ಜಿಲ್ಲೆಯಲ್ಲಿ ಜಲ್ಲಿ ಕ್ರಷರ್‌ಗಳ ಹಾವಳಿಯಿಂದಾಗಿ ಪ್ರಮುಖ ರಸ್ತೆಗಳೆಲ್ಲವೂ ಹಾಳಾಗುತ್ತಿವೆ. ಕ್ರಷರ್‌ಗಳಿಂದಾಗಿ ಡಾಂಬಾರು ಕಿತ್ತುಬಂದು ಕಾಮಗಾರಿಯಾದ ಕೆಲವೇ ದಿನಗಳಲ್ಲಿ ರಸ್ತೆಗಳು ಕೆಟ್ಟು ಹೋಗುತ್ತಿವೆ.
ಕೋಲಾರ(ಜು.28): ಜಿಲ್ಲೆಯಲ್ಲಿ ಜಲ್ಲಿ ಕ್ರಷರ್‌ಗಳ ಹಾವಳಿ ಹೆಚ್ಚಿದೆ. ಜಲ್ಲಿ ಕ್ರಷರ್‌ಗಳಿಂದಾಗಿ ಜಿಲ್ಲೆಯಲ್ಲಿನ ಪ್ರಮುಖ ರಸ್ತೆಗಳು ಹಾಳಾಗುತ್ತಿವೆ, ಕ್ರಷರ್‌ಗಳ ಅಕ್ಕಪಕ್ಕದಲ್ಲಿ ವಾಸಮಾಡುವ ಜನ ಜಲ್ಲಿ ಧೂಳನ್ನು ಸೇವಿಸಿ ಅನೇಕ ಕಾಯಿಲೆಗಳಿಗೆ ತುತ್ತಾಗುವಂತಾಗಿದೆ.
ಜಿಲ್ಲೆಯ ಮಾಲೂರು ತಾಲೂಕು ಟೇಕಲ್, ಲಕ್ಕೂರು, ಕೋಲಾರದ ನರಸಾಪುರ, ವೇಮಗಲ್ ಮುಳಬಾಗಿಲಿನ ಆವಣಿ ಮುಂತಾದ ಕಡೆಗೆ ಜಲ್ಲಿ ಕ್ರಷರ್‌ಗಳು ನಾಯಿಕೊಡೆಗಳಂತೆ ತಲೆ ಎತ್ತಿ ನಿಂತಿವೆ. ಜಲ್ಲಿ ಕ್ರಷರ್‌ಗಳಿರುವ ಸ್ಥಳಗಳಲ್ಲಿ ಜನರ ಕಣ್ಣುಮುಂದೆಯೇ ಹಾಡಹಗಲೆ ನೂರಾರು ಟಿಪ್ಪರ್ ಮತ್ತು ಲಾರಿಗಳು ಓಡಾಡುತ್ತವೆ. ಜಲ್ಲಿಯನ್ನು ಟಿಪ್ಪರ್ ಮತ್ತು ಲಾರಿಗಳಲ್ಲಿ ನಿಗದಿಗಿಂತ ಹೆಚ್ಚು ತುಂಬಿಕೊಂಡು ಓಡಾಡುವುದರಿಂದ ಗ್ರಾಮೀಣ ಭಾಗದ ರಸ್ತೆಗಳು ಹಾಳಾಗಿವೆ.
ಪ್ರಕೃತಿ ಸಂಪತ್ತು ನಾಶ:
ಜಿಲ್ಲೆಯಲ್ಲಿ ಕಳೆದ ಕೆಲವು ವರ್ಷಗಳಿಂದ ತಲೆ ಎತ್ತಿರುವ ಜಲ್ಲಿ ಕ್ರಷರ್‌ಗಳಿಂದ ಬೆಟ್ಟಗುಡ್ಡಗಳು ಕರಗಿ ಹೋಗುತ್ತಿವೆ, ಕೋಲಾರ ಜಿಲ್ಲೆಗೆ ಹೇಳಿ ಕೇಳಿ ಈ ಬೆಟ್ಟಗುಡ್ಡಗಳೇ ಆಸ್ತಿ, ಸಾಲು ಸಾಲು ಬೆಟ್ಟಗಳು ಈ ಜಿಲ್ಲೆಗೆ ಸೊಬಗಳನ್ನುಂಟು ಮಾಡುತ್ತವೆ. ಆದರೆ ಜಲ್ಲಿ ಮಾಫಿಯಾಗಳಿಂದಾಗಿ ಜಿಲ್ಲೆಯ ಪ್ರಕೃತಿ ಸಂಪತ್ತು ಹಾಳಾಗುತ್ತಿದೆ.
ಮಾಲೂರು ತಾಲೂಕು ಟೇಕಲ್ ಹಾಗು ಲಕ್ಕೂರು ಬಳಿ ಯತೇಚ್ಛವಾಗಿ ಟಿಪ್ಪರ್ ಮತ್ತು ಲಾರಿಗಳು ಓಡಾಡುತ್ತವೆ ಬೆಳಗ್ಗೆ 5 ಗಂಟೆಗೆ ಶುರುವಾಗುವ ಟಿಪ್ಪರ್‌ಗಳ ಓಡಾಟ ರಾತ್ರಿ 10 ಆದರೂ ನಿಲ್ಲುವುದಿಲ್ಲ, ನೂರಾರು ಟಿಪ್ಪರ್ ಹಾಗು ಲಾರಿಗಳು ವಿಪರೀತವಾದ ತೂಕವನ್ನು ಹಾಕಿಕೊಂಡು ಓಡಾಡುವುದರಿಂದ ರಸ್ತೆಗಳು ಕಿತ್ತು ಹಾಳಾಗಿವೆ. ಟೇಕಲ್‌ನಿಂದ ಕೋಲಾರಕ್ಕೆ ಬರುವ ರಸ್ತೆ, ಟೇಕಲ್‌ನಿಂದ ಬಂಗಾರಪೇಟೆ ಕಡೆಗೆ ಹೋಗುವ ರಸ್ತೆಗಳನ್ನು ಎಷ್ಟೇ ದುರಸ್ತಿಪಡಿಸಿದರೂ ಮೂರು ತಿಂಗಳೂ ಉಳಿಯುವುದಿಲ್ಲ.
ಅಧಿಕಾರಿಗಳ ಜಾಣ ಕುರುಡು:
ಹಾಗೇಯೇ ನರಸಾಪುರ ಮತ್ತು ವೇಮಗಲ್ ಭಾಗದಲ್ಲಿಯೂ ಜಲ್ಲಿ ಕ್ರಷರ್‌ಗಳು ತಲೆ ಎತ್ತಿ ನಿಂತಿವೆ. ಜಲ್ಲಿಯನ್ನು ಹೊತ್ತು ಹೋಗುವ ಲಾರಿಗಳಿಂದಾಗಿ ವೇಮಗಲ್ ಮತ್ತು ನರಸಾಪುರ ಸುತ್ತಮುತ್ತಲ ರಸ್ತೆಗಳು ಹಾಳಾಗುತ್ತಿವೆ, ಕೋಟ್ಯಂತರ ರುಪಾಯಿ ಖರ್ಚು ಮಾಡಿ ರಸ್ತೆಗಳನ್ನು ಅಭಿವೃದ್ಧಿ ಮಾಡಿದರೂ ಆ ರಸ್ತೆಗಳು ಟಿಪ್ಪರ್ ಲಾರಿಗಳ ಹಾವಳಿಗೆ ಮೂರೇ ದಿನಕ್ಕೆ ಸಂಪೂರ್ಣವಾಗಿ ಹದಗೆಡುತ್ತಿವೆ. ಇತರೆ ವಾಹನಗಳು ಓಡಾಡದ ಸ್ಥಿತಿ ನಿರ್ಮಾಣವಾಗಿದೆ, ಇಷ್ಟೇಲ್ಲಾ ಅವ್ಯವಸ್ಥೆ ಕಣ್ಣುಂದೆ ಇದ್ದರೂ ಅಧಿಕಾರಿಗಳು ಈ ಭಾಗದಲ್ಲಿ ಯಾವುದೇ ಕ್ರಮ ಕೈಗೊಳ್ಳದೇ ಮೌನವಾಗಿದ್ದಾರೆ.
ರಸ್ತೆಗುಂಡಿ ನೆಪ ಹೇಳಿ ಕೈಕೊಟ್ಟ ಬಸ್ಸುಗಳು; ಊರ ಮಂದಿಯಿಂದಲೇ ರಸ್ತೆ ರಿಪೇರಿ!
ಒಂದೊಂದಾಗಿ ಗುಡ್ಡಗಳು ನೆಲಸಮ:
ಇದೇ ರೀತಿ ಮುಳಬಾಗಿಲು ತಾಲೂಕು ಆವಣಿ ಸಮೀಪವೂ ಬೆಟ್ಟಗುಡ್ಡಗಳು ನಾಶವಾಗುತ್ತಿವೆ. ಗ್ರಾಮೀಣ ರಸ್ತೆಗಳು ಕೇಳುವವರಿಲ್ಲದಂತಾಗಿದೆ, ಆರ್‌ಟಿಓ ಮತ್ತು ಕಂದಾಯ ಹಾಗು ಗಣಿಗಾರಿಕೆ ಇಲಾಖೆ ಅಧಿಕಾರಿಗಳ ವಿರುದ್ಧ ಜನ ಬಾಯಿಗೆ ಬಂದಂತೆ ಮಾತಾಡಿಕೊಳ್ಳುತ್ತಾರೆ ಆದರೂ ಅಧಿಕಾರಿಗಳು ತಲೆ ಕೆಡಿಸಿಕೊಳ್ಳುತ್ತಿಲ್ಲ. ಜಲ್ಲಿಗಾಗಿ ಬೆಟ್ಟಗಳಲ್ಲಿರುವ ಬಂಡೆಗಳನ್ನು ಸಿಡಿಸುವುದರಿಂದ ಅಕ್ಕಪಕ್ಕದಲ್ಲಿರುವ ಮನೆಗಳಿಗೂ ಶಬ್ದ, ಕೆಲ ಮನೆಗಳು ಈ ಶಬ್ದ ಮತ್ತು ಭೂಮಿ ನಡುಕವುಂಟಾಗಿ ಬಿರುಕು ಬಿಟ್ಟಿವೆ.
ಧೂಳಿನಿಂದಾಗಿ ಬೆಳೆಗಳು ನಾಶ
ಇನ್ನು ಜಲ್ಲಿ ಕ್ರಷರ್‌ನಿಂದ ಎದ್ದೇಳುವ ಧೂಳಿನಿಂದ ಸುತ್ತಮುತ್ತ ವಾಸಿಸುವ ಜನ ಆಸ್ತಮಾ ಮುಂತಾದ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ರೈತರ ತೋಟದ ಬೆಳೆಗಳು ಮತ್ತು ಹೊಲಗಳಿಗೆ ಧೂಳು ಆವರಿಸಿಕೊಂಡು ಬೆಳೆಗಳೂ ಏಳಿಗೆ ಆಗದಂತೆ ಆಗಿದೆ, ಹಿಪ್ಪು ನೇರಳೆ ಮತ್ತು ಟೊಮೆಟೋ ಅಂತಹ ವಾಣಿಜ್ಯ ಬೆಳೆಗಳನ್ನು ಬೆಳೆಯುವುದು ಅಸಾಧ್ಯವಾಗಿದೆ.ಈ ಜಲ್ಲಿ ಕ್ರಷರ್‌ಗಳ ಹಾವಳಿಯಿಂದಾಗಿ ರೈತರೂ ರೋಸಿ ಹೋಗಿದ್ದಾರೆ.
ಜಲ್ಲಿ ಕ್ರಷರ್ ವ್ಯವಹಾರಗಳಲ್ಲಿ ದೊಡ್ಡ ದೊಡ್ಡ ತಲೆಗಳೇ ಇರುವುದರಿಂದ ಹಳ್ಳಿಗಳ ಅಮಾಯಕ ಜನ ಏನೂ ಮಾಡಲಾರದ ಸ್ಥಿತಿ ಇದೆ, ಎಷ್ಟೇ ಹೋರಾಟ ಮಾಡಿದರೂ ಅಧಿಕಾರಿಗಳು ಈ ಮಾಫಿಗಳ ವಿರುದ್ಧ ಕ್ರಮ ಜರುಗಿಸುವ ಸ್ಥಿತಿ ಇಲ್ಲ.
ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಜಲ್ಲಿ ವಹಿವಾಟಿಗೆ ಮರುಜೀವ: ಈ ಹಿಂದೆ ಜಿಲ್ಲೆಯಲ್ಲಿದ್ದ ಜಿಲ್ಲಾಧಿಕಾರಿ ಜೆ.ಸತ್ಯವತಿ ಅವರು ಜಲ್ಲಿ ಮಾಫಿಯಾಗಳಿಗೆ ಬಿಸಿ ಮುಟ್ಟಿಸಿ ಕೆಲವರಿಗೆ ಕೋಟ್ಯಂತರ ರುಪಾಯಿ ದಂಡ ಹಾಕಿದ್ದರು. ಆದರೆ ಈಗ ಜಿಲ್ಲೆಯಲ್ಲಿ ಮತ್ತೆ ಜಲ್ಲಿ ವಹಿವಾಟು ಜೋರಾಗಿದ್ದು ಸಾರ್ವಜನಿಕರಲ್ಲಿ ಒಂದು ರೀತಿಯ ಆತಂಕ ಹುಟ್ಟಿದೆ.
