ಯಲಹಂಕ ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್‌ 3ರಲ್ಲಿ ನಡೆದ ಘಟನೆ| ಪಂಜಾಬ್‌ ಮೂಲದ ಗುರುಜಿತ್‌ ಸಿಂಗ್‌ ಗಾಯಗೊಂಡ ಪ್ರಯಾಣಿಕ| ಆರ್‌ಪಿಎಫ್‌ ಸಿಬ್ಬಂದಿಯ ಸಮಯ ಪ್ರಜ್ಞೆ ಹಾಗೂ ಸಾಹಸಮಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ರೈಲ್ವೆ ಅಧಿಕಾರಿಗಳು| 

ಬೆಂಗಳೂರು(ಏ.26): ಚಲಿಸುತ್ತಿದ್ದ ರೈಲಿನಿಂದ ಇಳಿಯುವಾಗ ಜಾರಿ ಬಿದ್ದು ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್‌ ಮತ್ತು ರೈಲಿನ ನಡುವೆ ಸಿಲುಕಿದ್ದ ಪ್ರಯಾಣಿಕನನ್ನು ಇಬ್ಬರು ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್‌) ಸಿಬ್ಬಂದಿ ರಕ್ಷಿಸಿರುವ ಘಟನೆ ಶನಿವಾರ ಯಲಹಂಕ ರೈಲು ನಿಲ್ದಾಣದಲ್ಲಿ ನಡೆದಿದೆ.

ಘಟನೆಯಲ್ಲಿ ಪಂಜಾಬ್‌ ಮೂಲದ ಪ್ರಯಾಣಿಕ ಗುರುಜಿತ್‌ ಸಿಂಗ್‌ (39) ಬಲಗಾಲು ನಜ್ಜುಗುಜ್ಜಾಗಿದೆ. ಸದ್ಯ ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ರೈಲು ಹಳಿಗೆ ಬಿದ್ದ ಮಗು ರಕ್ಷಿಸಿದ ರೈಲ್ವೇ ಸಿಬ್ಬಂದಿ: ಮೈ ಜುಮ್ಮೆನಿಸುವ ವಿಡಿಯೋ ವೈರಲ್!

ಛತ್ರಪತಿ ಶಿವಾಜಿ ಮಹಾರಾಜ್‌ ಟರ್ಮಿನಸ್‌-ಕೆಎಸ್‌ಆರ್‌ ಬೆಂಗಳೂರು ಎಕ್ಸ್‌ಪ್ರೆಸ್‌ ರೈಲು ಶನಿವಾರ ಬೆಳಗ್ಗೆ 6.33ಕ್ಕೆ ಯಲಹಂಕ ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್‌ ಮೂರರಲ್ಲಿ ಚಲಿಸುವಾಗ ರೈಲಿನ ಡಿ 1 ಕೋಚ್‌ನಲ್ಲಿ ಪ್ರಯಾಣಿಸುತ್ತಿದ್ದ ಗುರುಜಿತ್‌ ಸಿಂಗ್‌, ಏಕಾಏಕಿ ಚಲಿಸುವ ರೈಲಿನಿಂದ ಇಳಿಯಲು ಮುಂದಾಗಿದ್ದು, ಜಾರಿ ಬಿದ್ದಿದ್ದಾರೆ. ಈ ವೇಳೆ ಆತನ ಬಲಗಾಲು ಪ್ಲಾಟ್‌ಫಾರ್ಮ್‌ ಹಾಗೂ ರೈಲಿನ ನಡುವೆ ಸಿಲುಕಿದೆ. ಇದೇ ವೇಳೆ ಕರ್ತವ್ಯ ನಿರತ ಆರ್‌ಪಿಎಫ್‌ ಸಿಬ್ಬಂದಿ ಮಾಧವ್‌ ಸಿಂಗ್‌ ಮತ್ತು ಆಶಿಶ್‌ ಕುಮಾರ್‌ ಅವರು ತಕ್ಷಣ ಆತನ ನೆರವಿಗೆ ಧಾವಿಸಿ ಪ್ಲಾಟ್‌ಫಾರ್ಮ್‌ ಮೇಲಕ್ಕೆ ಎಳೆದು ಪ್ರಾಣ ರಕ್ಷಿಸಿದ್ದಾರೆ.
ಆರ್‌ಪಿಎಫ್‌ ಸಿಬ್ಬಂದಿಯ ಸಮಯ ಪ್ರಜ್ಞೆ ಹಾಗೂ ಸಾಹಸಮಯ ಕಾರ್ಯಕ್ಕೆ ರೈಲ್ವೆ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.