ಬೆಂಗಳೂರು [ಜೂ.20] :  ಎರಡು ದಿನಗಳ ಹಿಂದೆ ಮಡಿವಾಳದ ಸಮೀಪ ‘ಹಿಟ್ ಅಂಡ್ ರನ್’ ಮಾಡಿ ನಿವೃತ್ತ ಕಾನ್‌ಸ್ಟೇಬಲ್ ಸಾವಿಗೆ ಕಾರಣವಾಗಿದ್ದ ಆಟೋ ಚಾಲಕನೊಬ್ಬನಿಗೆ ಬಾಲಿವುಡ್  ನಟ ಸಂಜಯ್ ದತ್ ಪೋಟೋ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ದಾರಿ ತೋರಿಸಿದ ಕುತೂಹಲಕಾರಿ ಘಟನೆ ನಡೆದಿದೆ.

ಶೋಯೆಬ್ ಖಾನ್ ಬಂಧಿತ. ಮಡಿವಾಳ ಕೆಎಸ್‌ಆರ್‌ಪಿ ವಸತಿ ಗೃಹದಲ್ಲಿ ವಾಸಿಸುತ್ತಿದ್ದ ರಾಜ್ಯ ಮೀಸಲು ಪಡೆಯ ನಿವೃತ್ತ ಪೇದೆ ರಾಮ್‌ದಾಸ್ (65), ಸೋಮವಾರ ಮಧ್ಯಾಹ್ನ ಮಡಿವಾಳ ಮಾರುಕಟ್ಟೆ ಹತ್ತಿರ ರಸ್ತೆ ದಾಟುತ್ತಿದ್ದರು. ಆ ವೇಳೆ ಅತಿವೇಗವಾಗಿ ಬಂದ ಆಟೋ ಚಾಲಕ, ರಾಮ್ ದಾಸ್ ಅವರಿಗೆ ಡಿಕ್ಕಿ ಹೊಡೆದ ಬಳಿಕ ವಾಹನ ನಿಲ್ಲಿಸದೆ ತಪ್ಪಿಸಿಕೊಂಡಿದ್ದ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡು ನಿವೃತ್ತ ಪೊಲೀಸ್ ಮೃತಪಟ್ಟಿದ್ದರು. 

ಈ ಬಗ್ಗೆ ಮಡಿವಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಯಿತು. ಹಿಟ್ ಆ್ಯಂಡ್ ರನ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರಿಗೆ ಆಗ ಘಟನಾ ಸ್ಥಳದ ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಆಟೋ ಡಿಕ್ಕಿ ಹೊಡೆದ ದೃಶ್ಯವು ತನಿಖಾಧಿಕಾರಿಗಳಿಗೆ ಸಿಕ್ಕಿತು. ಆದರೆ ಈ ದೃಶ್ಯದಲ್ಲಿ ಆಟೋದ ನೋಂದಣಿ ಸಂಖ್ಯೆ ಅಸ್ಪಷ್ಟವಾಗಿ ಕಾಣುತ್ತಿತ್ತು. ಮತ್ತೆ ಮತ್ತೆ ಆ ದೃಶ್ಯಾವಳಿಯನ್ನು ಡೆವಲಪ್ ಮಾಡಿ ನೋಡಿದಾಗ ಆಟೋದ ಮೇಲೆ ಬಾಲಿವುಡ್ ನಟ ಸಂಜಯ್ ದತ್ ಪೋಸ್ಟರ್ ಪೊಲೀಸರ ಕಣ್ಣಿಗೆ ಬಿದ್ದಿದೆ. 

"

ತಕ್ಷಣವೇ ಚುರುಕಾದ ಪೊಲೀಸರು, ಮಡಿವಾಳ ವ್ಯಾಪ್ತಿಯ ಎಲ್ಲಾ ಆಟೋ ಚಾಲಕರನ್ನು ಕರೆದು ವಿಚಾರಣೆ ನಡೆಸಿದ್ದಾಗ ಸಿದ್ದಾಪುರ ಕಡೆ ಸಂಜಯ್ ದತ್ ಪೋಸ್ಟರ್‌ನ ಆಟೋ ಓಡಾಡುತ್ತದೆ ಎಂಬ ಸಂಗತಿ ಗೊತ್ತಾಯಿತು. ಪೊಲೀಸರು, ತಾವೇ ಎರಡು ಆಟೋಗಳನ್ನು ಬಾಡಿಗೆ ಪಡೆದು ಸಿದ್ದಾಪುರ ವ್ಯಾಪ್ತಿ ಸುತ್ತಾಡಿದ್ದಾರೆ. ಕೊನೆಗೆ ಲಾಲ್‌ಬಾಗ್ ಸಿದ್ದಾಪುರದ ಬಳಿ ಮಂಗಳವಾರ ಮನೆಯೊಂದರ ಮುಂದೆ ಸಂಜಯ್‌ದತ್ ಪೋಸ್ಟರ್ ಇರುವ ಆಟೋ ನಿಂತಿರುವ ಕುರಿತು ಪೊಲೀಸರು ಮಾಹಿತಿ ಸಿಕ್ಕಿತು. ಆಟೋದ ಚಾಲಕನನ್ನು ‘ತೀವ್ರ’ವಾಗಿ ಪ್ರಶ್ನಿಸಿದಾಗ ಸತ್ಯ ಒಪ್ಪಿಕೊಂಡ ಎಂದು ಅಧಿಕಾರಿಗಳು ವಿವರಿಸಿದ್ದಾರೆ.