Asianet Suvarna News Asianet Suvarna News

ರೌಡಿ ಬೆತ್ತನಗೆರೆ ಪ್ರತಾಪ್‌ ಸಿಂಹ ಸಮ್ಮುಖ ಬಿಜೆಪಿ ಸೇರ್ಪಡೆ!

ಕುಖ್ಯಾತ ರೌಡಿ ಬೆತ್ತನಗೆರೆ ಶಂಕರ ಹೆಸರು ಬದಲಿಸಿಕೊಂಡು ಕಳೆದ ಮೇ ತಿಂಗಳು 8 ರಂದು ಬಿಜೆಪಿ ಸೇರಿರುವುದು ಇದೀಗ ಬೆಳಕಿಗೆ ಬಂದಿದೆ.

Rowdy Sheetet bettanagere Shankara Joins BJP snr
Author
First Published Dec 4, 2022, 6:55 AM IST

  ಮೈಸೂರು (ಡಿ. 04 ):  ಕುಖ್ಯಾತ ರೌಡಿ ಬೆತ್ತನಗೆರೆ ಶಂಕರ ಹೆಸರು ಬದಲಿಸಿಕೊಂಡು ಕಳೆದ ಮೇ ತಿಂಗಳು 8 ರಂದು ಬಿಜೆಪಿ ಸೇರಿರುವುದು ಇದೀಗ ಬೆಳಕಿಗೆ ಬಂದಿದೆ.

ಅಂದು ಮೈಸೂರಿನ (Mysuru)  ಬಿಜೆಪಿ (BJP)  ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ನವರು ಜಂಗಲ್‌ ಲಾಡ್ಜಸ್‌ ಮತ್ತು ರೆಸಾರ್ಟ್ ಮಾಜಿ ಅಧ್ಯಕ್ಷ ಎಂ. ಅಪ್ಪಣ್ಣ ಅವರ ನೇತೃತ್ವದಲ್ಲಿ ಪಕ್ಷಕ್ಕೆ ಸೇರ್ಪಡೆಯಾಗಿದ್ದರು.

ಎಚ್‌.ಡಿ. ಕೋಟೆ ತಾಲೂಕಿನ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರು ಮೈಸೂರು ಬಿಜೆಪಿ ಕಚೇರಿಯಲ್ಲಿ ಮೇ 8 ರಂದು ಬಿಜೆಪಿ ಮುಖಂಡ ಅಪ್ಪಣ್ಣ ಅವರ ನೇತೃತ್ವದಲ್ಲಿ ಹಲವರು ಬಿಜೆಪಿಗೆ ಸೇರ್ಪಡೆಯಾಗಿದ್ದರು. ಇದೇ ವೇಳೆ ರೌಡಿಶೀಟರ್‌ ಬೆತ್ತನಗೆರೆ ಶಂಕರ ಬಿಜೆಪಿ ಸೇರಿದ್ದು, ಆಗ ತನ್ನ ಹೆಸರು ಶಂಕರೇಗೌಡ ಎಂದು ಬಿಂಬಿಸಿಕೊಂಡಿದ್ದ ಎಂದು ತಿಳಿದು ಬಂದಿದೆ.

ಬಿಜೆಪಿಗೆ ಸೇರಿದವರನ್ನು ಸಂಸದ ಪ್ರತಾಪ್‌ ಸಿಂಹ ಅವರು ಪಕ್ಷದ ಬಾವುಟ ನೀಡಿ ಸ್ವಾಗತಿಸಿದರು. ಈ ಕಾರ್ಯಕ್ರಮದಲ್ಲಿ ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಕೋಟೆ ಎಂ. ಶಿವಣ್ಣ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ರಾಜ್ಯ ಉಪಾಧ್ಯಕ್ಷ ಎಂ. ರಾಜೇಂದ್ರ, ನಗರಾಧ್ಯಕ್ಷ ಟಿ.ಎಸ್‌. ಶ್ರೀವತ್ಸ, ಎಚ್‌.ಡಿ. ಕೋಟೆ ತಾಲೂಕು ಅಧ್ಯಕ್ಷ ಗುರುಸ್ವಾಮಿ ಮೊದಲಾದವರು ಭಾಗವಹಿಸಿದ್ದರು.

ನನಗೆ ಗೊತ್ತಿಲ್ಲ- ಪ್ರತಾಪ್‌ ಸಿಂಹ ಸ್ಪಷ್ಟನೆ

ಬೆತ್ತನಗೆರೆ ಶಂಕರ್‌ನ ಬಗ್ಗೆ ನನಗೆ ಗೊತ್ತಿಲ್ಲ. ಪಕ್ಷ ಸೇರ್ಪಡೆಗೆ ಸಾವಿರಾರು ಜನರು ಬರುತ್ತಾರೆ. ಅವರ ಕುಂಡಲಿ, ಜಾತಕ ತೆಗೆದುಕೊಂಡು ನಾನು ಪರೀಕ್ಷೆ ಮಾಡಲು ಸಾಧ್ಯವಿಲ್ಲ ಎಂದು ಸಂಸದ ಪ್ರತಾಪ್‌ ಸಿಂಹ ಹೇಳಿದರು.

ತಮ್ಮ ಸಮ್ಮುಖದಲ್ಲಿ ರೌಡಿಶೀಟರ್‌ ಬೆತ್ತನಗೆರೆ ಶಂಕರ ಕಳೆದ ಮೇ ತಿಂಗಳಲ್ಲಿ ಮೈಸೂರು ಬಿಜೆಪಿ ಕಚೇರಿಯಲ್ಲಿ ಸೇರ್ಪಡೆಯಾಗಿರುವ ಸಂಬಂಧ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಸೂರು ಬಿಜೆಪಿ ಕಚೇರಿಯಲ್ಲಿ ಹೋಗಿದ್ದಾಗ ಶಾಲು ಹಾಕಿದೆ. ಅಪ್ಪಣ್ಣ ಅವರು ಎಚ್‌.ಡಿ. ಕೋಟೆ ಭಾಗದಲ್ಲಿ ಕೆಲವರನ್ನ ಪಕ್ಷಕ್ಕೆ ಸೇರಿಸಿಕೊಂಡರು. ಆ ಕಾರ್ಯಕ್ರಮದಲ್ಲಿ ಶಾಲು ಹಾಕಿ ಸ್ವಾಗತ ಮಾಡಿದೆ ಎಂದರು.

ನಾನು ಕೆಲಸಕ್ಕೆ ತೆಗೆದುಕೊಳ್ಳುವ ಕೆಲಸ ಮಾಡುತ್ತಿಲ್ಲ. ರೌಡಿಗಳನ್ನ ರಾಜಕಾರಣ ಮಾಡುವ ಕಾಲ ಹೋಗಿದೆ. ಅನಗತ್ಯವಾಗಿ ಬಿಂಬಿಸುತ್ತಿದ್ದಾರೆ. ರೌಡಿಗಳನ್ನ ಇಟ್ಟು ಕೊಂಡು ರಾಜಕಾರಣ ಮಾಡಿದ ಕಾಲ ಹೋಯ್ತು. ಆಯಿಲ್‌ ಕುಮಾರ್‌, ಕೊತ್ವಾಲ, ಜಯರಾಜ್‌ನ ಇಟ್ಟುಕೊಂಡು ರಾಜಕಾರಣ ಮಾಡಿದವರು ಯಾರು ಎಂದು ಅವರು ಪ್ರಶ್ನಿಸಿದರು.

ಕಾಶ್ಮೀರದಲ್ಲಿ ಪ್ರತ್ಯೇಕದವಾದವರ ಬಾಯಿ ಮುಚ್ಚಿಸಿದ್ದೇವೆ. ಎಚ್‌.ಡಿ. ಕೋಟೆ ನಮ್ಮ ಕ್ಷೇತ್ರಕ್ಕೆ ಬರಲ್ಲ. ಪಾರ್ಟಿ ಹೇಳಿದ ಮೇಲೆ ಪಕ್ಷಕ್ಕೆ ಶಾಲು ಹಾಕಿ ಕರೆದುಕೊಂಡಿದ್ದೇನೆ. ನನಗೆ ರೌಡಿಗಳ ಅವಶ್ಯಕತೆ ಇಲ್ಲ. ನನ್ನದು ಅಭಿವೃದ್ಧಿ ರಾಜಕಾರಣ. ನನ್ನತ್ರ ಎಲ್ಲರನ್ನೂ ಎದುರಿಸುವ ಶಕ್ತಿ ಇದೆ ಎಂದು ಅವರು ತಿಳಿಸಿದರು.

ನಮಗೆ ರೌಡಿಗಳ ಅವಶ್ಯಕತೆ ಇಲ್ಲ, ಕಾಂಗ್ರೆಸ್‌ನವರಿಗೆ ಇರಬಹುದು. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ನಾನು ಗೆದ್ದು ಬಂದಿದ್ದೇನೆ. ಮೋದಿ ಕಾಲದಲ್ಲಿ ಭಯೋತ್ಪಾದಕರನ್ನೇ ಬಿಟ್ಟಿಲ್ಲ, ನಮ್ಮನ್ನ ಬಿಡುತ್ತಾರಾ ಎಂದು ರೌಡಿಗಳ ಭಯಗೊಂಡಿದ್ದಾರೆ. ರೌಡಿಗಳೇ ಮನಪರಿವರ್ತನೆಯಾಗಿ ಸಮಾಜಸೇವೆ ಬರುತ್ತಿದ್ದಾರೆ. ಬಿಜೆಪಿ ಗಟ್ಟಿಯಾದ ನಾಯಕತ್ವ ಕೊಟ್ಟಿದೆ. ಎಷ್ಟೋ ಜನ ಸಮಾಜ ಕಟ್ಟುವಲ್ಲಿ ಕೈ ಜೋಡಿಸಿದ್ದಾರೆ. ಇದೇ ದೊಡ್ಡ ವಿಚಾರ ಮಾಡುವುದು ಬೇಡ ಎಂದು ಅವರು ಹೇಳಿದರು.

ಗಡಿಪಾರಿಗೆ ಪ್ರಕ್ರಿಯೆ

ಬೆತ್ತನಗೆರೆ ಶಂಕರ ಸರಗೂರು ಬಳಿ ಜಮೀನು ಖರೀದಿಸಿ ವಾಸವಿದ್ದು, ಆತನನ್ನು ಗಡಿಪಾರು ಮಾಡುವಂತೆ ಪೊಲೀಸ್‌ ಇಲಾಖೆಯು ಜಿಲ್ಲಾಧಿಕಾರಿಗೆ ಪ್ರಸ್ತಾವನೆ ಸಲ್ಲಿಸಲು ಪ್ರಕ್ರಿಯೆ ಆರಂಭಿಸಿದೆ ಎಂದು ಗೊತ್ತಾಗಿದೆ.

Follow Us:
Download App:
  • android
  • ios