ಬ್ಯಾಂಕ್ ಮ್ಯಾನೇಜರ್ ಎಂದು ಫೋನ್ ಮಾಡಿ 1 ಲಕ್ಷ ರು. ಲಪಟಾಯಿಸಿದ್ರು : ಹುಷಾರ್!
- ಬ್ಯಾಂಕ್ ಮ್ಯಾನೇಜರ್ ಹೆಸರು ಹೇಳಿ ಎಟಿಎಂ ಮಾಹಿತಿ ಪಡೆದು ಮೋಸ
- ಕ್ಷಣಾರ್ಧದಲ್ಲಿ ವೃದ್ಧನ ಖಾತೆಯಿಂದ 99,999 ರು. ಲಪಟಾಯಿಸಿದ ಖದೀಮರು
ಮೈಸೂರು (ಸೆ.19): ಬ್ಯಾಂಕ್ ಮ್ಯಾನೇಜರ್ ಹೆಸರು ಹೇಳಿ ಎಟಿಎಂ ಮಾಹಿತಿ ಪಡೆದು ಮೋಸ ಮಾಡಿ ಕ್ಷಣಾರ್ಧದಲ್ಲಿ 99,999 ರು. ಲಪಟಾಯಿಸಿದ ಘಟನೆ ಮೈಸೂರಲ್ಲಿ ನಡೆದಿದೆ.
ಮೈಸೂರು ಜಿಲ್ಲೆ ನಂಜನಗೂಡಿನಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್ ನಲ್ಲಿ ಎಟಿಎಂ ಮಾಡಿಸಿಕೊಡುವುದಾಗಿ ನಂಬಿಸಿ ವಂಚನೆ ಮಾಡಲಾಗಿದೆ. ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಖಾತೆಯಿಂದ 99,999 ರು. ಲಪಟಾಯಿಸಲಾಗಿದೆ.
'ಹಣ ಕಳೆದುಕೊಳ್ಳಬೇಡಿ' ಸೈಬರ್ ವಂಚಕರಿಂದ ಬಚಾವಾಗಲು ಸುಲಭ ಸೂತ್ರ!
ಮೈಸೂರು ಜಿಲ್ಲೆ ನಂಜನಗೂಡಿನ ಗುಜರಿ ವ್ಯಾಪಾರಿ ವೃದ್ದ ಬಷೀರ್ ಅಹಮದ್ ವಂಚನೆಗೊಳಗಾದವರು. ನಂಜನಗೂಡಿನ ನೀಲಕಂಠನಗರದಲ್ಲಿ ಗುಜರಿ ವ್ಯಾಪಾರ ಮಾಡುತ್ತಿದ್ದ ವೃದ್ದ ಬಷೀರ್ ಅವರ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ಬಷೀರ್ ಅಹಮದ್‌ರ ಪತ್ನಿ ಷಹಜಹಾನ್ ಎಂಬುವರ ಬಳಿ ಮಾಹಿತಿ ಪಡೆದ ವಂಚಕರು ಹಣ ಎಗರಿಸಿದ್ದಾರೆ.
ಬ್ಯಾಂಕ್ ಮ್ಯಾನೇಜರ್ ಎಂದು ಪರಿಚಯಿಸಿಕೊಂಡಿರುವ ವಂಚಕ ಎಟಿಎಂ ನ ಸಂಪೂರ್ಣ ಮಾಹಿತಿ ಪಡೆದುಕೊಂಡು ಖಾತೆಯಲ್ಲಿದ್ದ ಹಣ ಮಂಗಮಾಯ ಮಾಡಿದ್ದಾನೆ. ಬಷೀರ್ ಅಹಮದ್ ರವರು ನಂಜನಗೂಡಿನ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾತೆ ಹೊಂದಿದ್ದು ಡೆಬಿಟ್ ಕಾರ್ಡ್ ಪಡೆದಿದ್ದಾರೆ.
ಅಲ್ಲದೆ ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್ ನಲ್ಲೂ ಖಾತೆ ಹೊಂದಿರುವ ಬಷೀರ್ ಅಹಮದ್ ಇದರಲ್ಲಿ ಎಟಿಎಂ ಕಾರ್ಡ್ ಪಡೆದಿರುವುದಿಲ್ಲ. ಈ ಮಾಹಿತಿಯನ್ನ ಸಂಗ್ರಹಿಸಿರುವ ವಂಚಕರು ಎಟಿಎಂ ಮಾಡಿಸಿಕೊಡುವುದಾಗಿ ನಂಬಿಸಿ ಮೊಬೈಲ್ ನಲ್ಲೇ ಖಾತೆಯ ಸಂಪೂರ್ಣ ಮಾಹಿತಿ ಪಡೆದಿದ್ದಾರೆ.
ಒಮ್ಮೆ 49999 ರು. ಮತ್ತೊಮ್ಮೆ 50000ರು. ಹಣ ಡ್ರಾ ಮಾಡಿಕೊಂಡು ಮೊಬೈಲ್ ಸ್ವಿಚ್ ಆಫ್ ಮಾಡಿದ್ದಾರೆ. ಹಣ ಕಳೆದುಕೊಂಡ ಬಷೀರ್ ಅಹಮದ್ ಮೈಸೂರಿನ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.