ಹುಬ್ಬಳ್ಳಿ[ಡಿ.14]: ಪೌರತ್ವ ತಿದ್ದುಪಡಿ ಕಾಯ್ದೆ ಸಂವಿಧಾನ ವಿರೋಧಿ. ಕ್ವಿಟ್‌ ಇಂಡಿಯಾ ಚಳವಳಿಯ ಮಾದರಿಯಲ್ಲಿ ಪೌರತ್ವ ನೋಂದಣಿಯನ್ನು ವಿರೋಧಿಸಬೇಕು, ಹೋರಾಟ ನಡೆಸಬೇಕು ಎಂದು ಸಿಟಿಜನ್‌ ಫಾರ್‌ ಡೆಮಾಕ್ರಸಿಯ ಮುಖ್ಯಸ್ಥ ಎಸ್‌.ಆರ್‌. ಹಿರೇಮಠ ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಯು ಮಹಾತ್ಮಾ ಗಾಂಧಿ, ಡಾ.ಬಿ.ಆರ್‌.ಅಂಬೇಡ್ಕರ್‌ ಆಶಯಕ್ಕೆ ವಿರುದ್ಧವಾಗಿದೆ. ಆದರೆ ಇದನ್ನು ಬಿಜೆಪಿ ಹಾಗೂ ಸಂಘ ಪರಿವಾರ ಪೌರತ್ವ ತಿದ್ದುಪಡಿ ಮಾಡಿ ಕಾಯ್ದೆ ಜಾರಿಗೆ ತರುವ ಮೂಲಕ ಸಂವಿಧಾನಕ್ಕೆ ಕೊಡಲಿ ಪೆಟ್ಟು ಕೊಟ್ಟಿದ್ದಾರೆ ಎಂದು ಆರೋಪಿಸಿದರು.

ಈ ಕಾಯ್ದೆಯು ಜನರು ಮಾನವೀಯ ಮೌಲ್ಯ, ಸರ್ವ ಜನರು ಭಾತೃತ್ವದಲ್ಲಿ ಇರಬೇಕು ಎಂಬ ಆಶಯಗಳಿಗೆ ತಿಲಾಂಜಲಿ ಹಾಡುವ ಜೊತೆಗೆ ರಾಷ್ಟ್ರದಲ್ಲಿ ಆದ ಸ್ವಾತಂತ್ರ್ಯ ಹೋರಾಟದ ಇತಿಹಾಸವನ್ನು ಹೊಸಕಿ ಹಾಕುವ ಪ್ರಯತ್ನ ಆಗಿದೆ. ಕೂಡಲೇ ರಾಷ್ಟ್ರದ ಎಲ್ಲ ಜನರು ಈ ಹಿಂದೆ ಕ್ವಿಟ್‌ ಇಂಡಿಯಾ ಚಳವಳಿ ಹೋರಾಟದಂತೆ ರಾಷ್ಟ್ರೀಯ ಪೌರತ್ವ ನೋಂದಣಿಯನ್ನು ವಿರೋಧ ಮಾಡಬೇಕೆಂದು ತಿಳಿಸಿದರು.

ನಿಯಮ ಉಲ್ಲಂಘನೆ

ರಾಜ್ಯದಲ್ಲಿ ಉಪ ಲೋಕಾಯುಕ್ತ ಹುದ್ದೆಗೆ ನ್ಯಾಯಮೂರ್ತಿ ಬಿ.ಎಸ್‌. ಪಾಟೀಲ ಅವರನ್ನು ನೇಮಕ ಮಾಡಿರುವುದು ನಿಯಮಗಳ ಉಲ್ಲಂಘನೆಯಾಗಿದ್ದು, ಈ ಹಿನ್ನೆಲೆಯಲ್ಲಿ ಕರ್ನಾಟಕ ಹೈಕೋರ್ಟ್‌ನಲ್ಲಿ ಇದನ್ನು ಪ್ರಶ್ನಿಸಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಹಾಕಲಾಗಿದ್ದು, ನ್ಯಾಯಾಲಯ ಕೂಡಾ ನಾಲ್ಕು ರಿಸ್ಪೊಂಡಂಟ್‌ಗಳಿಗೆ ನೋಟಿಸ್‌ ಜಾರಿ ಮಾಡಿದೆ ಎಂದು ತಿಳಿಸಿದರು.

ಬೆನಗನಹಳ್ಳಿಯಲ್ಲಿನ 4.20 ಎಕರೆ ಭೂಮಿ ಡಿನೋಟಿಫೀಕೇಶನ್‌ ಪ್ರಕರಣ ಸುಪ್ರೀಂಕೋರ್ಟ್‌ ತ್ರಿಸದಸ್ಯ ಪೀಠದ ಎದುರಿಗೆ ಬಂದಿದ್ದು, ಈ ಹಿನ್ನೆಲೆಯಲ್ಲಿ ಡಿ.ಕೆ. ಶಿವಕುಮಾರ ಹಾಗೂ ಬಿ.ಎಸ್‌. ಯಡಿಯೂರಪ್ಪ ಅವರ ವಿಚಾರಣೆ 2020 ಜ. 7ರಂದು ನಡೆಯಲಿದ್ದು, ಇದನ್ನು ಸಮಾಜ ಪರಿವರ್ತನ ಸಮುದಾಯ ಸ್ವಾಗತಿಸುವುದು ಎಂದರು.