Asianet Suvarna News Asianet Suvarna News

ಲೋಕಸಭೆ ಚುನಾವಣೆ 2024: ಈ ಬಾರಿ ಕೇರಳ, ಗೋವಾದಲ್ಲಿ ಸನ್ನಿಧಿ ಮತದಾನ ಜಾಗೃತಿ

ಮತದಾನ ಜಾಗೃತಿ ಕುರಿತಾಗಿ ಸನ್ನಿಧಿ ಚುನಾವಣಾ ಆಯೋಗಕ್ಕೆ ಪತ್ರವನ್ನು ಬರೆದಿದ್ದು, ಈಕೆಯ ಪ್ರಯತ್ನಕ್ಕೆ ಆಯೋಗವೂ ಶ್ಲಾಘಿಸಿದೆ, ಖುದ್ದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಅವರೂ ಸನ್ನಿಧಿ ಪ್ರಯತ್ನಕ್ಕೆ ಭೇಷ್ ಎಂದಿದ್ದಾರೆ. ರಾಜ್ಯ ಚುನಾವಣಾ ಆಯೋಗದ ಮುಖ್ಯಚುನಾವಣಾಧಿಕಾರಿಗಳಿಗೆ ಬರೆದಿರುವ ಪತ್ರವನ್ನು ಪುರಸ್ಕರಿಸಿರುವ ಆಯೋಗ ಅವರು ಕಳುಹಿಸಿರುವ ಪ್ರಸ್ತಾವನೆಯನ್ನು ನಿಯಮಾನುಸಾರ ಪರಿಶೀಲಿಸಿ ಅಗತ್ಯ ಕ್ರಮಕೈಗೊಳ್ಳುವಂತೆ ಆಯೋಗ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಆದೇಶಿಸಿದೆ. 
 

Sannidhi Voting Awareness in Kerala and Goa in Lok Sabha Election 2024 grg
Author
First Published Mar 17, 2024, 11:00 PM IST

ಮೌನೇಶ ವಿಶ್ವಕರ್ಮ

ಬಂಟ್ವಾಳ(ಮಾ.17):  ರಾಜಕೀಯ ಪಕ್ಷಗಳು ಅಭ್ಯರ್ಥಿಗಳ ಆಯ್ಕೆ, ಚುನಾವಣಾ ಪ್ರಚಾರಕ್ಕೆ ಸಿದ್ಧತೆ ನಡೆಸುತ್ತಿದ್ದರೆ, ಅಧಿಕಾರಿಗಳು ಶಾಂತಿಯುವಾಗಿ ಚುನಾವಣೆ ನಡೆಸುವ ನಿಟ್ಟಿನಲ್ಲಿ ಪೂರ್ವಭಾವಿ ಸಿದ್ಧತೆಯಲ್ಲಿ ಮುಳುಗಿದ್ದಾರೆ. ಇವೆಲ್ಲದರ ನಡುವೆ ಚುನಾವಣೆಯ ಸಂದರ್ಭದಲ್ಲಿ ಮತದಾನ ಜಾಗೃತಿಯ ಸಂಕಲ್ಪ ತೊಟ್ಟ ಪುಟ್ಟ ಪೋರಿಯೊಬ್ಬಳು ನೆರೆಯ ರಾಜ್ಯಗಳ ಎರಡು ಭಾಷೆಗಳನ್ನು ಕಲಿಯುತ್ತಿದ್ದಾಳೆ...!

ಹೌದು, ಇವಳ ಹೆಸರು ಸನ್ನಿಧಿ. ಮಾಣಿ ಪೆರಾಜೆಯ ಬಾಲವಿಕಾಸ ಆಂಗ್ಲಮಾಧ್ಯಮ ಶಾಲೆಯ ನಾಲ್ಕನೇ ತರಗತಿಯಲ್ಲಿ ಕಲಿಯುತ್ತಿದ್ದಾಳೆ. ಈಕೆ ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ತನ್ನದೇ ವಯಸ್ಸಿನ ಸಮೃದ್ಧಿ, ಪ್ರಣಮ್ಯಾ, ನಿರೀಕ್ಷಾ, ಕೀರ್ತಿ ಅವರನ್ನೆಲ್ಲ ಸೇರಿಸಿಕೊಂಡು, ಮನೆ, ಅಂಗಡಿ, ಹೋಟೆಲ್, ಆಟೋ ನಿಲ್ದಾಣಗಳು, ಹೀಗೆ ಗುರುತು ಪರಿಚಯದವರಷ್ಟೇ ಅಲ್ಲ, ಅಪರಿಚಿತರನ್ನೂ ಮಾತಾಡಿಸಿ, ನೀವು ಮತದಾನ ಮಾಡಿ, ಅದು ಕಡ್ಡಾಯ ಎಂಬುದನ್ನು ತನ್ನ ಮುದ್ದಾದ ಮಾತಲ್ಲಿ ಮನದಟ್ಟು ಮಾಡುತ್ತಿದ್ದಳು. ಈ ಸಂದರ್ಭದಲ್ಲಿ ಪುಟ್ಟ ಸನ್ನಿಧಿಯ ಕಾರ್ಯಕ್ಕೆ ವ್ಯಾಪಕ ಪ್ರಶಂಸೆ ಕೇಳಿಬಂದಿತ್ತು. ಇದೀಗ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿಯೂ ಮತದಾನ ಜಾಗೃತಿಯ ಸಂಕಲ್ಪ ತೊಟ್ಟಿರುವ ಸನ್ನಿಧಿ, ತಂದೆ ಲೋಕೇಶ್‌ ಕಶೆಕೋಡಿ, ತಾಯಿ ಶೀಲಾವತಿ ಹಾಗೂ ಸಹೋದರಿ ಸಮೃದ್ಧಿಯ ನೆರವಿನಿಂದ ಮಲೆಯಾಳ ಹಾಗೂ ಕೊಂಕಣಿ ಭಾಷೆಗಳನ್ನೂ ಕಲಿಯುತ್ತಿದ್ದಾಳೆ.

ಬಿಜೆಪಿ ಪಕ್ಷಕ್ಕೆ ಹೊಸ ಯುವಕರು ಬರಬೇಕು: ನಳಿನ್‌ ಕುಮಾರ್‌ ಕಟೀಲ್‌

ಆಯೋಗದಿಂದಲೂ ಪ್ರಶಂಸೆ: 

ಮತದಾನ ಜಾಗೃತಿ ಕುರಿತಾಗಿ ಈಕೆ ಚುನಾವಣಾ ಆಯೋಗಕ್ಕೆ ಪತ್ರವನ್ನು ಬರೆದಿದ್ದು, ಈಕೆಯ ಪ್ರಯತ್ನಕ್ಕೆ ಆಯೋಗವೂ ಶ್ಲಾಘಿಸಿದೆ, ಖುದ್ದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಅವರೂ ಸನ್ನಿಧಿ ಪ್ರಯತ್ನಕ್ಕೆ ಭೇಷ್ ಎಂದಿದ್ದಾರೆ. ರಾಜ್ಯ ಚುನಾವಣಾ ಆಯೋಗದ ಮುಖ್ಯಚುನಾವಣಾಧಿಕಾರಿಗಳಿಗೆ ಬರೆದಿರುವ ಪತ್ರವನ್ನು ಪುರಸ್ಕರಿಸಿರುವ ಆಯೋಗ ಅವರು ಕಳುಹಿಸಿರುವ ಪ್ರಸ್ತಾವನೆಯನ್ನು ನಿಯಮಾನುಸಾರ ಪರಿಶೀಲಿಸಿ ಅಗತ್ಯ ಕ್ರಮಕೈಗೊಳ್ಳುವಂತೆ ಆಯೋಗ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಆದೇಶಿಸಿದೆ. ಚುನಾವಣೆಯ ಸಂದರ್ಭ ಯಾವುದೇ ರಾಜಕೀಯ ವ್ಯಕ್ತಿ ಮತ್ತು ಪಕ್ಷದ ಪರವಾಗಿರದೆ ತಟಸ್ಥವಾಗಿರುವ ಕಾರ್ಯಕ್ರಮಗಳನ್ನು ಆಯೋಜಿಸುವ ಸಂಬಂಧ, ವಿವಿಧ ಸ್ವೀಪ್ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಅಗತ್ಯ ಸಲಹೆ ಮತ್ತು ಸಹಕಾರವನ್ನು ನೀಡಲು ಸನ್ನಿಧಿಯ ಪ್ರಸ್ತಾವನೆ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲು ಸಿಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಚುನಾವಣೆಗೆ)ಯ ಸರ್ಕಾರದ ಅಧೀನ ಕಾರ್ಯದರ್ಶಿ ಮಧು ಎ.ಸಿ. ಅವರು ಪತ್ರ ಬರೆದು ಆದೇಶಿಸಿದ್ದಾರೆ.

ಮೂರು ರಾಜ್ಯದಲ್ಲಿ ಮತದಾನ ಜಾಗೃತಿ: ಕರ್ನಾಟಕ ಸಹಿತ ಗೋವಾ ಹಾಗೂ ಕೇರಳ ಹೀಗೆ ಮೂರು ರಾಜ್ಯಗಳಲ್ಲಿ ಈ ಬಾರಿ ಮತದಾನ ಜಾಗೃತಿಯನ್ನು ನಡೆಸಬೇಕು ಎನ್ನುವ ಯೋಚನೆ ಸನ್ನಿಧಿಯದಾಗಿದ್ದು, ಶಾಲಾ ಪರೀಕ್ಷೆ ಮುಗಿಯುತ್ತಿದ್ದಂತೆಯೇ ಮತದಾನ ಜಾಗೃತಿ ನಡೆಸುವ ಇರಾದೆ ಇರಿಸಿಕೊಂಡಿದ್ದಾಳೆ. ೧೫ ದಿನದ ಅವಧಿಯನ್ನು ಈ ಜಾಗೃತಿಗಾಗಿ ಮೀಸಲಿಡುವ ಬಗ್ಗೆ ಯೋಚನೆ ಇದೆ, ಈ ಸಂದರ್ಭದಲ್ಲಿ ವಿತರಣೆಗೆ ಅನುಕೂಲವಾಗಲೆಂದು ಮತದಾನ ಜಾಗೃತಿಯ ಕರಪತ್ರಗಳನ್ನು ಇಂಗ್ಲೀಷ್‌ ಹಾಗೂ ಕನ್ನಡ ಭಾಷೆಯಲ್ಲಿ ಮುದ್ರಿಸಿ ಹಂಚುವ ಯೋಚನೆ ಇದೆ ಎನ್ನುತ್ತಾರೆ ಸನ್ನಿಧಿಯ ತಂದೆ ಲೋಕೇಶ್.‌ ಪರೀಕ್ಷಾ ತಯಾರಿಯ ನಡುವೆಯೇ ಗೋವಾ ರಾಜ್ಯಕ್ಕೆ ಕೊಂಕಣಿ ಹಾಗೂ ಕೇರಳ ರಾಜ್ಯಕ್ಕಾಗಿ ಮಲೆಯಾಳದಲ್ಲಿ ಮತದಾನ ಜಾಗೃತಿ ಮೂಡಿಸುವ ಮಾತುಗಳನ್ನು ಸನ್ನಿಧಿ ಕಲಿಯುತ್ತಿದ್ದಾಳೆ. ಇವಳ ಪ್ರಯತ್ನಕ್ಕೆ ಎಲ್ಲೆಡೆಯಿಂದ ಪ್ರೋತ್ಸಾಹ ದೊರೆಯುತ್ತಿದೆ.

ಮೋದಿ ಮತ್ತೆ ಪ್ರಧಾನಿಯಾಗಲು ಶ್ರಮ: ನಳಿನ್‌ ಕುಮಾರ್ ಕಟೀಲ್‌

ತನಗೆ ದೆಹಲಿಗೆ ಹೋಗಬೇಕೆಂಬ ಆಸೆ ಇದೆ. ಆದರೆ ಅಪ್ಪ ಅಮ್ಮ ಕೇರಳ ಮತ್ತು ಗೋವಾಕ್ಕೆ ಹೋಗುವ ಎಂದು ಹೇಳಿದ್ದಾರೆ. ನನ್ನ ಕೆಲಸಕ್ಕೆ ಇಷ್ಟೆಲ್ಲಾ ಮಹತ್ವ ಇದೆ ಎನ್ನುವಾಗ ಖುಷಿಯಾಗುತ್ತದೆ ಎಂದು ಮಾಣಿ-ಪೆರಾಜೆ ಬಾಲವಿಕಾಸ ಆಂಗ್ಲಮಾಧ್ಯಮ ಶಾಲೆ ೪ನೇ ತರಗತಿ ಸನ್ನಿಧಿ ತಿಳಿಸಿದ್ದಾಳೆ.  

ಮೂರು ರಾಜ್ಯಗಳಲ್ಲಿ ಎಷ್ಟು ಸಾಧ್ಯವೋ ಅಷ್ಟು ಮತದಾನ ಜಾಗೃತಿಯನ್ನು ಮಾಡಲು ಸನ್ನಿಧಿಗೆ ಪ್ರೇರಣೆ ನೀಡುತ್ತಿದ್ದೇವೆ. ಪ್ರತಿಯೊಬ್ಬರೂ ಜಾಗೃತರಾಗಬೇಕೆನ್ನುವುದು ನಮ್ಮ ಉದ್ದೇಶ ಎಂದು ಸನ್ನಿಧಿಯ ತಂದೆ ಲೋಕೇಶ್‌ ಕಶೆಕೋಡಿ ತಿಳಿಸಿದ್ದಾರೆ.  

Follow Us:
Download App:
  • android
  • ios