Asianet Suvarna News Asianet Suvarna News

ಸಿದ್ಧಗಂಗಾ ಮಠಕ್ಕೆ ತೆರಳಿ ಧ್ಯಾನಸ್ಥರಾಗಿ ಕುಳಿತ ಬಿಜೆಪಿ ಅಭ್ಯರ್ಥಿ ಮುನಿರತ್ನ

ರಾಜ್ಯದಲ್ಲಿ ಚುನಾವಣೆಗೆ ಇನ್ನೇನು ಕೆಲ ದಿನಗಳಷ್ಟೆ ಬಾಕಿ ಉಳಿದಿದೆ. ನವೆಂಬರ್ 3 ರಂದು ಶಿರಾ ಹಾಗೂ ಆರ್‌ ಆರ್‌ ನಗರ ಕ್ಷೇತ್ರದಲ್ಲಿ ಉಪ ಚುನಾವಣೆ ನಡೆಯಲಿದೆ. ಈ  ನಿಟ್ಟಿನಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ಸಿದ್ದಂಗಾ ಮಠಕ್ಕೆ ಭೇಟಿ ನೀಡಿದ್ದಾರೆ. 

RR Nagar BJP Candidate Muniratna Visits Siddaganga Mutt snr
Author
Bengaluru, First Published Oct 17, 2020, 10:21 AM IST

ತುಮಕೂರು (ಅ.17):  ನನ್ನ ಮೇಲೆ ವಿಶ್ವಾಸವಿಟ್ಟು ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ದೆಹಲಿಯ ವರಿಷ್ಠರು ಟಿಕೆಟ್‌ ನೀಡಿದ್ದು ಆರ್‌.ಆರ್‌. ನಗರದ ಜನತೆ ನನ್ನನ್ನು ಆಶೀರ್ವದಿಸಲಿದ್ದಾರೆ ಎಂಬ ವಿಶ್ವಾಸವನ್ನು ಆ ಕ್ಷೇತ್ರದ ಅಭ್ಯರ್ಥಿ ಮುನಿರತ್ನ ವ್ಯಕ್ತಪಡಿಸಿದ್ದಾರೆ.

ಅವರು ಶುಕ್ರವಾರ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಲಿಂಗೈಕ್ಯ ಶ್ರೀಗಳ ಗದ್ದುಗೆ ದರ್ಶನ ಮಾಡಿ ಸಿದ್ಧಲಿಂಗ ಸ್ವಾಮೀಜಿ ಅವರ ಆಶೀರ್ವಾದ ಪಡೆದ ಬಳಿಕ ಮಾತನಾಡಿದರು.

ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ನಾನು ಮಾಡಿರುವ ಅಭಿವೃದ್ಧಿ ಕಾರ್ಯಗಳು ಉಪಚುನಾವಣೆಯಲ್ಲಿ ನನ್ನ ಕೈ ಹಿಡಿಯಲಿದೆ ಎಂದರು.

ರಾಜರಾಜೇಶ್ವರಿ ನಗರ ಕ್ಷೇತ್ರದ ಮತದಾರರು ಎಂದಿಗೂ ನನ್ನ ಕೈ ಬಿಡಲಾರರು. ನಾನು ಇದುವರೆಗೂ ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳು ಏನೆಂಬುದು ಅವರಿಗೆ ಗೊತ್ತಿದೆ. ಹಾಗಾಗಿ ಅವರು ನನ್ನ ಕೈ ಹಿಡಿಯುತ್ತಾರೆ ಎಂಬ ನಂಬಿಕೆ ಇದೆ ಎಂದರು.

ಬಿಜೆಪಿ ಕಾರ್ಯಕರ್ತರ ಮೇಲಿನ ಕೇಸ್‌ ಹಿಂಪಡೆಯಲು ಮುನಿರತ್ನ ಚಿಂತನೆ

ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಸೇರಿದಂತೆ ಕೇಂದ್ರ ಸರ್ಕಾರ ಕೈಗೊಂಡಿರುವ ಜನಪರ ಅಭಿವೃದ್ಧಿ ಕಾರ್ಯಗಳು, ಮುಖ್ಯಮಂತ್ರಿ ಯಡಿಯೂರಪ್ಪ ಸರ್ಕಾರ ಕೈಗೊಂಡಿರುವ ಅಭಿವೃದ್ಧಿ ಕೆಲಸಗಳು, ನಾನು ಶಾಸಕನಾಗಿ ಮಾಡಿರುವ ಅಭಿವೃದ್ಧಿ ಕಾರ್ಯಗಳೇ ನನಗೆ ಶ್ರೀರಕ್ಷೆ ಎಂದು ಅವರು ಪುನರುಚ್ಚರಿಸಿದರು.

ಉಪಚುನಾವಣೆ ಇರುವ ಹಿನ್ನೆಲೆಯಲ್ಲಿ ಶ್ರೀಮಠಕ್ಕೆ ಬಂದು ಲಿಂಗೈಕ್ಯ ಹಿರಿಯ ಶ್ರೀಗಳ ಗದ್ದುಗೆ ದರ್ಶನ ಪಡೆದು, ಮಠಾಧ್ಯಕ್ಷರಾದ ಸಿದ್ದಲಿಂಗ ಸ್ವಾಮೀಜಿಯವರ ಆಶೀರ್ವಾದ ಪಡೆದಿದ್ದೇನೆ. ಹಿರಿಯ ಶ್ರೀಗಳು ಮತ್ತು ಸಿದ್ದಲಿಂಗ ಶ್ರೀಗಳ ಆಶೀರ್ವಾದ ಸದಾ ನನ್ನ ಮೇಲಿದೆ. ಹಾಗಾಗಿ ಈ ಉಪಚುನಾವಣೆಯಲ್ಲಿ ನಾನು ಜಯಶೀಲನಾಗುತ್ತೇನೆ ಎಂದು ಅವರು ಹೇಳಿದರು.

ಲಿಂಗೈಕ್ಯ ಹಿರಿಯ ಶ್ರೀಗಳು ಮಾಡಿರುವ ಸಮಾಜ ಸೇವೆ, ಅನ್ನದಾಸೋಹ, ವಿದ್ಯಾರ್ಥಿಗಳಿಗೆ ಶಿಕ್ಷಣ ಸೇವೆಯನ್ನು ಸೂರ್ಯ ಚಂದ್ರ ಇರುವವರೆಗೂ ಯಾರೂ ಮರೆಯಲಾಗುವುದಿಲ್ಲ ಎಂದರು.

ಈ ಉಪಚುನಾವಣೆಯಲ್ಲಿ ಶ್ರೀಗಳ ಆಶೀರ್ವಾದ ಮತ್ತು ಕ್ಷೇತ್ರದ ಮತದಾರರ ಆಶೀರ್ವಾದ ನನ್ನ ಮೇಲಿರುತ್ತದೆ ಎಂಬ ವಿಶ್ವಾಸ ತಮಗಿದೆ ಎಂದರು.

ಇದಕ್ಕೂ ಮುನ್ನ ಲಿಂಗೈಕ್ಯ ಹಿರಿಯ ಶ್ರೀಗಳ ಗದ್ದುಗೆ ದರ್ಶನ ಪಡೆದ ಮುನಿರತ್ನ ಅವರು ಮಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿಯವರ ಕೊಠಡಿಗೆ ತೆರಳಿ ಭಕ್ತಿ ಸಮರ್ಪಿಸಿ ಆಶೀರ್ವಾದ ಪಡೆದು ಸ್ವಲ್ಪ ಹೊತ್ತು ಶ್ರೀಗಳೊಂದಿಗೆ ಸಮಾಲೋಚನೆ ನಡೆಸಿದರು.

ಇದಾದ ನಂತರ ಶ್ರೀಮಠದ ಆವರಣದಲ್ಲಿರುವ ಲಿಂಗೈಕ್ಯ ಶ್ರೀಗಳ ಧ್ಯಾನ ಮಂದಿರಕ್ಕೆ ತೆರಳಿದ ಮುನಿರತ್ನ ಅವರು ಲಿಂಗೈಕ್ಯ ಶ್ರೀಗಳ ಮೂರ್ತಿಗೆ ನಮಸ್ಕರಿಸಿ ಕೆಲ ನಿಮಿಷಗಳ ಕಾಲ ಧ್ಯಾನ ಮಾಡಿ ಆಶೀರ್ವಾದ ಪಡೆದರು.

ಈ ಸಂದರ್ಭದಲ್ಲಿ ಮುಖಂಡರಾದ ಮರಿಸ್ವಾಮಿ, ಹರಳೂರು ಕುಮಾರ್‌, ಎಪಿಎಂಸಿ ಅಧ್ಯಕ್ಷ ಉಮೇಶ್‌ಗೌಡ, ಬೆಂಗಳೂರು ಬಿಬಿಎಂಪಿ ಕಾರ್ಪೋರೇಟರ್‌ ವೇಲು ನಾಯಕ್‌ ಮತ್ತಿತರರು ಉಪಸ್ಥಿತರಿದ್ದರು.

ನಾನು ಶ್ರೀಮಠಕ್ಕೆ ಹೊಸದಾಗೇನು ಬರುತ್ತಿಲ್ಲ. ನಾನು ಶ್ರೀಮಠದ ವಿದ್ಯಾರ್ಥಿಯಾದಾಗಿನಿಂದಲೂ ಸಿದ್ದಗಂಗಾ ಮಠದ ತತ್ವ ಸಿದ್ಧಾಂತಗಳನ್ನು ಅನುಸರಿಸುತ್ತಿದ್ದೇನೆ. ನಾನು ಚುನಾವಣೆಗೆ ಸ್ಪರ್ಧಿಸಿರುವ ಹಿನ್ನೆಲೆಯಲ್ಲಿ ಅವರ ಆಶೀರ್ವಾದ ನನಗೆ ಬಹುಮುಖ್ಯ. ಹಾಗಾಗಿ ಮಠಕ್ಕೆ ಬಂದು ಶ್ರೀಗಳ ಆಶೀರ್ವಾದ ಪಡೆದಿದ್ದೇನೆ.

ಮುನಿರತ್ನ, ಆರ್‌ಆರ್‌ ನಗರ ಬಿಜೆಪಿ ಅಭ್ಯರ್ಥಿ

Follow Us:
Download App:
  • android
  • ios