ಬೆಂಗಳೂರು(ಡಿ.09):  ಕೆ.ಜೆ. ಹಳ್ಳಿ ಮತ್ತು ಡಿ.ಜೆ. ಹಳ್ಳಿ ಗಲಭೆ ಪ್ರಕರಣ ಸಂಬಂಧ ಬಂಧನಕ್ಕೆ ಒಳಗಾಗಿರುವ ಮಾಜಿ ಮೇಯರ್‌ ಸಂಪತ್‌ ರಾಜ್‌ ಜಾಮೀನು ಕೋರಿ ಹೈಕೋರ್ಟ್‌ಗೆ ಕ್ರಿಮಿನಲ್‌ ಅರ್ಜಿ ಸಲ್ಲಿಸಿದ್ದಾರೆ.

ಸಂಪತ್‌ ರಾಜ್‌ ಅವರ ಜಾಮೀನು ಅರ್ಜಿಯನ್ನು ನಗರದ 67ನೇ ಹೆಚ್ಚುವರಿ ಸಿಟಿ ಸಿವಿಲ್‌ ಕೋರ್ಟ್‌ ಡಿ.1ರಂದು ತಿರಸ್ಕರಿಸಿತ್ತು. ಇದರಿಂದ ಜಾಮೀನಿಗಾಗಿ ಇದೀಗ ಹೈಕೋರ್ಟ್‌ ಮೊರೆ ಹೋಗಿದ್ದಾರೆ. ಭಯೋತ್ಪಾದನೆ ನಿಗ್ರಹ ಘಟಕ ಮತ್ತು ಪುಲಕೇಶಿ ನಗರದ ಶಾಸಕ ಅಖಂಡ ಶ್ರೀನಿವಾಸ್‌ ಮೂರ್ತಿ ಅವರನ್ನು ಅರ್ಜಿಯಲ್ಲಿ ಪ್ರತಿವಾದಿಯನ್ನಾಗಿ ಮಾಡಲಾಗಿದ್ದು, ಇನ್ನಷ್ಟೇ ವಿಚಾರಣೆಗೆ ಬರಬೇಕಿದೆ.

ಡಿ.ಜೆ.ಹಳ್ಳಿ ಗಲಭೆ ಪ್ರಕರಣ: ಸಂಪತ್‌ ರಾಜ್‌ಗೆ ಸದ್ಯ ಜೈಲೇ ಗಟ್ಟಿ

ಕೊರೋನಾ ಸೋಂಕು ತಗುಲಿದ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ ಸಂಪತ್‌ ರಾಜ್‌ ಪರಾರಿ ಆಗಿದ್ದರು. ತದ ನಂತರ ನ.16ರಂದು ಸಿಸಿಬಿ ಪೊಲೀಸರು ಸಂಪತ್‌ ರಾಜ್‌ ಅವರನ್ನು ಬಂಧಿಸಿದ್ದರು. ಮೂರು ದಿನ ಪೊಲೀಸ್‌ ಕಸ್ಟಡಿಗೆ ನೀಡಿದ್ದ ವಿಚಾರಣಾ ನ್ಯಾಯಾಲಯವು ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು. ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು 67ನೇ ಸಿಟಿ ಸಿವಿಲ್‌ ಕೋರ್ಟ್‌ ಡಿ.1ರಂದು ತಿರಸ್ಕರಿಸಿತ್ತು.