ಜಮಖಂಡಿ(ಏ.29): ದೇಶ-ರಾಜ್ಯದಲ್ಲಿ ಕೊರೋನಾ ಸೋಂಕು ಹರಡುತ್ತಿದ್ದು, ಅದರ ಹತೋಟಿಗೆ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಮಾಜಿ ಶಾಸಕ, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಎಸ್‌.ಜಿ. ನಂಜಯ್ಯನಮಠ ಆರೋಪಿಸಿದ್ದಾರೆ. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೋನಾ ವೈರಸ್‌ ಹರಡದಂತೆ ರಾಜ್ಯ ಸರ್ಕಾರ ಹೆಚ್ಚಿನ ಕ್ರಮ ಕೈಕೊಳ್ಳಬೇಕು. ಉತ್ತರ ಕರ್ನಾಟಕದಲ್ಲಿ ಹೆಚ್ಚಿನ ಪ್ರಯೋಗಾಲಯ ತೆರೆಯಬೇಕು. ಸದ್ಯದ ಲ್ಯಾಬ್‌ಗಳಲ್ಲಿ ವೈರಾಣು ಕಂಡು ಹಿಡಿಯುವುದು ವಿಳಂಬವಾಗುತ್ತಿದೆ. ಈಗಾಗಲೇ ರಾಜ್ಯದ ವಿವಿಧ ಪ್ರದೇಶಗಳಿಂದ ಸುಮಾರು 1 ಲಕ್ಷಕ್ಕೂ ಹೆಚ್ಚು ಕೊರೋನಾ ವೈರಾಣುಗಳು ಸಂಗ್ರಹವಾಗಿದ್ದು, ಕೇವಲ 38 ಸಾವಿರದಷ್ಟು ತಪಾಸಣೆಗೊಂಡು 8 ಸಾವಿರದಷ್ಟು ಫಲಿತಾಂಶ ಸಿಕ್ಕಿದೆ. ವೈದ್ಯಕೀಯ ತಜ್ಞರ ಪ್ರಕಾರ ಕೊರೋನಾ ವೈರಸ್‌ ಜೂನ್‌-ಸೆಪ್ಟೆಂಬರ್‌ ತಿಂಗಳವರೆಗೆ ಹರಡಲಿವೆ ಎಂದರು.

ಕೊರೋನಾ ಸೋಂಕಿ​ತರ ಪತ್ತೆಗೆ ಬದಲಿ ​ಮಾರ್ಗ: ಇಲ್ಲಿದೆ ಮಾಸ್ಟರ್‌ ಪ್ಲಾನ್‌..!

ಬೀದರ್‌, ಕಲಬುರಗಿ, ವಿಜಯಪುರ, ಬಾಗಲಕೋಟೆ, ಹುಬ್ಬಳ್ಳಿ-ಧಾರವಾಡ, ಬೆಳಗಾವಿಗಳಲ್ಲಿ ಶೀಘ್ರದಲ್ಲೇ ಹೆಚ್ಚಿನ ಲ್ಯಾಬ್‌ಗಳನ್ನು ತೆರೆಯಬೇಕು. ಈ ಬಗ್ಗೆ ಉತ್ತರ ಕರ್ನಾಟಕದ ಇಬ್ಬರೂ ಉಪ ಮುಖ್ಯಮಂತ್ರಿಗಳು ಮೌನ ತಾಳಿದ್ದು, ಖೇದಕರ ಸಂಗತಿ ಎಂದರು.

ಜಮಖಂಡಿ ಶಾಸಕ ಆನಂದ ನ್ಯಾಮಗೌಡ ಅವರು ಕೊರೋನಾ ವಾರಿಯ​ರ್ಸ್‌ರಂತೆ ಕಾರ್ಯ ನಿರ್ವಹಿಸುತ್ತಿದ್ದು, ಕ್ಷೇತ್ರದ ಗ್ರಾಮೀಣ ಪ್ರದೇಶ ಹಾಗೂ ಜಮಖಂಡಿ ಶಹರದಲ್ಲಿ ಸ್ವಂತ ಸ್ಯಾನಿಸೈ​ಸ​ರ್‌, ಹಣ್ಣು-ತರಕಾರಿ ಹಂಚಿದ್ದು, ಅಲ್ಲದೇ ನಗರಸಭೆ ಸದಸ್ಯ ರಾಜೂ ಪಿಸಾಳ ಕಳೆದ 30 ದಿನಗಳಿಂದ ಕೊರೋನಾ ವಾರಿಯ​ರ್‍ಸ್ಗಳಾದ ಪೊಲೀಸ್‌ ಸಿಬ್ಬಂದಿ, ಆಶಾ ಕಾರ್ಯಕರ್ತೆಯರಿಗೆ, ಆರೋಗ್ಯ ಇಲಾಖೆ ಸಿಬ್ಬಂದಿಗಳಿಗೆ ಊಟ-ಉಪಾಹಾರದ ವ್ಯವಸ್ಥೆ ಮಾಡುತ್ತಿರುವುದು ಶ್ಲಾಘನೀಯ ಎಂದರು.

ಚಾಮರಾಜಪೇಟ ಕಾಂಗ್ರೆಸ್‌ ಶಾಸಕ ಜಮೀರ ಅಹ್ಮದ ಪಾದರಾಯನಪುರದಲ್ಲಿ ನಡೆಸಿದ ಕೃತ್ಯ ನಾಚಿಕೆ ತರುವಂತಾಗಿದೆ. ಈಗಾಗಲೇ ಕಾಂಗ್ರೆಸ್‌ ಪಕ್ಷ ಹಿರಿಯರು ಅವರಿಗೆ ಬುದ್ಧಿ ಮಾತು ಹೇಳಿದ್ದು, ಅವರ ವಿರುದ್ಧ ಶಿಸ್ತಿನ ಕ್ರಮ ಕೈಗೊ​ಳ್ಳುವ ವಿಷಯ ಹೈಕ​ಮಾಂಡಗೆ ಬಿಟ್ಟದ್ದಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಆಶಾ ಕಾರ್ಯಕರ್ತೆಯರು ತಮ್ಮ ಜೀವನದ ಹಂಗು ಮರೆತು ಕೋವಿಡ್‌-19ರ ವಿರುದ್ಧ ಹೋರಾಟ ನಡೆಸುತ್ತಿದ್ದು, ಅವರಿಗೆ ರಾಜ್ಯ ಸರ್ಕಾರ ಹೆಚ್ಚಿನ ಭತ್ಯೆ ನೀಡಿ ಬೆಂಬಲಿಸಬೇಕು ಎಂದು ಒತ್ತಾಯಿಸಿದರು.
ಶಾಸಕ ಆನಂದ ನ್ಯಾಮಗೌಡ ಮಾತನಾಡಿ, ಜಿಲ್ಲೆಯಲ್ಲಿ ಕೋವಿಡ್‌-19 ಸೋಂಕು ತಗುಲಿದ ವ್ಯಕ್ತಿಗಳು ಹೆಚ್ಚಾಗುತ್ತಿದ್ದು, ಜಿಲ್ಲಾ ವೈದ್ಯಾ​ಧಿ​ಕಾರಿಗಳು ಪ್ರಥಮ, ದ್ವಿತೀಯ ಸೋಂಕಿತರನ್ನು ಕೂಡಲೇ ರಾರ‍ಯಪಿಡ್‌ ಪರೀಕ್ಷೆ ನಡೆಸಬೇಕು. ಅಲ್ಲದೇ ಖಾಸಗಿ ವೈದ್ಯರು ತಮ್ಮ ಆಸ್ಪತ್ರೆಗಳನ್ನು ತೆರೆದು ಇತರೇ ರೋಗಿಗಳಿಗೆ ಅನುಕೂಲ ಮಾಡಬೇಕು. ಖಾಸಗಿ ವೈದ್ಯ​ರಿಗೂ ಸುರಕ್ಷತಾ ಕಿಟ್‌ ಪೂರೈ​ಸು​ವಂತೆ ಮಾಡಬೇಕೆಂದು ಒತ್ತಾಯಿಸಿದರು.

ಪತ್ರಿ​ಕಾಗೋಷ್ಠಿಯಲ್ಲಿ ಹಿರಿಯ ವಕೀಲ ಎಸ್‌.ಎಸ್‌. ದೇವರವರ, ಅರುಣಕುಮಾರ ಶಹಾ, ಕಲ್ಲಪ್ಪ ಗಿರಡ್ಡಿ, ರವಿ ಯಡಹಳ್ಳಿ, ನಜೀರ ಕಂಗನೊಳ್ಳಿ, ಬಸವರಾಜ ಹರಕಂಗಿ, ಸಂಗಮೇಶ ಬಗಲಿದೇಸಾಯಿ ಇದ್ದರು.