ಬೆಂಗಳೂರು(ಫೆ.14): ಭೂ ವಿವಾದ ಹಿನ್ನಲೆ ಕಿಡಿಗೇಡಿಗಳು ಮಾರಕಾಸ್ತ್ರಗಳೊಂದಿಗೆ ಆಗಮಿಸಿ ಶೆಡ್‌ಗಳಲ್ಲಿ ವಾಸಿಸುತ್ತಿದ್ದವರ ಮೇಲೆ ಹಲ್ಲೆ ಮಾಡಿ ಏಕಾಏಕಿ ಶೆಡ್‌ಗಳನ್ನು ನೆಲ ಸಮ ಮಾಡಿರುವ ಘಟನೆ ಕೆ.ಆರ್‌.ಪುರಂ ಮಾರತ್ತಹಳ್ಳಿಯ ಪೊಲೀಸ್‌ ಠಾಣೆ ವ್ಯಾಪ್ತಿಯ ಮುನೇಕೊಳ್ಳಲ ಗ್ರಾಮ ಸಮೀಪ ಜರುಗಿದೆ.

ಮುನೇಕೊಳ್ಳಲ ಗ್ರಾಮದ ಹೊರಭಾಗದಲ್ಲಿ ಜಯಮ್ಮ ಎಂಬುವವರ ಪುತ್ರ ನವೀನ ರೆಡ್ಡಿ ಅವರಿಗೆ ಪಿತ್ರಾರ್ಜಿತ ಜಮೀನಿದೆ. ಇಲ್ಲಿ ಶೆಡ್‌ಗಳನ್ನು ನಿರ್ಮಿಸಿ ಪಶ್ಚಿಮ ಬಂಗಾಳದ ಜನರಿಗೆ 13 ವರ್ಷಗಳಿಂದ ಬಾಡಿಗೆಗೆ ನೀಡಿದ್ದರು. ಆ ಸ್ಥಳದಲ್ಲಿ 20ಕ್ಕೂ ಹೆಚ್ಚು ಶೆಡ್‌ಗಳಲ್ಲಿ ನೂರಾರು ಜನರು ಚಿಂದಿ ಆಯುವ ಕೆಲಸ ಮಾಡಿಕೊಂಡು ವಾಸವಾಗಿದ್ದರು. ಗುರುವಾರ ಬೆಳಗ್ಗೆ 50ಕ್ಕೂ ಹೆಚ್ಚು ಗೂಂಡಗಳು ಮೂರು ಜೆಸಿಬಿ ಹಾಗೂ ದ್ವಿಚಕ್ರ ವಾಹನಗಳಲ್ಲಿ ಬಂದು ಶೆಡ್‌ಗಳನ್ನು ಜಮೀನು ಮಾಲಿಕರು ಹಾಗೂ ಸ್ಥಳೀಯ ಪೊಲೀಸರಿಗೂ ತಿಳಿಸದೆ ತೆರವು ಗೊಳಿಸಿದ್ದಾರೆ.

ಆರ್.ಅಶೋಕ್ ಪುತ್ರನ ಕಾರು ಅಪಘಾತ ಪ್ರಕರಣ; ಪೊಲೀಸರು ಹೇಳಿದ್ರು ಅಸಲಿ ಕಾರಣ!

ಈ ಜಮೀನು ನಮ್ಮದು ಎಂದು ರೌಡಿಗಳು ಕೂಗಾಡಿದ್ದಾರೆ. ಅಲ್ಲದೆ ಶೆಡ್‌ಗಳನ್ನು ತೆರವುಗೊಳಿಸುವ ವೇಳೆ ಕೀಡಿಗೇಡಿಗಳು ಮಹಿಳೆಯರು, ಪುಟ್ಟಮಕ್ಕಳ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಘಟನೆಯಲ್ಲಿ 6 ತಿಂಗಳ ಕಂದಮ್ಮನ ಮೇಲೂ ಕ್ರೌರ‍್ಯ ಮೆರೆದಿದ್ದಾರೆ.

ಶೆಡ್‌ಗಳ ತೆರವಿನಿಂದಾಗಿ ಮಗುವಿಗೆ ಹಾಲುಣಿಸಲು ಸಾಧ್ಯವಾಗದೆ ಪರದಾಡುವಂತಾಗಿದೆ ಎಂದು ಮಗುವಿನ ತಾಯಿ ಕಾಜಲ್‌ ನೋವು ತೋಡಿಕೊಂಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಮಾರತ್ತಹಳ್ಳಿ ಪೊಲೀಸರು ಶೆಡ್‌ಗಳನ್ನು ತೆರವುಗೊಳಿಸುತ್ತಿದ್ದ ಮೂರು ಜೆಸಿಬಿ, ಸ್ಥಳದಲ್ಲಿದ್ದ ನಾಲ್ಕು ದ್ವಿಚಕ್ರ ವಾಹನ, 12 ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.