ಬೆಂಗಳೂರು(ನ.01):  ಡಿ.ಜೆ.ಹಳ್ಳಿ-ಕೆ.ಜಿ.ಹಳ್ಳಿ ಗಲಭೆ ಆರೋಪ ಹೊತ್ತು ರಾತ್ರೋರಾತ್ರಿ ಪರಾರಿಯಾಗುವ ಮುನ್ನ ಮಾಜಿ ಮೇಯರ್‌ ಸಂಪತ್‌ರಾಜ್‌ ಅವರು ಹತ್ತು ದಿನಗಳ ಅವಧಿಯಲ್ಲಿ ಎರಡು ಬಾರಿ ಆಸ್ಪತ್ರೆಯಿಂದ ಬಿಡುಗಡೆಯ ನಾಟಕವಾಡಿರುವ ಸಂಗತಿ ಬೆಳಕಿಗೆ ಬಂದಿದೆ.

ಕೊರೋನಾ ಸೋಂಕು ನೆಪ ಹೇಳಿ ಸೆ.14ರಿಂದ ಕನ್ನಿಂಗ್‌ಹ್ಯಾಮ್‌ ರಸ್ತೆಯಲ್ಲಿರುವ ಬ್ಯಾಪಿಸ್ಟ್‌ ಆಸ್ಪತ್ರೆಯಲ್ಲಿ ಸಂಪತ್‌ ರಾಜ್‌ ಚಿಕಿತ್ಸೆಗೆ ದಾಖಲಾಗಿದ್ದರು. ಆದರೆ ಅ.3ರಿಂದ 14ರವರೆಗೆ ಎರಡು ಬಾರಿ ಮಾಜಿ ಮೇಯರ್‌ ಆಸ್ಪತ್ರೆಯಿಂದ ಡಿಸ್ಚಾಚ್‌ರ್‍ ಆಗಿದ್ದಾರೆ. ಮಾಜಿ ಮೇಯರ್‌ ಆರೋಗ್ಯದ ಬಗ್ಗೆ ವಿವರ ನೀಡುವಂತೆ ಸೂಚಿಸಿದ್ದರೂ ಆಸ್ಪತ್ರೆಯವರು ನಿರ್ಲಕ್ಷ್ಯ ತಾಳಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ಸಂಪತ್‌ ರಾಜ್‌ ಆಸ್ಪತ್ರೆಯಿಂದ ಬಿಡುಗಡೆಗೊಂಡಿರುವ ದಾಖಲೆಗಳು ‘ಕನ್ನಡಪ್ರಭ’ಕ್ಕೆ ಲಭ್ಯವಾಗಿವೆ.

ಎಸ್ಕೇಪ್‌ ರಾಜ್‌ಗೆ ಸಿಸಿಬಿ ಹುಡುಕಾಟ:

ಡಿ.ಜೆ.ಹಳ್ಳಿ-ಕೆ.ಜಿ.ಹಳ್ಳಿ ಗಲಭೆ ವೇಳೆ ಪುಲಿಕೇಶಿ ನಗರ ಕ್ಷೇತ್ರದ ಅಖಂಡ ಶ್ರೀನಿವಾಸ ಮೂರ್ತಿ ಮನೆಗೆ ಬೆಂಕಿ ಹಚ್ಚಿ ಸುಟ್ಟು ಹಾಕಿದ ಪ್ರಕರಣದಲ್ಲಿ ಮಾಜಿ ಮೇಯರ್‌ ಹಾಗೂ ಸ್ಥಳೀಯ ಕಾಂಗ್ರೆಸ್‌ ಮುಖಂಡ ಸಂಪತ್‌ ರಾಜ್‌ ಆರೋಪಿಯಾಗಿದ್ದಾರೆ. ಈ ಪ್ರಕರಣ ಸಂಬಂಧ ಒಂದು ಬಾರಿ ಸಿಸಿಬಿ ವಿಚಾರಣೆಗೆ ಹಾಜರಾಗಿದ್ದ ಅವರು, ಎರಡನೇ ಬಾರಿ ನೋಟಿಸ್‌ ನೀಡಿದ್ದರು. ಆದರೆ ಕೊರೋನಾ ಸೋಂಕು ನೆಪ ಹೇಳಿ ವಿಚಾರಣೆಗೆ ಗೈರಾಗಿದ ಅವರು, ಸೆ.14ರಂದು ಕನ್ನಿಂಗ್‌ಹ್ಯಾಮ್‌ ರಸ್ತೆಯಲ್ಲಿರುವ ಬ್ಯಾಪಿಸ್ಟ್‌ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದರು.

ಡಿ.ಜೆ-ಕೆ.ಜಿ.ಹಳ್ಳಿ ಗಲಭೆ ಪ್ರಕರಣ: ಆಸ್ಪತ್ರೆಯಿಂದಲೇ ಸಂಪತ್‌ ರಾಜ್‌ ಪರಾರಿ

ಆ ಖಾಸಗಿ ಆಸ್ಪತ್ರೆಗೆ ಮಾಜಿ ಮೇಯರ್‌ ಆರೋಗ್ಯದ ಪರಿಸ್ಥಿತಿ ಬಗ್ಗೆ ಮಾಹಿತಿ ನೀಡುವಂತೆ ಸಿಸಿಬಿ ಎಸಿಪಿ ವೇಣುಗೋಪಾಲ್‌ ಪತ್ರ ಬರೆದಿದ್ದರು. ಆದರೆ ಇದಕ್ಕೆ ಆಸ್ಪತ್ರೆ ವೈದ್ಯರು ಸೂಕ್ತವಾಗಿ ಸ್ಪಂದಿಸಲಿಲ್ಲ. ಕೊನೆಗೆ ಸುದೀರ್ಘಾವಧಿ ಆಸ್ಪತ್ರೆಯಲ್ಲಿರುವ ಮಾಜಿ ಮೇಯರ್‌ ಆರೋಗ್ಯದ ಬಗ್ಗೆ ಐವರು ತಜ್ಞ ವೈದ್ಯರ ತಂಡದಿಂದ ಪರಿಶೀಲಿಸಿ ವರದಿ ಸಲ್ಲಿಸುವಂತೆ ರಾಜ್ಯ ಆರೋಗ್ಯ ಇಲಾಖೆಗೆ ಸಿಸಿಬಿ ಪತ್ರ ಬರೆದು ಕೋರಿತು. ಈ ಬೆಳವಣಿಗೆ ಸಂಪತ್‌ ರಾಜ್‌ ಅವರಿಗೆ ನಡುಕ ಹುಟ್ಟಿಸಿತು ಎಂದು ತಿಳಿದು ಬಂದಿದೆ.

ಆರೋಗ್ಯ ಇಲಾಖೆಗೆ ಸಿಸಿಬಿ ಪತ್ರ ಬರೆದ ಬೆನ್ನಲ್ಲೇ ಸಂಪತ್‌ ರಾಜ್‌, ಅ.3ರಂದು ರಾತ್ರೋರಾತ್ರಿ ಬಿಡುಗಡೆಯಾಗಿದ್ದರು. ಮರುದಿನ ಮತ್ತೆ ಆಸ್ಪತ್ರೆಗೆ ಸೇರಿದ ಅವರು, ಅ.14ರಂದು ರಾತ್ರಿ ಎರಡನೇ ಬಾರಿಗೆ ಆಸ್ಪತ್ರೆಯಿಂದ ಡಿಸ್ಚಾರ್ಜ್‌ಗೊಂಡಿದ್ದರು. ಆನಂತರ ಯಾರೊಂದಿಗೆ ಸಂಪರ್ಕಕ್ಕೆ ಬಂದಿಲ್ಲ. ಬಹುಶಃ ನಗರ ತೊರೆದು ಹೊರ ರಾಜ್ಯಗಳಲ್ಲಿ ಆರೋಪಿ ತಲೆಮರೆಸಿಕೊಂಡಿರಬಹುದು. ಮಾಜಿ ಮೇಯರ್‌ ಪತ್ತೆಗೆ ವಿಶೇಷ ತಂಡಗಳು ಹುಡುಕಾಟ ನಡೆಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಂಪತ್‌ ಪರಾರಿ ಸ್ಪಷ್ಟನೆ ಕೋರಿ ಬ್ಯಾಪಿಸ್ಟ್‌ ಆಸ್ಪತ್ರೆಗೆ ನೋಟಿಸ್‌

ಡಿ.ಜೆ.ಹಳ್ಳಿ-ಕೆ.ಜಿ.ಹಳ್ಳಿ ಗಲಭೆ ಪ್ರಕರಣ ಸಂಬಂಧ ಮಾಜಿ ಮೇಯರ್‌ ಸಂಪತ್‌ರಾಜ್‌ ಪರಾರಿ ಸಂಬಂಧ ಸ್ಪಷ್ಟನೆ ಕೋರಿ ಕನ್ನಿಂಗ್‌ಹ್ಯಾಮ್‌ ರಸ್ತೆಯ ಬ್ಯಾಪಿಸ್ಟ್‌ ಆಸ್ಪತ್ರೆಗೆ ನೋಟಿಸ್‌ ನೀಡಲಾಗಿದೆ ಎಂದು ನಗರ ಆಯುಕ್ತ ಕಮಲ್‌ ಪಂತ್‌ ತಿಳಿಸಿದ್ದಾರೆ.

ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಆಯುಕ್ತರು, ಈಗಾಗಲೇ ಪ್ರಕರಣದಲ್ಲಿ ಸಂಪತ್‌ ರಾಜ್‌ ವಿರುದ್ಧ ನ್ಯಾಯಾಲಯಕ್ಕೆ ಚಾಜ್‌ರ್‍ಶೀಟ್‌ ಸಲ್ಲಿಸಲಾಗಿದೆ. ಹೀಗಾಗಿ ತನಿಖೆಗೆ ಸಹಕರಿಸದೆ ತಪ್ಪಿಸಿಕೊಂಡಿರುವ ಕಾರಣಕ್ಕೆ ನ್ಯಾಯಾಲಯಕ್ಕೂ ಅವರು ಉತ್ತರ ಕೊಡಬೇಕಾಗುತ್ತದೆ ಎಂದರು.

ಚಿಕಿತ್ಸೆ ಪಡೆಯುತ್ತಿದ್ದ ಕನ್ನಿಂಗ್‌ ಹ್ಯಾಮ್‌ ರಸ್ತೆಯ ಬ್ಯಾಪಿಸ್ಟ್‌ ಆಸ್ಪತ್ರೆಗೆ ಸಂಪತ್‌ ಅನಾರೋಗ್ಯದ ಬಗ್ಗೆ ವರದಿ ನೀಡಲು ಸೂಚಿಸಲಾಗಿತ್ತು. ಈಗ ಸಂಪತ್‌ ರಾಜ್‌ರನ್ನು ಸಿಸಿಬಿ ಗಮನಕ್ಕೆ ತರದೆ ಬಿಡುಗಡೆಗೊಳಿಸಿರುವ ಬ್ಯಾಪಿಸ್ಟ್‌ ಆಸ್ಪತ್ರೆಗೆ ನೋಟಿಸ್‌ ನೀಡಲಾಗಿದೆ. ಇದಕ್ಕೆ ಪ್ರತಿಕ್ರಿಯೆ ನೋಡಿ ಮುಂದಿನ ಕ್ರಮ ಜರುಗಿಸಲಾಗುತ್ತದೆ ಎಂದು ತಿಳಿಸಿದರು.

ಈ ಪ್ರಕರಣದಲ್ಲಿ ಸಂಪತ್‌ ರಾಜ್‌ ಕಸ್ಟಡಿಯಲ್ಲಿ ಇರಲಿಲ್ಲ. ಇದರಿಂದ ಅವರನ್ನು ಕಾಯಲು ಪೊಲೀಸರನ್ನು ನಿಯೋಜಿಸಿರಲಿಲ್ಲ. ಅಲ್ಲದೇ ಬ್ಯಾಪಿಸ್ಟ್‌ ಆಸ್ಪತ್ರೆಯಲ್ಲಿ ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇದರಿಂದ ಸಿಬ್ಬಂದಿಗೆ ನಿಯುಕ್ತಿಗೆ ತಡೆ ಹಿಡಿಯಲಾಗಿತ್ತು ಎಂದು ಆಯುಕ್ತರು ಸ್ಪಷ್ಟಪಡಿಸಿದರು.