ರಸ್ತೆ ಸುರಕ್ಷತಾ ಸಮಿತಿ ಸಭಾ ನಡಾವಳಿಗಳು ಇನ್ನೂ ಸಿದ್ಧವಾಗಿಲ್ಲ! ದೃಢೀಕರಣ ಪತ್ರ ಕೊಡಲು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಮೀನ ಮೇಷ ಸಭೆ ಮುಗಿದು ವಾರವಾಯ್ತು. 

ಚಿತ್ರದುರ್ಗ (ಸೆ.28) : ನಗರದಲ್ಲಿ ಕೈಗೆತ್ತಿಕೊಳ್ಳಲಾದ ರಸ್ತೆ ಅಭಿವೃದ್ಧಿ ಕಾಮಗಾರಿಗಳು ಹಾಗೂ ಡಿವೈಡರ್‌ ಅಳವಡಿಕೆ ನಿಯಮಾನುಸಾರವಿದೆಯೇ ಎಂಬುದಕ್ಕೆ ದೃಢೀಕರಣ ಪತ್ರ ಸಲ್ಲಿಸಲು ಜಿಲ್ಲಾಧಿಕಾರಿ ಕವಿತಾ ಮನ್ನಿಕೇರಿ ಸೂಚನೆ ನೀಡಿ ವಾರಗಳೇ ಕಳೆದರೂ ಈ ಸಂಬಂಧ ಇನ್ನೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಂದ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ.

ರಸ್ತೆ ಮಧ್ಯೆ ಕಂದಕಕ್ಕೆ ಬಿದ್ದ ಬೈಕ್; ಸವಾರರಿಬ್ಬರ ದಾರುಣ ಸಾವು!

ಸೆ.21 ರಂದು ನಡೆದ ಜಿಲ್ಲಾ ಮಟ್ಟದ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಕನ್ನಡಪ್ರಭದಲ್ಲಿ ಬಂದ ಸರಣಿ ವರದಿಗಳ ಉಲ್ಲೇಖಿಸಿ ಮಾತನಾಡಿದ ಜಿಲ್ಲಾಧಿಕಾರಿ ಕವಿತಾ ಮನ್ನಿಕೇರಿ ಸರ್ಕಾರದ ನಿಯಮಾನುಸಾರ ಡಿವೈಡರ್‌ಗಳ ಅಳವಡಿಕೆ ಮಾಡಲಾಗಿದೆ ಎಂದು ಪ್ರಶ್ನಿಸಿದ್ದರು. ಇದಕ್ಕೆ ಉತ್ತರಿಸಿದ್ದ ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಇಂಜಿನಿಯರ್‌ ನಿಯಮಗಳ ಉಲ್ಲಂಘನೆ ಮಾಡಿಲ್ಲವೆಂದು ಸಮಜಾಯಿಷಿ ನೀಡಿದ್ದರು. ಬರೀ ಆಡು ಮಾತಿಗೆ ಒಪ್ಪದ ಜಿಲ್ಲಾಧಿಕಾರಿ ಈ ಬಗ್ಗೆ ದೃಢೀಕರಣ ಪತ್ರ ಸಲ್ಲಿಸುವಂತೆ ಸೂಚಿಸಿದ್ದರು. ಏಳು ದಿನಗಳಾದರೂ ಡಿಸಿಯವರಿಗೆ ದೃಢೀಕರಣ ಪತ್ರ ರವಾನೆಯಾಗಿಲ್ಲ.

ಸಭಾ ನಡಾವಳಿ ತಲುಪಿಲ್ಲ:

ದೃಢೀಕರಣ ಪತ್ರಕ್ಕೆ ಸಂಬಂಧಿಸಿ ಕನ್ನಡಪ್ರಭದೊಂದಿಗೆ ಮಾತನಾಡಿದ ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ ನಮಗಿನ್ನೂ ಸಭಾ ನಡಾವಳಿಗಳು(ಪ್ರೊಸೀಡಿಂಗ್‌್ಸ ) ತಲುಪಿಲ್ಲ. ನಡಾವಳಿಗಳು ತಲುಪಿದ ನಂತರ ಉತ್ತರಿಸಲಾಗುವುದು ಎಂದರು. ಜಿಲ್ಲಾ ಮಟ್ಟದ ರಸ್ತೆ ಸುರಕ್ಷತಾ ಸಮಿತಿಗೆ ಜಿಲ್ಲಾಧಿಕಾರಿಗಳು ಅಧ್ಯಕ್ಷರು ಹಾಗೂ ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಇಂಜಿನಿಯರ್‌ ಸದಸ್ಯ ಕಾರ್ಯದರ್ಶಿಗಳು. ಸಭೆಯ ಪ್ರೊಸೀಡಿಂಗ್‌್ಸ ಮಾಡಿ ನಂತರ ಅದನ್ನು ಜಿಲ್ಲಾಧಿಕಾರಿ ಸಹಿಗೆ ತಲುಪಿಸುವ ಜವಾಬ್ದಾರಿ ಸದಸ್ಯ ಕಾರ್ಯದರ್ಶಿಗಳದ್ದು. ನಡಾವಳಿಗಳಿಗೆ ಜಿಲ್ಲಾಧಿಕಾರಿಗಳು ಸಹಿ ಹಾಕಿದ ನಂತರ ಸಮಿತಿಯ ಎಲ್ಲ ಸದಸ್ಯರುಗಳಿಗೆ ಪ್ರೊಸೀಡಿಂಗ್‌್ಸನ ಒಂದು ಪ್ರತಿ ತಲುಪಿಸುವ ಜವಾಬ್ದಾರಿ ಅವರದ್ದೇ ಆಗಿರುತ್ತದೆ.

ವಾರಗಟ್ಟಲೆ ಟೈಂ ಬೇಕಾ:

ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸಭಾ ನಡಾವಳಿ ಪ್ರತಿ ಡಿಸಿ ಕಚೇರಿಯಿಂದ ಬಂದಿಲ್ಲವೆಂದರೆ ಯಾರು, ಯಾರಿಗೆ ಕಳಿಸಬೇಕು ಎಂಬ ಸಂದೇಹಗಳು ಮೂಡುತ್ತವೆ. ದೃಢೀಕರಣ ಪತ್ರವೆಂದರೆ ಅದ್ಹೇನು ತನಿಖಾ ವರದಿಯಲ್ಲ. ಕಾಮಗಾರಿಗಳ ಪರಿಶೀಲಿಸಿ ನೀಡುವ ಟಿಪ್ಪಣಿಯೇನಲ್ಲ. ಚಿತ್ರದುರ್ಗದ ನಗರದಲ್ಲಿ ಈಗಾಗಲೇ ಕೈಗೆತ್ತಿಕೊಂಡು ಮುಗಿಸಲಾದ ಡಿವೈಡರ್‌ ಗಳ ಅಳವಡಿಕೆ ಸರ್ಕಾರದ ನಿಯಮಾನುಸಾರ ಆಗಿದೆ ಎಂಬ ನಾಲ್ಕು ಸಾಲಿನ ಉತ್ತರ ಬರೆದು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಬೇಕಿದೆ. ಲೋಕೋಪಯೋಗಿ ಇಲಾಖೆ ಕಚೇರಿ ಕಟ್ಟಡ ಜಿಲ್ಲಾಧಿಕಾರಿ ಕಚೇರಿಯಿಂದ ಕೇವಲ ನೂರು ಮೀಟರ್‌ ಅಂತರದಲ್ಲಿದೆ. ನಾಲ್ಕು ಸಾಲಿನ ದೃಢೀಕರಣ ಪತ್ರ ನೀಡಲು ವಾರಗಟ್ಟಲೆ ಟೈಂ ಬೇಕಾ ?

Chitradurga: ಮಳೆ ಬಂದ್ರೆ ದುರ್ಗದ ಮಂದಿ ದೋಣಿ ನೆನಪು ಮಾಡ್ಕಂತಾರೆ!

ಬಸ್‌ ಉಜ್ಜಿಕೊಂಡು ಸಾಗಿದ ಗುರುತು:

ಈತನ್ಮಧ್ಯೆ ಕೆಎಸ್ಸಾರ್ಟಿಸಿ ಬಸ್‌ ನಿಲ್ದಾಣದ ಬಳಿ ಒನ್‌ ವೇನಲ್ಲಿ ಅಳವಡಿಸಲಾದ ಡಿವೈಡರ್‌ ಬಸ್‌ಗಳಿಗೆ ಹೊಸ ಸಮಸ್ಯೆ ತಂದೊಡ್ಡಿವೆ. ಕಿರಿದಾದ ಜಾಗದಲ್ಲಿ ತಡೆಗೋಡೆ ಕಟ್ಟಿದ್ದರಿಂದ ದಿನಾಲೂ ಮೂರ್ನಾಲ್ಕು ಬಸ್‌ಗಳು ಗೋಡೆಗೆ ಉಜ್ಜಿಕೊಂಡು ಹೋಗುತ್ತವೆ. ರಾತ್ರಿ ವೇಳೆಯಂತೂ ಈ ಡಿವೈಡರ್‌ ಪಕ್ಕ ಬಸ್‌ಗಳ ಓಡಿಸುವುದು ತುಂಬಾ ತ್ರಾಸದಾಯಕ. ನಮ್‌ ಸಮಸ್ಯೆ ಯಾರ ಬಳಿ ಹೇಳಿಕೊಳ್ಳಲಿ. ತಡೆಗೋಡೆಗಳ ಯಾರಾದರೂ ಗಮನಿಸಿದರೆ ಬಸ್‌ಗಳ ಉಜ್ಜಿಕೊಂಡು ಹೋಗಿರುವ ಗುರುತುಗಳು ಎದ್ದು ಕಾಣಿಸುತ್ತಿವೆ ಎಂದು ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ ಸಾರಿಗೆ ಸಂಸ್ಥೆ ಬಸ್ಸಿನ ಚಾಲಕರು.