ಬೊಮ್ಮನಹಳ್ಳಿ  [ಜೂ.30]:  ಇಂದಿರಾ ಕ್ಯಾಂಟೀನ್‌ಗಳಲ್ಲಿ ಕೊಳತೆ ತರಕಾರಿ, ತೆಂಗಿನ ಕಾಯಿ, ಹುಳುಬಿದ್ದ ಧಾನ್ಯಗಳನ್ನು ಬಳಸಿ ಅಡುಗೆ ತಯಾರಿಸುತ್ತಿರುವುದು ಕಂಡುಬರುತ್ತಿದ್ದು, ಕೂಡಲೇ ಇಂದಿರಾ ಕ್ಯಾಂಟೀನ್‌ಗಳಿಗೆ ಪೂರೈಸುವ ಆಹಾರ ತಯಾರಿಸುತ್ತಿರುವ ಕಂಪನಿಗಳ ಟೆಂಡರ್‌ ರದ್ದು ಪಡಿಸದಿದ್ದರೆ ಪ್ರತಿಭಟನೆ ನಡೆಸುವುದಾಗಿ ಬಿಜೆಪಿ ಎಚ್ಚರಿಸಿದೆ.

ಬೊಮ್ಮನಹಳ್ಳಿ ಕ್ಷೇತ್ರ ವ್ಯಾಪ್ತಿಯ ಇಂದಿರಾ ಕ್ಯಾಂಟೀನ್‌ ಆಹಾರ ತಯಾರಿಕಾ ಘಟಕದ ಮೇಲೆ ಸ್ಥಳೀಯ ಪಾಲಿಕೆ ಸದಸ್ಯ ಮತ್ತು ಪಾಲಿಕೆ ಅಧಿಕಾರಿಗಳು ದಾಳಿ ನಡೆಸಿದ ವೇಳೆ ಅಡುಗೆಗೆ ಕೊಳೆತ ತರಕಾರಿ, ತೆಂಗಿನ ಕಾಯಿ ಮತ್ತು ಹುಳು ಬಿದ್ದಿರುವ ಅಕ್ಕಿ, ಬೇಳೆ ಮತ್ತಿತರ ಧಾನ್ಯಗಳನ್ನು ಬಳಸುತ್ತಿರುವುದು ಕಂಡುಬಂದಿದೆ. ಹಾಗಾಗಿ ಕೂಡಲೇ ಇಂತಹ ಆಹಾರ ಪೂರೈಸುತ್ತಿರುವ ಕಂಪನಿಗಳ ಟೆಂಡರ್‌ ರದ್ದುಮಾಡಬೇಕು ಎಂದು ಬಿಬಿಎಂಪಿ ಪ್ರತಿ ಪಕ್ಷದ ನಾಯಕ ಪದ್ಮನಾಭ ರೆಡ್ಡಿ ಆಗ್ರಹಿಸಿದರು.

ಬೆಂಗಳೂರಿನ ಸುಮಾರು 140 ಕ್ಕೂ ಹೆಚ್ಚು ಇಂದಿರಾ ಕ್ಯಾಂಟೀನ್‌ಗಳಿದ್ದು ಬಿಬಿಎಂಪಿ ಪೌರಕಾರ್ಮಿಕರು ಹಾಗೂ ಬೆಂಗಳೂರಿನ ಸಾರ್ವಜನಿಕರು ನಿತ್ಯ ಇವುಗಳಲ್ಲಿ ಊಟ ಮಾಡುತ್ತಿದ್ದಾರೆ. ಇಂತಹ ಆಹಾರ ಸೇವಿಸಿ ಅವರಿಗೆ ಆರೋಗ್ಯದಲ್ಲಿ ಏನಾದರೂ ತೊಂದರೆ ಆದರೆ ಯಾರು ಹೊಣೆ ಹೊರುತ್ತಾರೆ. ಇಂದಿರಾ ಕ್ಯಾಂಟೀನ್‌ ಊಟ ಕಳಪೆಯಿಂದ ಕೂಡಿದೆ ಎಂದು ಶುಕ್ರವಾರ ಕೌನ್ಸಿಲ್‌ ಸಭೆಯಲ್ಲಿ ಕಾಂಗ್ರೆಸ್‌ ಶಾಸಕ ಮುನಿರತ್ನ ಅವರೇ ಆರೋಪ ಮಾಡಿದ್ದರು. ಇದರ ಬೆನ್ನಲ್ಲೇ ಅಸಲಿಯತ್ತು ಬಯಲಾಗಿದೆ. ಹಾಗಾಗಿ ಸರ್ಕಾರ ಕೂಡಲೇ ಇಂದಿರಾ ಕ್ಯಾಂಟೀನ್‌ಗಳಿಗೆ ಊಟ ಸರಬರಾಜು ಮಾಡಲು ಈಗ ನೀಡಿರುವ ಟೆಂಡರ್‌ ರದ್ದು ಮಾಡಿ ಹೊಸ ಟೆಂಡರ್‌ ಕರೆಯಬೇಕು, ಇಲ್ಲದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಹೇಳಿದ್ದಾರೆ.

ವಾಪಾಸ್‌ ಕಳುಹಿಸಲು ಇಟ್ಟಿದ್ದ ತರಕಾರಿ: ಆಯುಕ್ತೆ

ಇಂದಿರಾ ಕ್ಯಾಂಟೀನ್‌ಗೆ ದಿಢೀರ್‌ ಭೇಟಿ ಹಾಗೂ ಆರೋಪಿಗಳ ಬಗ್ಗೆ ಪ್ರತಿಕ್ರಿಯಿಸಿದ ಬೊಮ್ಮನಹಳ್ಳಿ ಜಂಟಿ ಆಯುಕ್ತೆ ಡಾ.ಸೌಜನ್ಯ, ಅನುಪಯುಕ್ತ ತರಕಾರಿಗಳು ಹಾಗೂ ಧಾನ್ಯಗಳನ್ನು ವಾಪಸ್‌ ಕಳುಹಿಸಲು ಇಟ್ಟಿರುವುದಾಗಿ ಅಲ್ಲಿನ ವ್ಯವಸ್ಥಾಪಕರು ತಿಳಿಸಿದ್ದಾರೆ. ಈಗಾಗಲೇ ಮುಖ್ಯ ಆರೋಗ್ಯಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಒಂದು ವೇಳೆ ಅನುಪಯುಕ್ತ ವಸ್ತುಗಳ ಬಳಕೆ ಕಂಡುಬಂದಲ್ಲಿ ಸಂಬಂಧಪಟ್ಟಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.