ಬಾಳೆಹೊನ್ನೂರು(ಸೆ.26): ಹಿರಿಯ ಗಾಯಕ ಎಸ್‌.ಪಿ. ಬಾಲಸುಬ್ರಹ್ಮಣ್ಯಂ ಗಾಯನ ಕೇಳದವರಿಲ್ಲ. ಪಟ್ಟಣದಲ್ಲಿ 2006ರಲ್ಲಿ ನಡೆದಿದ್ದ ಸಂಗೀತ ಸಂಜೆ ಕಾರ್ಯಕ್ರಮಕ್ಕೆ ಅವರು ಬಂದಿದ್ದ ನೆನಪು ಜಿಲ್ಲೆ ಜನರು ಮರೆತಿಲ್ಲ. ಈ ಭಾಗದ ಸಂಗೀತಾಭಿಮಾನಿಗಳ ಮನದಲ್ಲಿ ಎಸ್‌ಪಿಬಿ ಕಾರ್ಯಕ್ರಮದ ನೆನಪು ಇನ್ನೂ ಹಚ್ಚ ಹಸುರಾಗಿದೆ.

"

ರಂಭಾಪುರಿ ಪೀಠದ ಆವರಣದಲ್ಲಿ 2006ರ ಮೇ 28ರಂದು ಶೃಂಗೇರಿ ಕ್ಷೇತ್ರದ ಸಂಜೀವಿನಿ ಚಾರಿಟೇಬಲ್‌ ಟ್ರಸ್ಟ್‌ ವತಿಯಿಂದ ಬಡ ವಿದ್ಯಾರ್ಥಿಗಳ ಶೈಕ್ಷಣಿಕ ವಿದ್ಯಾಭ್ಯಾಸದ ಸಹಾಯಾರ್ಥ ಶೃಂಗೇರಿ ಶಾರದಾ ಪೀಠದ ಆಡಳಿತಾಧಿಕಾರಿ ವಿ.ಆರ್‌. ಗೌರೀಶಂಕರ್‌ ಮಾರ್ಗದರ್ಶನದಲ್ಲಿ ಸಚಿನ್‌ ಮೀಗಾ, ಬಸರೀಕಟ್ಟೆಯ ಸತೀಶ್‌ ನೇತೃತ್ವದಲ್ಲಿ ನಡೆದ ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ರಸಗಾಯನ ನೀಡಲು ಎಸ್‌.ಪಿ.ಬಾಲಸುಬ್ರಹ್ಮಣ್ಯಂ ಅವರು ಆಗಮಿಸಿದ್ದರು.

ಆದರೆ ಆ ದಿನ ಸಂಜೆ ಧಾರಾಕಾರ ಮಳೆ ಸುರಿದಿತ್ತು. ಈ ಹಿನ್ನೆಲೆಯಲ್ಲಿ ಎಸ್‌ಪಿಬಿ ಅವರು ಅಂದು ಸಂಗೀತ ಸಂಜೆ ಕಾರ್ಯಕ್ರಮವನ್ನು ನಡೆಸಲು ಆಗಿರಲಿಲ್ಲ. ಆದರೆ, ಬಹು ದೂರದ ಊರಿನಿಂದಲೇ ಮಲೆನಾಡಿಗೆ ಬಂದು, ಹಾಗೆಯೇ ವಾಪಾಸ್ಸು ತೆರಳಲು ಮನಸ್ಸಾಗದೇ ಹಾಗೂ ನೆರೆದಿದ್ದ ಸಂಗೀತಾಭಿಮಾನಿಗಳಿಗೆ ನಿರಾಸೆ ಮಾಡಬಾರದು ಎಂಬ ಉದ್ದೇಶದಿಂದ ಹಾಡು ಹಾಡಿದ್ದರು. ಸಂಗೀತ ಸಂಜೆ ಕಾರ್ಯಕ್ರಮ ನಡೆಸಲು ನಿರ್ಮಿಸಿದ್ದ ಬೃಹತ್‌ ವೇದಿಕೆಯಲ್ಲಿ ಧಾರಾಕಾರ ಮಳೆ ನಡುವೆಯೂ ಎಸ್‌ಪಿಬಿ ಅವರು ಛತ್ರಿಯನ್ನು ಹಿಡಿಸಿಕೊಂಡೇ ಒಂದು ಹಾಡನ್ನು ಹೇಳಿದ್ದರು. ಅಲ್ಲದೆ, ಅಭಿಮಾನಿಗಳಲ್ಲಿ ಕ್ಷಮೆಯಾಚಿಸಿ ಇನ್ನೊಮ್ಮೆ ಈ ಕಾರ್ಯಕ್ರಮಕ್ಕೆ ಬರುವುದಾಗಿ ಹೇಳಿ ತೆರಳಿದ್ದರು.

ಭೂಮಿ ತಾಯಿಯ ಮಡಿಲು ಸೇರಿದ ಗಾನಯೋಗಿ ಎಸ್‌ಪಿಬಿ

ಈ ಸಂದರ್ಭದಲ್ಲಿ ರಂಭಾಪುರಿ ಪೀಠದ ಜಗದ್ಗುರುಗಳನ್ನು ಭೇಟಿ ಮಾಡಿದ್ದ ಎಸ್‌ಪಿಬಿ ಅವರು ರಂಭಾಪುರಿ ಶ್ರೀಗಳ ಎದುರಲ್ಲಿಯೂ ಒಂದು ಹಾಡನ್ನು ಹೇಳಿದ್ದರು. ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಡಿ.ಬಿ.ಚಂದ್ರೇಗೌಡ ಸೇರಿದಂತೆ ಗಣ್ಯರು ಸಹ ಭಾಗವಹಿಸಿದ್ದರು. ಎಸ್‌ಪಿಬಿ ಅವರೊಂದಿಗೆ ಅವರ ಪತ್ನಿ ಸಾವಿತ್ರಿ ಬಾಲಸುಬ್ರಹ್ಮಣ್ಯಂ ಅವರು ಸಹ ಭಾಗವಹಿಸಿ ಜಗದ್ಗುರುಗಳಿಂದ ಆಶೀರ್ವಾದ ಗುರುರಕ್ಷೆಯನ್ನು ಪಡೆದಿದ್ದರು.

"

ಶಿಕ್ಷಕ ಸುರೇಂದ್ರ ಅವರು ಎಸ್‌ಪಿಬಿ ಕುರಿತ ತಮ್ಮ ಅಭಿಮಾನ ವ್ಯಕ್ತಪಡಿಸಿದ್ದು, ಬಾಳೆಹೊನ್ನೂರಿನಲ್ಲಿ ನಡೆಸಲು ಉದ್ದೇಶಿಸಿದ್ದ ಬಾಲಸುಬ್ರಹ್ಮಣ್ಯಂ ಅವರ ಸಂಗೀತ ಕಾರ್ಯಕ್ರಮವನ್ನು ಕಣ್ತುಂಬಿಕೊಂಡು ಸಂಗೀತವನ್ನು ಆಸ್ವಾದಿಸಬೇಕು ಎಂಬ ಬಹುದೊಡ್ಡ ಆಸೆಯಿಂದ ಟಿಕೆಟ್‌ ಖರೀದಿಸಿದ್ದೆ. ಆದರೆ ಆ ದಿನ ಭಾರಿ ಮಳೆ ಬಂದ ಕಾರಣ ಕಾರ್ಯಕ್ರಮ ರದ್ದಾಗಿತ್ತು. ಅದು ನನಗೆ ಬಹಳ ಬೇಸರವನ್ನುಂಟು ಮಾಡಿತ್ತು. ಮಳೆ ಬಂದರೂ ಎಸ್‌ಪಿಬಿ ಅವರು ಒಂದು ಹಾಡು ಹೇಳಿ, ನಾಲ್ಕು ಮಾತುಗಳನ್ನು ವೇದಿಕೆಯಲ್ಲಿ ಆಡಿದ್ದರು. ಇದು ಅವರ ದೊಡ್ಡತನವನ್ನು ತೋರಿಸುತಿತ್ತು ಎನ್ನುತ್ತಾರೆ.

ಬಾಳೆಹೊನ್ನೂರಿನಲ್ಲಿ 2006ರಲ್ಲಿ ಆಯೋಜಿಸಿದ್ದ ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಛಾಯಾಗ್ರಾಹಕನಾಗಿ ನಾನು ಭಾಗವಹಿಸಿದ್ದೆ. ಆ ಸಂದರ್ಭದಲ್ಲಿ ಅವರು ಎಲ್ಲರೊಂದಿಗೆ ಸರಳತೆಯೊಂದಿಗೆ ಬೆರೆತು ಮಾತನಾಡುತ್ತಿದ್ದರು. ಕಾರ್ಯಕ್ರಮ ರದ್ದಾದರೂ ಮುಂದೊಂದು ದಿನ ಮತ್ತೆ ಬರುತ್ತೇನೆ ಎಂಬ ಭರವಸೆ ನೀಡಿ ತೆರಳಿದ್ದರು. ಆದರೆ ಅವರು ಮತ್ತೆ ಇಲ್ಲಿಗೆ ಬಾರದೇ ಬಾರದ ಲೋಕಕ್ಕೆ ತೆರಳಿರುವುದು ಬೇಸರದ ಸಂಗತಿ ಎಂದು ಛಾಯಾಗ್ರಾಹಕ ಬಿ.ಎಸ್‌.ನಾಗರಾಜ್‌ ಅವರು ತಿಳಿಸಿದ್ದಾರೆ.

ಎಸ್‌ಪಿಬಿ ನಿಧನಕ್ಕೆ ರಂಭಾಪುರಿ ಶ್ರೀ ಸಂತಾಪ

ಪದ್ಮಶ್ರೀ, ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಹಿರಿಯ ಗಾಯಕ ಎಸ್‌.ಪಿ. ಬಾಲಸುಬ್ರಹ್ಮಣ್ಯಂ ನಿಧನದಿಂದ ನಾಡಿಗೆ ಅತ್ಯಂತ ದುಃಖ ಉಂಟಾಗಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಕಲಬುರಗಿ ಗಾಯಕಿ ಮಾಲಾಶ್ರೀ ಕಣವಿ ಕಂಠಸಿರಿ ಮೆಚ್ಚಿಕೊಂಡಿದ್ದ ಎಸ್‌ಪಿಬಿ

1946ರಲ್ಲಿ ಜನಿಸಿದ ಎಸ್‌ಪಿಬಿ ಅವರು ದಕ್ಷಿಣ ಭಾರತದಲ್ಲಿ ಹೆಸರಾಂತ ಗಾನಕೋಗಿಲೆ ಆಗಿದ್ದರು. 15 ಭಾಷೆಗಳಲ್ಲಿ ಸುಮಾರು 40 ಸಾವಿರ ಗೀತೆಗಳನ್ನು ಹಾಡಿದ ಸ್ವರಮಾಂತ್ರಿಕ. ಚಲನಚಿತ್ರ ಗೀತೆಗಳಷ್ಟೇ ಅಲ್ಲದೇ, ಸಾಕಷ್ಟುಭಕ್ತಿಗೀತೆಗಳನ್ನು ಹಾಡಿದ್ದೊಂದು ದಾಖಲೆ. ಕನ್ನಡ ಭಾಷೆಯಲ್ಲಿ ಅನೇಕ ಗೀತೆ ಹಾಡಿದ ಶ್ರೇಯಸ್ಸು ಅವರದು. ಸಿದ್ಧಾಂತ ಶಿಖಾಮಣಿ ಶ್ಲೋಕಗಳನ್ನು ರಾಗ, ಲಯಬದ್ಧವಾಗಿ ಹಾಡಿ ಸರಳವಾಗಿ ಕನ್ನಡದ ಭಾಷಾಂತರಕ್ಕೆ ಧ್ವನಿ ಕೊಟ್ಟಕೀರ್ತಿ ಅವರದ್ದಾಗಿದೆ ಎಂದು ಸಂತಾಪ ಸೂಚಕ ಸಂದೇಶದಲ್ಲಿ ಸ್ಮರಿಸಿದ್ದಾರೆ.

2006 ಮೇ 28ರಂದು ಬಾಳೆಹೊನ್ನೂರು ಶ್ರೀ ಜಗದ್ಗುರು ರಂಭಾಪುರಿ ಪೀಠದ ಪರಿಸರದಲ್ಲಿ ರಸಮಂಜರಿ ಕಾರ್ಯಕ್ರಮಕ್ಕೆ ಬಂದಿದ್ದರು. ಆಗ ಸತಿ ಪತಿಗಳು ಆಶೀರ್ವಾದ ಪಡೆದ ದಿನ ಮತ್ತು ಅವರು ಆಡಿದ ಮಾತು ಮರೆಯುವಂತಿಲ್ಲ. ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ ದರ್ಶನ ಪಡೆದ ಅವರು ಸಂದರ್ಶನಕ್ಕೆ ಬಂದಾಗ ನಾನು ವೀರಭದ್ರಸ್ವಾಮಿ ಆರಾಧಕ ಎಂದು ಹೇಳಿದ್ದರು. ಅಲ್ಲದೇ ನನ್ನ ಪೂರ್ಣ ಹೆಸರು ಶ್ರೀಪತಿ ಪಂಡಿತಾರಾಧ್ಯಲು ಬಾಲಸುಬ್ರಹ್ಮಣ್ಯಂ ಎಂದು ಹೇಳಿದ್ದು ಹೆಮ್ಮೆಯ ಸಂಗತಿ. ಶಿವಭಕ್ತಿ ಸಂಪನ್ನರಾದ ಅವರು ಎಲ್ಲ ವರ್ಗದ ಎಲ್ಲ ಸಮುದಾಯದ ಜನರೊಂದಿಗೆ ಪ್ರೀತಿ, ವಿಶ್ವಾಸಗಳನ್ನು ಗಳಿಸಿಕೊಂಡಿದ್ದರು ಎಂದಿದ್ದಾರೆ.

ಕೊರೋನಾ ಸೋಂಕಿಗೆ ತುತ್ತಾಗಿ ಪುನಃ ವರದಿಯಲ್ಲಿ ನೆಗೆಟಿವ್‌ ಎಂದು ಬಂದಿತ್ತು. ಆದರೂ ಅವರು ಅನಾರೋಗ್ಯದಿಂದ ಬಾರದ ಲೋಕಕ್ಕೆ ಹೋಗಿದ್ದಾರೆ. ಇದರಿಂದ ಇಡೀ ನಾಡಿಗೆ ಅತ್ಯಂತ ದುಃಖವಾಗಿದೆ ಎಂದು ರಂಭಾಪುರಿ ಜಗದ್ಗುರುಗಳು ಶೋಕ ವ್ಯಕ್ತಪಡಿಸಿದ್ದಾರೆ.