ಕಾರವಾರ(ಜೂ.21): ವಿದೇಶಿ ಪ್ರಜೆ ಕಾಸಿಲ್ಲದೇ, ವೀಸಾ ಅವಧಿ ಮುಗಿದು ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ದಿಕ್ಕು ತೋಚದಂತಾಗಿ ಕುಳಿತಿದ್ದನು. ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ ಆತನನ್ನು ಕರೆದುಕೊಂಡು ಹೋಗಿದ್ದಾರೆ.

ರಷ್ಯಾ ಮೂಲದ ರೂಸ್‌ ಎಂಬ ಪ್ರವಾಸಿ ಸಂಕಷ್ಟಕ್ಕೆ ಸಿಲುಕಿದ್ದು, ಈತನಗೆ ರಷಿಯನ್‌ ಭಾಷೆ ಹೊರತಾಗಿ ಬೇರೆ ಭಾಷೆ ಮಾತನಾಡಲು ಬರುವುದಿಲ್ಲ. ಭಾರತ ಪ್ರವಾಸಕ್ಕೆ ಬಂದಿದ್ದ ಈತ ಲಾಕ್‌ಡೌನ್‌ನಿಂದಾಗಿ ಗೋಕರ್ಣದಲ್ಲಿ ಸಿಲುಕಿಕೊಂಡಿದ್ದನು. ಲಾಕ್‌ಡೌನ ಸಡಿಲಿಕೆ ಬಳಿಕ ಬಸ್‌ ಮೂಲಕ ಕಾರವಾರಕ್ಕೆ ಬಂದಿದ್ದು, ಎಲ್ಲಿಗೆ ಹೋಗಬೇಕು ಎನ್ನುವುದು ತಿಳಿಯದೇ ಅಲೆದಾಡುತ್ತಿದ್ದಾನೆ.

ತೋಟ ಬಿಟ್ಟು ಅಂಗಡಿಗೆ ನುಗ್ಗುತ್ತಿರುವ ಕಾಡಾನೆಗಳು!

ಹೇಗೊ ಜಿಲ್ಲಾಧಿಕಾರಿ ಕಚೇರಿಗೆ ಬಂದು ಕುಳಿತಿದ್ದಾನೆ. ಅಪರ ಜಿಲ್ಲಾಧಿಕಾರಿ ನಾಗರಾಜ ಸಿಂಗ್ರೇರ್‌ ಮಾತನಾಡಿಸಿದರೂ ಭಾಷೆ ಬರದ ಕಾರಣ ಹೆಚ್ಚು ಮಾಹಿತಿ ಪಡೆಯಲು ಸಾಧ್ಯವಾಗಿಲ್ಲ. ಗೋವಾಕ್ಕೆ ಹೋಗಬೇಕು ಎಂದು ಹೇಳಿಕೊಂಡಿದ್ದಾನೆ.

ನಗರ ಠಾಣೆಯ ಪೊಲೀಸರು ವಿಚಾರಣೆ ನಡೆದ ವೇಳೆ ರಷ್ಯಾಕ್ಕೆ ತೆರಳಲು ಸಹಾಯ ಮಾಡುವಂತೆ ಕೋರಿದ್ದು, ಪೊಲೀಸರು ಹುಬ್ಬಳ್ಳಿಗೆ ಕಳಿಸಿದ್ದಾರೆ. ಅಲ್ಲಿಂದ ರೈಲ್ವೆ ಮೂಲಕ ಮುಂಬೈಗೆ ಹೋಗಿ ರಷ್ಯಾ ದೂತಾವಾಸ ಕಚೇರಿಗೆ ಹೋಗಿ ಸ್ವದೇಶಕ್ಕೆ ತೆರಳುವುದಾಗಿ ಹೇಳಿದ್ದಾನೆ.