ಚಾಲಕನ ನಿರ್ಲಕ್ಷ್ಯದಿಂದ ಭೀಕರ ಸರಣಿ ಅಪಘಾತ, ನಾಲ್ವರಿಗೆ ಗಾಯ, ಐದು ವಾಹನಕ್ಕೆ ಹಾನಿ, ಕಾರು ಚಾಲಕ ವಶಕ್ಕೆ. 

ಬೆಂಗಳೂರು(ಫೆ.07): ನೃಪತುಂಗ ರಸ್ತೆಯ ಮ್ಯಾಜಿಸ್ಪ್ರೇಟ್‌ ಕೋ ಬಳಿ ಸಾಗರ ಕ್ಷೇತ್ರದ ಬಿಜೆಪಿ ಶಾಸಕ ಹರತಾಳು ಹಾಲಪ್ಪ ಅವರ ಬೀಗರ ಕಾರು ಚಾಲಕನ ನಿರ್ಲಕ್ಷ್ಯದ ಚಾಲನೆಯಿಂದ ಸಂಭವಿಸಿದ ಭೀಕರ ಸರಣಿ ಅಪಘಾತದಲ್ಲಿ ಇಬ್ಬರು ಮೃತಪಟ್ಟು, ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಸೋಮವಾರ ಜರುಗಿದೆ. ಎಚ್‌ಬಿಆರ್‌ ಲೇಔಟ್‌ ನಿವಾಸಿ ಮಜೀದ್‌ ಖಾನ್‌ (36) ಮತ್ತು ಕೆ.ಜಿ.ಹಳ್ಳಿ ನಿವಾಸಿ ಅಯ್ಯಪ್ಪ (60) ಮೃತ ಸವಾರರು. ಹೋಂ ಆಕ್ಟೀವಾ ದ್ವಿಚಕ್ರ ವಾಹನದ ಹಿಂಬದಿ ಸವಾರ ರಿಯಾಜ್‌ ಪಾಷಾ, ಪಲ್ಸರ್‌ ದ್ವಿಚಕ್ರ ವಾಹನದ ಸವಾರ ಮೊಹಮದ್‌ ಕೆ.ರಿಯಾಜ್‌, ಹೋಂಡ ಆಕ್ಟೀವಾ ದ್ವಿಚಕ್ರ ವಾಹನದ ಸವಾರ ಮೊಹಮದ್‌ ಸಲೀಂ ಹಾಗೂ ಹಿಂಬದಿ ಸವಾರ ಶೇರ್‌ ಗಿಲಾನಿ ಗಂಭೀರವಾಗಿ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.

ಘಟನೆ ಸಂಬಂಧ ಇನೋವಾ ಕಾರು ಚಾಲಕ ಎಂ.ಮೋಹನ್‌ (48) ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ. ಸರಣಿ ಅಪಘಾತದಲ್ಲಿ ಟೊಯೋಟಾ ಇಟಿಎಸ್‌ ಕಾರು, ಆಲ್ಟೋ ಕಾರು, ಪಲ್ಸರ್‌ ದ್ವಿಚಕ್ರ ವಾಹನ, ಎರಡು ಹೋಂಡ ಆ್ಯಕ್ವೀವಾ ದ್ವಿಚಕ್ರ ವಾಹನ ಸೇರಿ ಒಟ್ಟು 5 ವಾಹನಗಳಿಗೆ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Davanagere: ಕಾಳಾಪುರ ಗಲಾಟೆ ತನಿಖೆ ಮುಗಿಸಿ, ಮಗಳ ಮನೆಗೆ ಹೊರಟ್ಟಿದ್ದ ಎಎಸ್ಐ ಅಪಘಾತದಲ್ಲಿ ಸಾವು

ಘಟನೆ ವಿವರ:

ಇನೋವಾ ಕಾರು ಚಾಲಕ ಮೋಹನ್‌ ಸೋಮವಾರ ಮಧ್ಯಾಹ್ನ 3.15ರ ಸುಮಾರಿಗೆ ನೃಪತುಂಗ ರಸ್ತೆಯ ಮ್ಯಾಜಿಸ್ಪ್ರೇಟ್‌ ಕೋರ್ಚ್‌ ಬಳಿ ವೇಗವಾಗಿ ಕಾರು ಚಾಲನೆ ಮಾಡಿದ್ದಾನೆ. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಕಾರು ಮೂರು ದ್ವಿಚಕ್ರ ವಾಹನ ಹಾಗೂ ಎರಡು ಕಾರುಗಳಿಗೆ ಡಿಕ್ಕಿ ಹೊಡೆದು ಸರಣಿ ಅಪಘಾತ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಹೋಂಡಾ ಆಕ್ಟೀವಾ ದ್ವಿಚಕ್ರ ವಾಹನ ಚಾಲನೆ ಮಾಡುತ್ತಿದ್ದ ಮಜೀದ್‌ ಖಾನ್‌ ಮತ್ತು ಪಲ್ಸರ್‌ ದ್ವಿಚಕ್ರ ವಾಹನದ ಹಿಂಬದಿ ಕುಳಿತ್ತಿದ್ದ ಅಯ್ಯಪ್ಪ ರಸ್ತೆ ಮೇಲೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಉಳಿದಂತೆ ಸವಾರರಾದ ರಿಯಾಜ್‌ ಪಾಷಾ, ಮೊಹಮದ್‌ ರಿಯಾಜ್‌, ಮೊಹಮದ್‌ ಸಲೀಂ ಹಾಗೂ ಶೇರ್‌ ಗಿಲಾನಿ ಕೂಡ ಗಾಯಗೊಂಡಿದ್ದರು.

ಸಂಚಾರ ಪೊಲೀಸರು ಹಾಗೂ ಸ್ಥಳೀಯರು ಕೂಡಲೇ ಆರು ಮಂದಿ ಗಾಯಾಳುಗಳನ್ನು ಸಮೀಪದ ಮಾರ್ಥಾಸ್‌ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ತಲೆಗೆ ಪೆಟ್ಟು ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಮಜೀದ್‌ ಖಾನ್‌ ಮತ್ತು ಅಯ್ಯಪ್ಪ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆಯೇ ಕೊನೆಯುಸಿರೆಳೆದರು. ಉಳಿದ ನಾಲ್ವರು ಗಾಯಾಳುಗಳಿಗೆ ಚಿಕಿತ್ಸೆ ಮುಂದುವರೆದಿದ್ದು, ಸದ್ಯಕ್ಕೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಸರಣಿ ಅಪಘಾತಕ್ಕೆ ಕಾರು ಚಾಲಕನ ವೇಗ ಹಾಗೂ ನಿರ್ಲಕ್ಷ್ಯದ ಚಾಲನೆಯೇ ಕಾರಣ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ. ಘಟನೆ ಸಂಬಂಧ ಕಾರು ಚಾಲಕ ಮೋಹನ್‌ನನ್ನು ವಶಕ್ಕೆ ಪಡೆಯಲಾಗಿದೆ. ಈ ಸಂಬಂಧ ಹಲಸೂರು ಗೇಟ್‌ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸೊಸೆ ಪಿಕ್‌ ಮಾಡಲು ತೆರಳುವಾಗ ಅಪಘಾತ

ಸರಣಿ ಅಪಘಾತ ಎಸೆಗಿದ ಕಾರು (ನೋಂದಣಿ ಸಂಖ್ಯೆ ಕೆಎ-50 ಎಂಎ-6600)ಯಲಹಂಕ ನಿವಾಸಿಯಾಗಿರುವ ಅರಣ್ಯ ಇಲಾಖೆ ನಿವೃತ್ತ ಅಧಿಕಾರಿ ರಾಮು ಸುರೇಶ್‌ ಮಾಲೀಕತ್ವದಲ್ಲಿದೆ. ಈ ರಾಮು ಸುರೇಶ್‌ ಅವರ ಪುತ್ರನಿಗೆ ಶಾಸಕ ಹರತಾಳು ಹಾಲಪ್ಪ ಅವರ ಪುತ್ರಿಯನ್ನು ವಿವಾಹ ಮಾಡಿಕೊಡಲಾಗಿದೆ. ರಾಮು ಸುರೇಶ್‌ ಅವರ ಸೊಸೆ ಕಿಮ್ಸ್‌ ವೈದ್ಯಕೀಯ ಕಾಲೇಜಿನಲ್ಲಿ ಎಂಡಿ ಕೋರ್ಸ್‌ ವ್ಯಾಸಂಗ ಮಾಡುತ್ತಿದ್ದಾರೆ. ಹೀಗಾಗಿ ಸೊಸೆಯನ್ನು ಕಾಲೇಜಿನಿಂದ ಕರೆದುಕೊಂಡು ಬರಲು ಚಾಲಕ ಮೋಹನ್‌ ಕಾರು ಚಲಾಯಿಸಿಕೊಂಡು ತೆರಳುವಾಗ ಮಾರ್ಗ ಮಧ್ಯೆ ನೃಪತುಂಗ ರಸ್ತೆಯಲ್ಲಿ ಈ ದುರ್ಘಟನೆ ನಡೆದಿದೆ.

ಶಿಗ್ಗಾಂವಿ ಬಳಿ ಭೀಕರ ಅಪಘಾತ: ಮೈಲಾರಲಿಂಗನ ದರ್ಶನಕ್ಕೆ ಹೊರಟ್ಟಿದ್ದ ಇಬ್ಬರು ಭಕ್ತರ ದುರ್ಮರಣ

ಕಾರಿನಲ್ಲಿ ಶಾಸಕರ ಗುರುತಿನ ಸ್ಟಿಕ್ಕರ್‌

ಸರಣಿ ಅಪಘಾತಕ್ಕೆ ಕಾರಣವಾದ ಇನೋವಾ ಕಾರಿಗೆ ಶಾಸಕ ಹರತಾಳು ಹಾಲಪ್ಪ ಅವರ ಗುರುತಿನ ಸ್ಟಿಕ್ಕರ್‌ ಅಂಟಿಸಲಾಗಿತ್ತು. ಅಪಘಾತದ ಬಳಿಕ ಹಲಸೂರು ಗೇಟ್‌ ಸಂಚಾರ ಠಾಣೆ ಪೊಲೀಸರು ಕಾರನ್ನು ಜಪ್ತಿ ಮಾಡಿ ಚಾಲಕ ಮೋಹನ್‌ನನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದರು. ಈ ವೇಳೆ ಕಾರಿನ ಮುಂಬದಿ ಗಾಜಿನ ಮೇಲೆ ಅಂಟಿಸಿದ್ದ ಶಾಸಕರ ಗುರುತಿನ ಸ್ಟಿಕ್ಕರ್‌ ಅನ್ನು ಬೆಂಬಲಿಗರು ಕಿತ್ತು ಹಾಕಿದರು ಎನ್ನಲಾಗಿದೆ.

ಕೆಲಕಾಲ ಟ್ರಾಫಿಕ್‌ ಜಾಮ್‌

ನೃತಪತುಂಗ ರಸ್ತೆಯಲ್ಲಿ ಸರಣಿ ಅಪಘಾತ ಸಂಭವಿಸಿದ ಪರಿಣಾಮ ಆ ರಸ್ತೆ ಸೇರಿದಂತೆ ಕೆ.ಆರ್‌.ವೃತ್ತ, ಕಾರ್ಪೊರೇಷನ್‌ ವೃತ್ತ, ಕೆಂಪೇಗೌಡ ರಸ್ತೆ ಸೇರಿದಂತೆ ಸುತ್ತಮುತ್ತಲ ರಸ್ತೆಗಳಲ್ಲಿ ಕೆಲ ಕಾಲ ವಾಹನ ಸಂಚಾರ ದಟ್ಟಣೆ ಉಂಟಾಗಿ ಸವಾರರು ಪರದಾಡಿದರು. ನೃಪತುಂಗ ರಸ್ತೆಯಲ್ಲಿ ಅಪಘಾತಕ್ಕೊಳಗಾದ ವಾಹನಗಳನ್ನು ತೆರವುಗೊಳಿಸುವ ವರೆಗೆ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಸಂಚಾರ ಪೊಲೀಸರು ಕೂಡಲೇ ಕಾರ್ಯಪ್ರವೃತ್ತರಾಗಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.