ಧಾರವಾಡ(ಅ.7): ವಿಜಯದಶಮಿ ಅಂಗವಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವತಿಯಿಂದ ಭಾನುವಾರ ಸಂಜೆ ನಗರದಲ್ಲಿ ನಡೆ​ದ ಪಥ ಸಂಚಲನ ಜನರ ಕಣ್ಮನ ಸೆಳೆಯಿತು. 

ಗಣವೇಷಧಾರಿಗಳು ಶಿಸ್ತಿನ ಸಿಪಾಯಿಗಳಂತೆ ಘೋಷ ವಾದ್ಯಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಿದ್ದರೆ, ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ಸಾರ್ವಜನಿಕರು ಕುತೂಹಲದಿಂದ ಸಂಚಲನ ವೀಕ್ಷಿಸಿದರು. ಸಂಚಲನ ಅಂಗವಾಗಿ ನಗರದ ಪ್ರಮುಖ ಬೀದಿಗಳನ್ನು ರಂಗೋಲಿ, ಕೇಸರಿ ಧ್ವಜಗಳಿಂದ ಅಲಂಕಾರ ಮಾಡಲಾಗಿತ್ತು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಸಂಚಲನದಲ್ಲಿದ್ದ ಭಗವಾಧ್ವಜ ಹಾಗೂ ಸಂಘದ ಸಂಸ್ಥಾಪಕ ಡಾಕ್ಟರಜೀ, ಗುರೂಜಿ ಭಾವಚಿತ್ರಕ್ಕೆ ಜನರು ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ಸಲ್ಲಿಸಿದರು. ಭಾರತ ಹೈಸ್ಕೂಲ್‌ನಿಂದ ಪ್ರಾರಂಭವಾದ ಪಥ ಸಂಚಲನ ರೀಗಲ್‌ ವೃತ್ತ, ಕಾಮತ ಹೋಟೆಲ್‌ ವೃತ್ತ, ಸುಭಾಷ ರಸ್ತೆ, ಗಾಂಧಿ ಚೌಕ್‌, ಶಿವಾಜಿ ರಸ್ತೆ, ಹೆಬ್ಬಳ್ಳಿ ಅಗಸಿ, ಮಂಗಳವಾರಪೇಟ್‌, ಭೂಸಪ್ಪ ಚೌಕ್‌, ಜಕಣಿ ಭಾವಿ ರಸ್ತೆ, ವಿವೇಕಾನಂದ ವೃತ್ತ, ಅಕ್ಕಿಪೇಟೆ ಮಾರ್ಗವಾಗಿ ಭಾರತ ಹೈಸ್ಕೂಲ್‌ನಲ್ಲಿ ಸಮಾರೋಪಗೊಂಡಿತು.

ನಂತರ ಜರುಗಿದ ವೇದಿಕೆ ಕಾರ್ಯಕ್ರಮದಲ್ಲಿ ಉತ್ತರ ಕರ್ನಾಟಕ ಪ್ರಾಂತ ಕಾರ್ಯವಾಹ ರಾಘವೇಂದ್ರ ಕಾಗವಾಡ ಮಾತನಾಡಿ, ಭಾರತವನ್ನು ವಿಶ್ವ ಗುರುವನ್ನಾಗಿ ನೋಡುವ ಹಂಬಲದೊಂದಿಗೆ 1925ರಲ್ಲಿ ವಿಜಯದಶಮಿಯಂದು ಡಾ.ಕೇಶವ ಹೆಡಗೆವಾರ್‌ ಅವರು ಕಟ್ಟಿದ ಸಂಘ 94 ವರ್ಷಗಳಿಂದ ವಿವಿಧ ರೀತಿಯ ಸೇವಾ ಕಾರ್ಯಗಳಲ್ಲಿ ತೊಡಗಿಕೊಂಡಿದೆ. ಸಮಾಜಕ್ಕಾಗಿ ಸಮಯ ಕೊಡುವಂತಹ ವ್ಯಕ್ತಿಗಳನ್ನು ಶಾಖೆಗಳ ಮೂಲಕ ಸಂಘ ನಿರ್ಮಾಣ ಮಾಡುತ್ತಿದೆ ಎಂದರು.

ಸಂಘ ಹಿಂದೂಗಳನ್ನು ಸಂಘಟಿಸುವ ಕೆಲಸದ ಜೊತೆಗೆ ದೇಶಕ್ಕಾಗಿ ಕೆಲಸ ಮಾಡುವ ಮಾನಸಿಕತೆ ಬೆಳೆಸಿಕೊಳ್ಳಬೇಕಾದ ಜನರನ್ನು ತಯಾರು ಮಾಡುತ್ತಿದೆ. ಶಾಖೆಗೆ ಬರುವ ವ್ಯಕ್ತಿ ತನ್ನಿಂದ ತಾನೇ ಸಮಾಜಕ್ಕೆ ಏನು ಕೊಡಬಲ್ಲೆ ಎಂದು ವಿಚಾರ ಮಾಡುತ್ತದಲ್ಲದೇ, ಆತ ಶ್ರೇಷ್ಠ, ಸಂಪನ್ನ ವ್ಯಕ್ತಿಯಾಗಿ ಸಮಾಜ ಮುನ್ನಡೆಸುವ ಮಟ್ಟಕ್ಕೆ ಬೆಳೆಯುತ್ತಾನೆ ಎಂದರು.

ಅತಿಥಿಯಾಗಿ ಪಾಲ್ಗೊಂಡಿದ್ದ ವಕೀಲ ಬಸವರಾಜ ಬಳ್ಳೊಳ್ಳಿ ಮಾತನಾಡಿ, ಸಂಘ ಪ್ರಾರಂಭವಾದ ದಿನದಿಂದಲೂ ನಡೆಸುತ್ತಿರುವ ಕಾರ್ಯಗಳನ್ನು ಹೇಳುವುದು ಅಸಾಧ್ಯವಾಗಿದೆ. ನಮ್ಮ ಭಾರತೀಯ ಸೈನ್ಯ ಬಿಟ್ಟರೆ ಆರ್‌ಎಸ್‌ಎಸ್‌ ಒಂದು ಅತಿ ದೊಡ್ಡ ಸಂಘಟನೆಯಾಗಿದೆ ಎಂದರೆ ಅತಿಶೋಕ್ತಿ ಆಗಲಾರದು ಎಂದರು.

ಕರ್ನಾಟಕ ಉತ್ತರ ಪ್ರಾಂತ ಸಹ ಕಾರ್ಯವಾಹ ಶ್ರೀಧರ ನಾಡಗೀರ, ಶಾಸಕರಾದ ಅರವಿಂದ ಬೆಲ್ಲದ, ಅಮೃತ ದೇಸಾಯಿ ಸೇರಿದಂತೆ ಸ್ವಯಂ ಸೇವಕರು ಇದ್ದರು. ಸಂಗಮೇಶ ಪಟ್ಟಣಕುಡಿ ಸ್ವಾಗತಿಸಿದರು. ನಿತೀಶ ಡಂಬಳ ನಿರೂಪಿಸಿದರು. ನಗರ ಕಾರ್ಯವಾಹ ಶ್ರೀಶ ಬಳ್ಳಾರಿ ವಂದಿಸಿದರು. ಇದಕ್ಕೂ ಪೂರ್ವದಲ್ಲಿ ಸ್ವಯಂ ಸೇವಕರು ನಡೆಸಿದ ಘೋಷ, ದಂಡ ಪ್ರಯೋಗಗಳು, ವ್ಯಾಯಾಮಗಳ ಪ್ರದರ್ಶನ ಆಕರ್ಷಕವಾಗಿತ್ತು.