ಹುಬ್ಬಳ್ಳಿ(ಜ.08): ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶರ ಪೀಠ ಡಿ.ಕೆ. ಶಿವಕುಮಾರ್, ಬಿ.ಎಸ್. ಯಡಿಯೂರಪ್ಪನವರ ಡಿನೋಟಿಫಿಕೇಶನ್ ಪ್ರಕರಣ ವಿಚಾರಣೆ ಕೈಗೆತ್ತಿಕೊಂಡಿದ್ದು, ತೀರ್ಪು ಏನೇ ಬಂದರೂ ಅದರನ್ನು ಸಮಾಜ ಪರಿವರ್ತನಾ ಸಮುದಾಯ ಮತ್ತು ಜನ ಸಂಗ್ರಾಮ ಪರಿಷತ್ ಸ್ವಾಗತಿಸುತ್ತದೆ ಎಂದು ಸಮಾಜ ಪರಿವರ್ತನಾ ಸಮುದಾಯದ ಅಧ್ಯಕ್ಷ ಎಸ್.ಆರ್. ಹಿರೇಮಠ ಹೇಳಿದ್ದಾರೆ. 

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇವರಿಬ್ಬರೂ ಅಕ್ರಮವಾಗಿ ಸಾಕಷ್ಟು ಸಂಪಾದನೆ ಮಾಡಿದ್ದಾರೆ. ಈ ವಿಚಾರಣೆ ಹೆಚ್ಚಿನ ಮಹತ್ವ ಪಡೆದಿದೆ. ಇನ್ನು, ಅಕ್ರಮ ಜಮೀನು ಸಂಪಾದನೆ ಸೇರಿ ಹಲವು ಪ್ರಕರಣದಲ್ಲಿ ಭಾಗಿಯಾಗಿರುವ ಮಾಜಿ ಸಚಿವ ಡಿ.ಕೆ. ಶಿವಕುಮಾರ ಜೈಲಿನಲ್ಲಿಯೆ ಇರಬೇಕಿತ್ತು ಎಂದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷರ ನೇಮಕವನ್ನು ಸರ್ಕಾರ ಮನಸ್ಸಿಗೆ ಬಂದಂತೆ ಮಾಡುತ್ತಿದೆ. ಈಗ ಅಧ್ಯಕ್ಷರಾಗಿರುವ ಡಾ. ಎಂ. ಸುಧೀಂದ್ರ ಅವರ ನೇಮಕಾತಿ ರದ್ದುಪಡಿಸಲು ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಸರ್ಕಾರದ ಕಾರ್ಯದರ್ಶಿ ಡಾ. ಸಂದೀಪ್ ದವೆ ಅವರನ್ನು ಒತ್ತಾಯಿಸಲಾಗಿದೆ ಎಂದರು. 

ಇನ್ನು ಜೆಎನ್‌ಯು ವಿವಿಯ ವಿದ್ಯಾರ್ಥಿಗಳಿಗೆ ರಾತ್ರಿ ವೇಳೆ ಹಲ್ಲೆ ನಡೆಸಿದ್ದನ್ನು ಖಂಡಿಸಿದ ಅವರು, ಸಿಎಎ ಮತ್ತು ಎನ್‌ಆರ್‌ಸಿ ವಿರುದ್ಧ ವಿದ್ಯಾರ್ಥಿಗಳು ಹೋರಾಟ ಮಾಡುತ್ತಿದ್ದ ವೇಳೆ ದೆಹಲಿಯ ಜೆಎನ್‌ಯು ವಿದ್ಯಾರ್ಥಿಗಳು, ಪ್ರಾಧ್ಯಾಪಕರ ಮೇಲೆ ಪೊಲೀಸರು ಹಲ್ಲೆ ಮಾಡಿದ್ದಾರೆ. ಸಂವಿಧಾನದ ಆಶಯಗಳಾದ ಸಮಾನತೆ, ಸ್ವಾತಂತ್ರ್ಯ, ನ್ಯಾಯ ಗಾಳಿಗೆ ತೂರಿ ದೆಹಲಿ ಪೊಲೀಸರು ದಾಳಿ ಮಾಡಿದ್ದಕ್ಕೆ ಅಮಿತ್ ಶಾ ಕಾನೂನು ಕ್ರಮ ತೆಗೆದುಕೊಳ್ಳದೆ ಮೂಖ ಪ್ರೇಕ್ಷಕರಂತೆ ನೋಡುತ್ತಾ ಕುಳಿತ್ತಿದ್ದಾರೆ. ಇಷ್ಟೆಲ್ಲ ಗಲಭೆಗೆ ಕಾರಣರಾಗಿ ಮೂಕ ಪ್ರೇಕ್ಷಕರಂತೆ ನೋಡುತ್ತಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ಅಮಿತ್ ಶಾ ರಾಜೀನಾಮೆ ನೀಡದಿದ್ದರೆ ಪ್ರಧಾನಿ ಮೋದಿಯವರೆ ಶಾ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು ಎಂದರು.