ಬೆಂಗಳೂರು :  ತನ್ನ ಪ್ರೀತಿ ಪ್ರಸ್ತಾಪವನ್ನು ನಿರಾಕರಿಸಿದ್ದರಿಂದ ಕೋಪಗೊಂಡು ಖಾಸಗಿ ವೈಮಾನಿಕ ಸಂಸ್ಥೆಯ ಪರಿಚಿತ ಗಗನ ಸಖಿಯೊಬ್ಬರ ಕಿವಿ ಕೊಯ್ದು ರೌಡಿಶೀಟರ್‌ ಪರಾರಿಯಾಗಿರುವ ಘಟನೆ ಬೆಂಗಳೂರಿನ ಹೆಬ್ಬಾಳ ಫ್ಲೈಓವರ್‌ನಲ್ಲಿ ನಡೆದಿದೆ. ಜಾಲಹಳ್ಳಿ ನಿವಾಸಿ 27 ವರ್ಷದ ಯುವತಿ ಹಲ್ಲೆಗೊಳಗಾಗಿದ್ದು, ಈ ಕೃತ್ಯ ಎಸಗಿ ಪರಾರಿಯಾಗಿರುವ ಆರೋಪಿ ಅಜಯ್‌ ಕುಮಾರ್‌ ಅಲಿಯಾಸ್‌ ಜಾಕಿ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ನಾಲ್ಕು ದಿನಗಳ ಹಿಂದೆ ಸಂತ್ರಸ್ತೆ ಕೆಲಸ ಮುಗಿಸಿಕೊಂಡು ಮನೆಗೆ ಮರಳುವಾಗ ಮಾರ್ಗ ಮಧ್ಯೆ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಕ್ಕನ ಸ್ನೇಹ, ತಂಗಿ ಪ್ರೀತಿ:  ಹಲವು ವರ್ಷಗಳಿಂದ ಸಂತ್ರಸ್ತೆ ಕುಟುಂಬಕ್ಕೆ ಅಜಯ್‌ ಪರಿಚಿತನಾಗಿದ್ದು, ಜಾಲಹಳ್ಳಿ ಠಾಣೆಯಲ್ಲಿ ಆತ ರೌಡಿಶೀಟರ್‌ ಆಗಿದ್ದಾನೆ. 2012ರಲ್ಲಿ ಅಜಯ್‌ನ ನೆರವು ಪಡೆದು ಗಗನ ಸಖಿಯ ಅಕ್ಕ, ತನ್ನ ಗೆಳೆಯನ್ನು ಕೊಲೆ ಮಾಡಿದ್ದಳು. ಈ ಕೊಲೆ ಪ್ರಕರಣದಲ್ಲಿ ಅಜಯ್‌ ಮತ್ತು ಆಕೆ ಜೈಲು ಸೇರಿದ್ದರು. ಬಳಿಕ ಜಾಮೀನು ಪಡೆದು ಹೊರ ಬಂದ ನಂತರವು ಅವರ ಸ್ನೇಹ ಮುಂದುವರಿದಿತ್ತು. ಇತ್ತೀಚೆಗೆ ಸ್ನೇಹಿತೆಯ ತಂಗಿ ಮೇಲೆ ಮೋಹಿತನಾಗಿದ್ದ ಆರೋಪಿ, ಅವಳ ಬಳಿ ಪ್ರೇಮ ನಿವೇದನೆ ಮಾಡಿಕೊಂಡಿದ್ದ. ಆದರೆ ಆಕೆ ನಿರಾಕರಿಸಿದ್ದಳು ಎಂದು ಪೊಲೀಸರು ಹೇಳಿದ್ದಾರೆ.

ಇದರಿಂದ ಕೋಪಗೊಂಡ ಆರೋಪಿ, ಸಂತ್ರಸ್ತೆಗೆ ಕಿರುಕುಳ ಕೊಡಲಾರಂಭಿಸಿದ್ದ. ಖಾಸಗಿ ವೈಮಾನಿಕ ಸಂಸ್ಥೆಯಲ್ಲಿ ಗಗನ ಸಖಿಯಾಗಿ ಕೆಲಸ ಮಾಡುತ್ತಿರುವ ಆಕೆ, ಎಂದಿನಂತೆ ಮೇ 12 ರಂದು ಸಂಜೆ 4.30ರಲ್ಲಿ ಕ್ಯಾಬ್‌ನಲ್ಲಿ ಮನೆಗೆ ಮರಳುತ್ತಿದ್ದಳು. ಆ ವೇಳೆ ಹೆಬ್ಬಾಳ ಮೇಲ್ಸೇತುವೆ ಬಳಿ ಟ್ರಾಫಿಕ್‌ ಸಿಗ್ನಲ್‌ನಲ್ಲಿ ಕ್ಯಾಬ್‌ ನಿಂತಾಗ ಅಜಯ್‌, ಬಲವಂತವಾಗಿ ಕ್ಯಾಬ್‌ ನೊಳಗೆ ಪ್ರವೇಶಿಸಿ ಗಗನ ಸಖಿ ಮೇಲೆ ಹಲ್ಲೆ ನಡೆಸಿದ್ದಾನೆ. ಈ ಹಂತದಲ್ಲಿ ಆಕೆಯ ಬಲ ಕಿವಿ ಹಿಂಭಾಗಕ್ಕೆ ಚಾಕುವಿನಿಂದ ಇರಿದಿದ್ದಾನೆ. ಇದರಿಂದ ಗಗನಸಖಿಯ ಕಿವಿ ಕಿತ್ತುಹೋಗಿದೆ. ಬಳಿಕ ಆರೋಪಿ ತಪ್ಪಿಸಿಕೊಂಡಿದ್ದಾನೆ ಎಂದು ದೂರಿನಲ್ಲಿ ವಿವರಿಸಲಾಗಿದೆ.