸೂರಿನ ಸುಧರ್ಮ ಪತ್ರಿಕೆಯ ಸಂಪಾದಕ
* 2009ರಲ್ಲಿ ಸುಧರ್ಮ ಇ-ಪೇಪರ್ ಆವೃತ್ತಿ ಪ್ರಾರಂಭ
* ಸಂಪತ್ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ
ಮೈಸೂರು(ಜು.01): ವಿಶ್ವದ ಏಕೈಕ ಸಂಸ್ಕೃತ ಪತ್ರಿಕೆ ಸುಧರ್ಮ ಸಂಪಾದಕ, ಪದ್ಮಶ್ರೀ ಗೌರವಕ್ಕೆ ಪಾತ್ರವಾಗಿರುವ ಕೆ.ವಿ. ಸಂಪತ್‌ಕುಮಾರ್ (64) ಅವರು ಬುಧವಾರ ಮಧ್ಯಾಹ್ನ ಹೃದಯಾಘಾತದಿಂದ ನಿಧನರಾದರು.
1970ರಲ್ಲಿ, ಸಂಸ್ಕೃತ ಭಾಷೆಯನ್ನು ಜನಪ್ರಿಯಗೊಳಿಸಲು ಮತ್ತು ಜನರಿಗೆ ತಲುಪಿಸುವ ಉದ್ದೇಶದಿಂದ ವರದರಾಜ ಅಯ್ಯಂಗಾರ್ ಸುಧರ್ಮ ಪತ್ರಿಕೆ ಪ್ರಾರಂಭಿಸಿದರು. ಅವರ ನಿಧನಾ ನಂತರ ಸಂಪಾದಕ ಹುದ್ದೆ ವಹಿಸಿಕೊಂಡ ಪುತ್ರ ಕೆ.ವಿ.ಸಂಪತ್ ಕುಮಾರ್ ಹಾಗೂ ಇವರ ಪತ್ನಿ ಜಯಲಕ್ಷ್ಮಿ ಪತ್ರಿಕೆಯನ್ನು ಈವರೆಗೆ ಅಚ್ಚುಕಟ್ಟಾಗಿ ನಡೆಸಿಕೊಂಡು ಬಂದಿದ್ದರು.
ಸಂಪತ್ ಕುಮಾರ್ ತಮ್ಮ ತಂದೆಯ ಇಚ್ಛೆಯಂತೆ ಸಂಸ್ಕೃತ ಭಾಷೆ ಪಸರಿಸುವ ಕೆಲಸವನ್ನು ಶ್ರದ್ಧೆಯಿಂದ ನಿರ್ವಹಿಸಿಕೊಂಡು ಬಂದಿದ್ದರು. 2009ರಲ್ಲಿ ಸುಧರ್ಮ ಇ-ಪೇಪರ್ ಆವೃತ್ತಿ ಪ್ರಾರಂಭಿಸಿ ಜಗತ್ತಿನಾದ್ಯಂತ ಹಲವರು ಸಂಸ್ಕೃತ ಪತ್ರಿಕೆಯನ್ನು ಓದುವಂತೆ ಮಾಡಿದ್ದರು.
ಹೂವಿನಹಡಗಲಿ: ಮೈಲಾರಲಿಂಗೇಶ್ವರ ಕಾರ್ಣಿಕ ನುಡಿಯುತ್ತಿದ್ದ ಗೊರವಯ್ಯ ಇನ್ನಿಲ್ಲ
ಸುಧರ್ಮ ದಿನಪತ್ರಿಕೆಯ 50 ವರ್ಷಗಳ ಸೇವೆ ಪರಿಗಣಿಸಿ 2 ವರ್ಷಗಳ ಹಿಂದೆ ಕೇಂದ್ರ ಸರ್ಕಾರ ಸಂಪತ್ ಕುಮಾರ್ ದಂಪತಿಗೆ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ಪ್ರಕಟಿಸಿತ್ತು. ಆದರೆ ಪ್ರಶಸ್ತಿ ಸ್ವೀಕರಿಸುವ ಮುನ್ನವೇ ಸಂಪತ್ ಕುಮಾರ್ ನಿಧನರಾಗಿದ್ದಾರೆ.
ಸಂಪತ್ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ
ಸಂಪತ್ ಕುಮಾರ್ ನಿಧನಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. 'ಶ್ರೀ ಕೆ.ವಿ. ಸಂಪತ್ ಕುಮಾರ್ ಅವರು ಒಬ್ಬ ಸ್ಪೂರ್ತಿದಾಯಕ ವ್ಯಕ್ತಿ. ಅವರು ಸಂಸ್ಕೃತದ ಉಳಿವು ಹಾಗೂ ಜನಪ್ರಿಯತೆಗೆ ಅವಿರತ ಶ್ರಮಪಟ್ಟಿದ್ದಾರೆ. ಅದರಲ್ಲೂ ಯುವಪೀಳಿಗೆಯಲ್ಲಿ ಸಂಸ್ಕೃತ ಪರಿಸರಿಸುವಲ್ಲಿ ಅವರ ಪಾತ್ರ ಹಿರಿದು' ಎಂದು ಟ್ವೀಟ್ ಮಾಡಿದ್ದಾರೆ.