ಬೆಂಗಳೂರು(ಅ.16): ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಮುನಿರತ್ನ ವಿರುದ್ಧ ಪಕ್ಷದ ಸ್ಥಳೀಯ ಕಾರ್ಯಕರ್ತರಲ್ಲಿರುವ ಅಸಮಾಧಾನ ಹೋಗಲಾಡಿಸುವ ಪ್ರಯತ್ನ ಆರಂಭವಾಗಿದೆ.

ಹಿಂದೆ ಕಾಂಗ್ರೆಸ್‌ನಿಂದ ಶಾಸಕರಾಗಿದ್ದ ವೇಳೆ ಮುನಿರತ್ನ ಅವರು ಬಿಜೆಪಿ ಕಾರ್ಯಕರ್ತರ ವಿರುದ್ಧ ಹತ್ತಾರು ಪ್ರಕರಣಗಳನ್ನು ದಾಖಲಿಸಿದ್ದರು ಎಂಬುದು ಅವರ ವಿರುದ್ಧ ಕೇಳಿಬಂದಿರುವ ಪ್ರಮುಖ ಆರೋಪ. ಈ ಅಂಶವನ್ನೇ ಮುಂದಿಟ್ಟುಕೊಂಡು ಮುನಿರತ್ನ ಅವರಿಗೆ ಟಿಕೆಟ್‌ ನೀಡಬಾರದು ಎಂದು ಸ್ಥಳೀಯ ಕಾರ್ಯಕರ್ತರು ಪಕ್ಷದ ನಾಯಕರಿಗೆ ಮನವಿ ಮಾಡಿದ್ದರು. ಆದರೆ, ಹಿಂದೆ ನೀಡಿದ ವಾಗ್ದಾನದಂತೆ ಟಿಕೆಟ್‌ ನೀಡುವ ನಿರ್ಧಾರಕ್ಕೆ ಬಿಜೆಪಿ ವರಿಷ್ಠರು ಬಂದರು.

ಆದರೆ, ಈಗ ಚುನಾವಣಾ ಪ್ರಚಾರ ಆರಂಭವಾಗುತ್ತಿದ್ದಂತೆಯೇ ಪಕ್ಷದ ಕಾರ್ಯಕರ್ತರು ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಳ್ಳುವ ಅನುಮಾನ ಕಂಡು ಬರುತ್ತಿದೆ. ಮುನಿರತ್ನ ವಿರುದ್ಧ ಅವರ ಕೋಪ ಇನ್ನೂ ಶಮನಗೊಂಡಿಲ್ಲ. ಹೀಗಾಗಿ, ಮುನಿರತ್ನ ಅವರ ಬಗ್ಗೆ ಇರುವ ಅಭಿಪ್ರಾಯವನ್ನು ಬದಲಿಸಿ ಮನವೊಲಿಸಿಕೊಳ್ಳುವ ಉದ್ದೇಶದಿಂದ ಕಾರ್ಯಕರ್ತರ ವಿರುದ್ಧ ದಾಖಲಿಸಿರುವ ಪ್ರಕರಣಗಳನ್ನು ವಾಪಸ್‌ ಪಡೆಯುವ ಬಗ್ಗೆ ಗಂಭೀರ ಚಿಂತನೆ ಆರಂಭವಾಗಿದೆ.

RR ನಗರ ಬೈ ಎಲೆಕ್ಷನ್ ಟಿಕೆಟ್: ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟ, ರಾಜೀನಾಮೆ ಸಲ್ಲಿಕೆ

ಈ ಹಿನ್ನೆಲೆಯಲ್ಲಿ ಗುರುವಾರ ಮುನಿರತ್ನ ಅವರು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದರು. ಭೇಟಿಯ ನಂತರ ಮುನಿರತ್ನ ಅವರು ಸುದ್ದಿಗಾರರಿಗೆ ಯಾವುದೇ ಗುಟ್ಟು ಬಿಟ್ಟುಕೊಡಲಿಲ್ಲ. ಆದರೆ, ಬೊಮ್ಮಾಯಿ ಅವರು ಮಾತನಾಡಿ ಕಾರ್ಯಕರ್ತರ ಮೇಲಿನ ಪ್ರಕರಣಗಳನ್ನು ವಾಪಸ್‌ ಪಡೆಯುವ ಬಗ್ಗೆ ಸುಳಿವು ನೀಡಿದ್ದಾರೆ. 

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ನಮ್ಮದು ಶಿಸ್ತಿನ ಪಕ್ಷ. ಬಿಜೆಪಿ ಕಾರ್ಯಕರ್ತರ ಮೇಲೆ ಮುನಿರತ್ನ ಅವರು ಪ್ರಕರಣ ದಾಖಲಿಸಿರುವ ಆರೋಪ ಸೇರಿದಂತೆ ಎಲ್ಲ ವಿಷಯಗಳ ಮಾಹಿತಿ ಪಕ್ಷದ ನಾಯಕರ ಗಮನದಲ್ಲಿದೆ. ಅದೆಲ್ಲವನ್ನೂ ಸರಿ ಮಾಡುವ ಪ್ರಯತ್ನ ಮಾಡುತ್ತೇವೆ ಎಂದರು. ಹಾಗಾದರೆ ಕಾರ್ಯಕರ್ತರ ಮೇಲಿನ ಪ್ರಕರಣ ವಾಪಸ್‌ ಪಡೆಯುತ್ತೀರಾ ಎಂಬ ಪ್ರಶ್ನೆಗೆ, ನಾನು ಸೂಕ್ಷ್ಮವಾಗಿ ಹೇಳಬೇಕಾದದ್ದನ್ನು ಹೇಳಿದ್ದೇನೆ. ವಿವರಣೆ ನೀಡುವುದಿಲ್ಲ ಎಂದು ಮಾರ್ಮಿಕವಾಗಿ ಹೇಳಿದರು.