ಬೆಂಗಳೂರು(ಡಿ. 02): ಮಾಜಿ ಸಚಿವ ಆರ್‌.ರೋಷನ್‌ ಬೇಗ್‌ ಅವರನ್ನು ಒಂದು ದಿನ ಸಿಬಿಐ ಅಧಿಕಾರಿಗಳ ವಶಕ್ಕೆ ನೀಡಿ ಸಿಬಿಐನ ವಿಶೇಷ ನ್ಯಾಯಾಲಯ ಆದೇಶಿಸಿದೆ. ರೋಷನ್‌ ಬೇಗ್‌ ಸೋಮವಾರ ಆಸ್ಪತ್ರೆಯಿಂದ ಬಿಡುಗಡೆಯಾಗಿ ಪರಪ್ಪನ ಅಗ್ರಹಾರಕ್ಕೆ ಮರಳಿದ ಬೆನ್ನಲ್ಲೇ, ಮಂಗಳವಾರ ಸಿಬಿಐ ಅಧಿಕಾರಿಗಳು ಅವರನ್ನು ವಶಕ್ಕೆ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.

ಮನವಿ ಪುರಸ್ಕರಿಸಿರುವ ನ್ಯಾಯಾಲಯ, ಬೇಗ್‌ರನ್ನು ಡಿ.2ರಂದು ಸಂಜೆ 5 ಗಂಟೆವರೆಗೆ ಸಿಬಿಐ ವಶಕ್ಕೆ ನೀಡಿ ಆದೇಶಿಸಿದೆ. ಜೊತೆಗೆ, ಬೇಗ್‌ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆಯನ್ನು ಡಿ.4ಕ್ಕೆ ಮುಂದೂಡಿದೆ. ರೋಷನ್‌ ಬೇಗ್‌ ಅವರ ಬಂಧನದ ಬಳಿಕ ಆರೋಗ್ಯದಲ್ಲಿ ಸಮಸ್ಯೆ ಉಂಟಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಹೀಗಾಗಿ 3 ದಿನ ಸಿಬಿಐ ವಶಕ್ಕೆ ನೀಡಿದರೂ ವಿಚಾರಣೆ ನಡೆಸಲು ಸಾಧ್ಯವಾಗಿಲ್ಲ. ಹೆಚ್ಚಿನ ವಿಚಾರಣೆ ನಡೆಸುವ ಅಗತ್ಯವಿದ್ದು, ಮತ್ತೆ 3 ದಿನಗಳ ಕಾಲ ಬೇಗ್‌ರನ್ನು ವಶಕ್ಕೆ ನೀಡಬೇಕು ಎಂದು ಸಿಬಿಐ ಪರ ವಕೀಲರು ನ್ಯಾಯಾಲಯಕ್ಕೆ ಮನವಿ ಮಾಡಿದರು.

ಐಎಂಎ ಬಹುಕೋಟಿ ವಂಚನೆ; ರೋಷನ್‌ ಬೇಗ್‌ ಎಲ್ಲ ಪ್ರಶ್ನೆಗಳಿಗೆ ಉತ್ತರ ಕೊಡಲೇಬೇಕು!

ಇದಕ್ಕೆ ವಿರೋಧ ವ್ಯಕ್ತಪಡಿಸಿದ ಬೇಗ್‌ಪರ ವಕೀಲರು, ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ಬೇಗ್‌ ಈಗಷ್ಟೇ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸಿಬಿಐ ವಿಚಾರಣೆಯಿಂದ ಅವರ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿವೆ ಎಂದರು. ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವು ಬೇಗ್‌ರನ್ನು 1 ದಿನ ವಶಕ್ಕೆ ನೀಡಿ ಬುಧವಾರ ಸಂಜೆ ಮತ್ತೆ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಸಿಬಿಐ ಅಧಿಕಾರಿಗಳಿಗೆ ಸೂಚಿಸಿದೆ.