ಕಾರವಾರ(ಮಾ.07): ಅನಾರೋಗ್ಯಕ್ಕೆ ಒಳಗಾಗಿದ್ದ ವ್ಯಕ್ತಿಯನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡಿ, ಚಿಕಿತ್ಸೆಗೆ ವ್ಯವಸ್ಥೆ ಮಾಡುವ ಮೂಲಕ ಶಾಸಕ ಆರ್‌.ವಿ. ದೇಶಪಾಂಡೆ ಮಾನವೀಯತೆ ಮೆರೆದಿದ್ದಾರೆ.

ರಾಮಚಂದ್ರ ಹರಿಪಂತ ಸಾವಂತ (85) ಎನ್ನುವವರಿಗೆ ವೈದ್ಯಕೀಯ ಚಿಕಿತ್ಸೆ ಮಾಡಿದ್ದು, ಹಳಿಯಾಳ ತಾಲೂಕಿನ ಕುಂಬಾರಗಲ್ಲಿಯಲ್ಲಿ ಆಕಸ್ಮಿಕವಾಗಿ ಬಿದ್ದು ಏಟು ಮಾಡಿಕೊಂಡು ನರಳುತ್ತಿದ್ದ ರಾಮಚಂದ್ರ ಅವರನ್ನು ಸ್ಥಳೀಯ ಕರ್ನಾಟಕ ರಕ್ಷಣಾ ವೇದಿಕೆಯ ಸದಸ್ಯರು ಗಮನಿಸಿದ್ದಾರೆ. ಕೂಡಲೇ ಅವರನ್ನು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದು, ಪರೀಕ್ಷೆ ನಡೆಸಿದ ಡಾ. ಸೀಮಾ ಕದಂ ತೊಡೆಯ ಮೂಳೆ ಮುರಿತವಾಗಿದೆ ಎಂದು ತಿಳಿಸಿದ್ದಾರೆ.

ಸಂಸದ ಅನಂತ ಕುಮಾರ್‌ ಹೆಗಡೆ ಆಸ್ಪತ್ರೆಗೆ ದಾಖಲು

ಈ ಬಗ್ಗೆ ವೇದಿಕೆಯವರು ಸ್ಥಳೀಯ ಶಾಸಕ ಆರ್‌.ವಿ. ದೇಶಪಾಂಡೆಗೆ ತಿಳಿಸಿದ್ದಾರೆ. ಕೂಡಲೇ ಆಸ್ಪತ್ರೆಗೆ ಬಂದ ಆರ್‌ವಿಡಿ ರಾಮಚಂದ್ರ ಆರೋಗ್ಯ ವಿಚಾರಿಸಿ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕೆಎಂಸಿ ಆಸ್ಪತ್ರೆಗೆ ದಾಖಲಿಸಲು ವ್ಯವಸ್ಥೆ ಮಾಡಲು ರುಡ್‌ ಸೆಟಿ ಆಡಳಿತಾಧಿಕಾರಿ ಪ್ರಕಾಶ ಪ್ರಭು ಅವರಿಗೆ ಸೂಚಿಸಿದರು. ಕರ್ನಾಟಕ ರಕ್ಷಣಾ ವೇದಿಕೆ ಹಳಿಯಾಳ ಘಟಕದ ವತಿಯಿಂದ ಶಾಸಕರಿಗೆ ಧನ್ಯವಾದ ತಿಳಿಸಿದ್ದಾರೆ.