ಬೆಂಗಳೂರು [ಜು.17]:  ಹಲವು ದಿನಗಳಿಂದ ಸಿಸಿಬಿ ಕೈಗೆ ಸಿಗದೆ ಕಣ್ಣಾಮುಚ್ಚಾಲೆ ಆಟವಾಡುತ್ತಿದ್ದ ಕುಖ್ಯಾತ ರೌಡಿ ಕುಣಿಗಲ್‌ ಗಿರಿ, ಸೋಮವಾರ ರಾತ್ರಿ ಡ್ಯಾನ್ಸ್‌ ಬಾರ್‌ನಲ್ಲಿ ಸಹಚರರ ಜತೆ ಪಾರ್ಟಿ ಮಾಡುವಾಗ ಕೋರಮಂಗಲ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಕುಣಿಗಲ್‌ ತಾಲೂಕಿನ ಗಿರಿ, ಆತನ ಸಹಚರರಾದ ದೊಮ್ಮಲೂರಿನ ಗಂಗಾಧರ್‌, ಹೇಮಂತ್‌, ಮಂಗಮ್ಮನಪಾಳ್ಯದ ಜಾನಕಿರಾಮ್‌ ಹಾಗೂ ಭರತ್‌ ಬಂಧಿತರಾಗಿದ್ದು, ಆರೋಪಿಗಳಿಂದ ಮಾರಕಾಸ್ತ್ರಗಳು ಹಾಗೂ ಕಾರು ಜಪ್ತಿ ಮಾಡಲಾಗಿದೆ. ಕೋರಮಂಗಲ ಬಳಿ ದರೋಡೆಗೆ ಕುಣಿಗಲ್‌ ಗಿರಿ ಸಿದ್ಧತೆ ನಡೆಸಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಇನ್ಸ್‌ಪೆಕ್ಟರ್‌ ಮಂಜುನಾಥ್‌ ನೇತೃತ್ವದ ತಂಡವು ಗಿರಿ ಗ್ಯಾಂಗ್‌ನನ್ನು ಬಂಧಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಹುಟ್ಟೂರಿನಲ್ಲಿ ಸಮಾಜ ಸೇವಕ!:

ಹಲವು ವರ್ಷಗಳಿಂದ ನಗರದಲ್ಲಿ ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿರುವ ಗಿರಿ, ತನ್ನೂರು ಕುಣಿಗಲ್‌ ತಾಲೂಕಿನಲ್ಲಿ ಸಮಾಜಕ ಸೇವಕನಾಗಿ ಬಿಂಬಿತವಾಗಿದ್ದಾನೆ. 2013-14ನೇ ಸಾಲಿನ ಅವಧಿಯಲ್ಲಿ ಸರಣಿ ದರೋಡೆ ಕೃತ್ಯಗಳ ಮೂಲಕ ನಗರದಲ್ಲಿ ಗಿರಿ ಗ್ಯಾಂಗ್‌ ಆತಂಕ ಸೃಷ್ಟಿಸಿತ್ತು. ಈ ಅಪರಾಧ ಹಿನ್ನೆಲೆಯಲ್ಲಿ ಆತನ ಮೇಲೆ ವಿವಿಧ ಠಾಣೆಗಳಲ್ಲಿ 30ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ. ಮೊದಲಿನಿಂದಲೂ ಪಶ್ಚಿಮ ಮತ್ತು ಉತ್ತರ ಭಾಗದ ಕಡೆ ರೌಡಿ ಚಟುವಟಿಕೆಗಳಲ್ಲಿ ನಿರತನಾಗಿರುವ ಗಿರಿ, ಇತ್ತೀಚೆಗೆ ಲೇಡಿಸ್‌ ಬಾರ್‌ಗಳಲ್ಲಿ ಪಾರ್ಟಿ ನಡೆಸುವ ಖಯಾಲಿ ಇದೆ.

ಕೆಲ ದಿನಗಳ ಹಿಂದೆ ರೆಸಿಡೆನ್ಸಿ ರಸ್ತೆಯಲ್ಲಿರುವ ಟೈಮ್ಸ್‌ ಬಾರ್‌ನಲ್ಲಿ ತನ್ನ ಸಹಚರರ ಜೊತೆ ಸೇರಿ ಗಿರಿ ಹುಟ್ಟುಹಬ್ಬದ ಪಾರ್ಟಿ ಮಾಡಿಕೊಳ್ಳುತ್ತಿದ್ದಾಗ ಸಿಸಿಬಿ ದಾಳಿ ನಡೆಸಿತ್ತು. ಆ ವೇಳೆ ಸಿನಿಮೀಯ ಶೈಲಿಯಲ್ಲಿ ಕಾಂಪೌಂಡ್‌ ಹಾರಿ ತಪ್ಪಿಸಿಕೊಂಡಿದ್ದ ರವಿ ಪತ್ತೆಗೆ ಸಿಸಿಬಿ ಬೆನ್ನಹತ್ತಿತ್ತು. ಆದರೆ ಇದುವರೆಗೆ ಕೈಗೆ ಸಿಗದೆ ಓಡಾಡುತ್ತಿದ್ದ ಆತ, ಕೋರಮಂಗಲ ಸಮೀಪ ಸೋಮವಾರ ರಾತ್ರಿ ದರೋಡೆಗೆ ಹೊಂಚು ಹಾಕಿದ್ದಾಗ ಸಿಕ್ಕಿಬಿದ್ದಿದ್ದಾನೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.