Chitradurga: ಮಳೆ ಬಂದ್ರೆ ದುರ್ಗದ ಮಂದಿ ದೋಣಿ ನೆನಪು ಮಾಡ್ಕಂತಾರೆ!
ಚಿತ್ರದುರ್ಗದ ಹೊಸ ಸಿಸಿ ರಸ್ತೆಗಳಿಗೆ ಚರಂಡಿಗಳೇ ಇಲ್ಲ. ಮಳೆ ಬಂದ್ರೆ ಮೊಳಕಾಲುದ್ದ ನೀರು ನಿಲ್ಲುತ್ತೆ. ಮಳೆ ಬಂದಾಗ ನೀರು ಹರಿದು ಎಲ್ಲಿಗೆ ಹೋಗಬೇಕೆಂಬ ಹೊಸ ಸಮಸ್ಯೆ ಎದುರಾಗಿದೆ. ಹಾಗಾಗಿ ಜನ ಮಳೆ ಬಂದಿತೆಂದರೆ ದೋಣಿ ನೆನಪು ಮಾಡಿಕೊಳ್ಳುತ್ತಾರೆ.
ಚಿಕ್ಕಪ್ಪನಹಳ್ಳಿ ಷಣ್ಮುಖ
ಚಿತ್ರದುರ್ಗ (ಸೆ.25): ಚರಂಡಿ ಮಾಡದೆ ನೂರಾರು ಕೋಟಿ ರುಪಾಯಿ ಸುರಿದು ಚಿತ್ರದುರ್ಗದಲ್ಲಿ ಸಿಸಿ ರಸ್ತೆ ನಿರ್ಮಿಸಲಾಗಿದ್ದು, ಮಳೆ ಬಂದಾಗ ನೀರು ಹರಿದು ಎಲ್ಲಿಗೆ ಹೋಗಬೇಕೆಂಬ ಹೊಸ ಸಮಸ್ಯೆ ಎದುರಾಗಿದೆ. ಹಾಗಾಗಿ ಜನ ಮಳೆ ಬಂದಿತೆಂದರೆ ದೋಣಿ ನೆನಪು ಮಾಡಿಕೊಳ್ಳುತ್ತಾರೆ. ರಸ್ತೆ ಎಸ್ಟಿಮೇಷನ್ ಜೊತೆಗೆ ಒಂದೆರೆಡು ದೋಣಿಗಳ ಖರೀದಿಸಿ ಮಳೆಗಾಲಕ್ಕೆ ಬಳಸುವ ಅವಕಾಶ ಮಾಡಿಕೊಡಬೇಕಿತ್ತೆಂಬ ವ್ಯಂಗ್ಯದ ಮಾತುಗಳು ಜನರ ಬಾಯಿಂದ ತೇಲಿ ಬರುತ್ತಿವೆ. ಯಾವುದೇ ರಸ್ತೆ ಮಾಡುವಾಗ ಮೊದಲು ಡ್ರೈನೇಜ್‌ಗೆ ಆದ್ಯತೆ ನೀಡಲಾಗುತ್ತಿದೆ. ಸಿಸಿ ರಸ್ತೆ ಮಾಡಿದಾಗಲಂತೂ ಚರಂಡಿಗಳು ಇರಲೇಬೇಕು. ಸಿಸಿ ರಸ್ತೆಗಳಿಗೆ ನೀರನ್ನು ಹೀರಿಕೊಳ್ಳುವ ಸಾಮರ್ಥ್ಯ ಇರುವುದಿಲ್ಲ. ರಸ್ತೆ ಮೇಲೆ ಬಿದ್ದ ಮಳೆಯ ಪ್ರತಿ ಹನಿ ಕೂಡಾ ಹರಿದು ಚರಂಡಿ ಹುಡುಕಿಕೊಂಡು ಹೋಗುತ್ತದೆ. ಚರಂಡಿಯೇ ಇಲ್ಲವೆಂದಾದದಲ್ಲಿ ರಸ್ತೆಯ ಅಂಚಿನಲ್ಲಿಯೇ ಸಂಗ್ರಹವಾಗಿ ವಾಹನ ಸವಾರರು, ಪಾದಚಾರಿಗಳಿಗೆ ಇನ್ನಿಲ್ಲದ ಕಿರಿಕಿರಿಯಾಗುತ್ತದೆ. ಚಿತ್ರದುರ್ಗ ಪ್ರವಾಸಿ ಮಂದಿರದಿಂದ ಗಾಂಧಿ ವೃತ್ತದ ಕಡೆಗೆ ಅಲ್ಲಲ್ಲಿ ಚರಂಡಿ ಕಾಣಿಸುತ್ತಿದೆಯೇ ವಿನಹ ಅದು ವ್ಯವಸ್ಥಿತವಾಗಿಲ್ಲ. ಕೆಲವು ಕಡೆ ಎತ್ತರದಲ್ಲಿದ್ದರೆ, ಮತ್ತೆ ಕೆಲವು ಕಡೆ ಮುಚ್ಚಿಹೋಗಿದೆ. ಹಾಗಾಗಿ ಮಳೆ ನೀರು ಸರಾಗವಾಗಿ ಹರಿದು ಹೋಗುತ್ತಿಲ್ಲ. ರಸ್ತೆ ಮೇಲೆ ನಿಂತ ನೀರನ್ನು ಮತ್ತೆ ಬೊಗಸೆಯಲ್ಲಿ ತುಂಬಿ ಚರಂಡಿಗೆ ಸುರಿಯಲು ಕೂಲಿ ಆಳುಗಳ ನೇಮಕ ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ.
ಗಾಯತ್ರಿ ಕಲ್ಯಾಣ ಮಂಟಪದಿಂದ ಜೆಸಿಆರ್ ಕಡೆಗೆ ಹೋಗುವ ಮಾರ್ಗದ ಚರಂಡಿ ವ್ಯವಸ್ಥೆಯಂತೂ ಅದ್ಭುತ. ಸಂಗಮೇಶ್ವರ ಪ್ರಾವಿಜನ್ ಸ್ಟೋರ್, ಸಾಯಿಬಾಬ ದೇವಸ್ಥಾನದ ಮುಂಭಾಗದಲ್ಲಿ ಎಲ್ಲಿಯೂ ಚರಂಡಿ ಇಲ್ಲ. ಪಾವಗಡ ಬ್ಯಾಂಕ್ ಮುಂಭಾಗ ಇದ್ದಕ್ಕಿದ್ದಂತೆ ಚರಂಡಿ ಆರಂಭವಾಗುತ್ತದೆ. ಇಂಜಿನಿಯರ್ ಅದ್ಹೇಗೆ ಎಸ್ಟಿಮೇಷನ್ ಮಾಡುತ್ತಾರೋ, ಅವರಿಗೆ ಅದ್ಹೇಗೆ ಪೇಮೆಂಟ್ ಮಾಡುತ್ತಾರೋ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.
Chikkaballapur: ಭಾರೀ ಮಳೆಗೆ ಸೀತಾಫಲ ಭರ್ಜರಿ ಫಸಲು
ಮಳೆ ಬಂದಾಗ ನೀರು ಸರಾಗವಾಗಿ ಹೋಗಲು ಇಂಜಿನಿಯರ್‌ಗಳು ಮಾರ್ಗ ಮಾಡಿಲ್ಲ. ಬದಲಾಗಿ ನೀರೇ ಎಲ್ಲಿದೆ ಜಾಗ ಎಂದು ಹುಡುಕಿಕೊಂಡು ಹೋಗಬೇಕಾಗಿದೆ. ಜಿಲ್ಲಾ ಆಸ್ಪತ್ರೆ ಮುಂಭಾಗದಿಂದ ಪೆಟ್ರೋಲ್ ಬಂಕ್ ಪಕ್ಕ ಹೋಗುವ ಚರಂಡಿ ಅರ್ಧಕ್ಕೆ ನಿಂತಿದೆ. ಪ್ರಕಾಶ್ ಲಾಡ್ಜ್ ಮುಂಭಾಗದ ಹೋಟೆಲ್‌ಗಳಿಗೆ ಚರಂಡಿ ನೀರು ನುಗ್ಗುತ್ತಿದೆ. ಉದಯ ನರ್ಸಿಂಗ್ ಹೋಂ ನಂತರ ಹಳೇ ಚಿನ್ಮೂಲಾದ್ರಿ ಹೈಸ್ಕೂಲ್ ತಿರುವಿನಲ್ಲಿ ಚರಂಡಿ ಸರಾಗವಾಗಿರದೆ ಎಲ್ ಆಕಾರದಲ್ಲಿದೆ. ಜಯಪದ್ಮ ಬಸ್ ಮಾಲೀಕರ ಮನೆ ತಿರುವಿನಲ್ಲಿ ಮೇಲ್ಭಾಗದಿಂದ ಹರಿದು ಬರುವ ಚರಂಡಿ ನೀರಿಗೆ ಸರಾಗವಾಗಿ ಹೋಗುವ ವ್ಯವಸ್ಥೆ ಮಾಡಲಾಗಿಲ್ಲ. ಜೋರಾಗಿ ಮಳೆ ಬಂದಲ್ಲಿ ಬೋರ್ಗರೆವ ಚರಂಡಿ ನೀರು ನೇರವಾಗಿ ರಸ್ತೆಗೆ ನುಗ್ಗುತ್ತದೆ. ಹೇಸಿಗೆ, ಹೊಲಸು ನೀರಿನ ಮೇಲೆ ನಡೆಯುವ ಇಲ್ಲವೇ ವಾಹನ ಚಲಾಯಿಸುವ ಕರ್ಮ ದುರ್ಗದ ಜನರದ್ದಾಗುತ್ತದೆ.
ಭಾರಿ ಮಳೆಗೆ ಹೊಳೆಯಂತಾದ ರಸ್ತೆಗಳು: ಬೆಂಗಳೂರು ಟ್ರೋಲ್ ಮಾಡಿದವರು ಈಗೇನ್ ಅಂತಾರೆ
ರಸ್ತೆಯೆಂದರೆ ಅದೊಂದು ಕುಶಲ ಕಲೆ. ಪುಟ್‌ಪಾತ್, ಚರಂಡಿ, ವಿದ್ಯುತ್ ಕಂಬಗಳು ಎಲ್ಲವೂ ಇದ್ದು ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡುವಂತಿರಬೇಕು. ಚಿತ್ರದುರ್ಗದ ರಸ್ತೆಯಲ್ಲಿ ಎಲ್ಲವೂ ಮಸುಕಾಗಿ ಕಾಣಿಸುತ್ತಿವೆ. ಎಲ್ಲಿ ಹೇಗಿರಬೇಕೋ ಹಾಗೆ ಇಲ್ಲ. ವಿದ್ಯುತ್ ಕಂಬಗಳು ರಸ್ತೆ ಮೇಲಿವೆ, ರಸ್ತೆಗಳು ಮನೆ, ಅಂಗಡಿ ಗೋಡೆಗಳ ವರೆಗೆ ವಿಸ್ತರಿಸಿವೆ. ಚರಂಡಿ ನೀರು ರಸ್ತೆ ಮೇಲೆ ನುಗ್ಗುತ್ತದೆ. ಜಿಲ್ಲಾ ಕಾಂಗ್ರೆಸ್ ಕಚೇರಿ ಮುಂಭಾಗದ ಪುಟ್‌ಪಾತ್‌ನಲ್ಲಿ ಒಳಚರಂಡಿ ಬಾಯ್ದೆರೆದಿದ್ದು, ಅದನ್ನು ಸರಿಪಡಿಸುವ ಪ್ರಯತ್ನ ನಡೆದಿಲ್ಲ. ಮಳೆ ಬಂದಾಗ ಈ ಗುಂಡಿ ಏಮಾರಿಸುತ್ತದೆ. ಆಕಸ್ಮಾತ್ ಯಾರಾದರೂ ಜಾರಿ ಬಿದ್ದಲ್ಲಿ ಅಪಾಯಗಳು ಆಗುವುದಿಲ್ಲವೆಂಬುದಕ್ಕೆ ಗ್ಯಾರಂಟಿ ಇಲ್ಲ.